ದಾವಣಗೆರೆ (Davanagere): ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಯೋಗಾಚಾರ್ಯ ಡಾ|| ರಾಘವೇಂದ್ರ ಗುರೂಜಿಯವರಿಗೆ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ (ರಿ), ಮೈಸೂರು ವತಿಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತವಾಗಿ ಜೂನ್ 22, 2025 ರ ಭಾನುವಾರದಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ರಾಜ್ಯಮಟ್ಟದ ಯೋಗ ಸಮ್ಮೇಳನದಲ್ಲಿ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ನಾಡಿನ ಹಿರಿಯ ಯೋಗ ಗುರು, ಯೋಗ ತಜ್ಞ ಡಾ|| ರಾಘವೇಂದ್ರ ಗುರೂಜಿಯವರಿಗೆ “ಯೋಗ ರತ್ನಾಕರ” ಎಂಬ ಅತ್ಯುನ್ನತವಾದ ಬಿರುದು ಪ್ರದಾನ ಮಾಡಲಾಯಿತು.
ಯೋಗ ನಗರಿ ಮೈಸೂರಿನ ಕಲಾ ಮಂದಿರದಲ್ಲಿ ಯೋಗ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ನೀಡಿರುವ ಡಾ|| ರಾಘವೇಂದ್ರ ಗುರೂಜಿಯವರಿಗೆ ಸಮ್ಮೇಳನದ ಸರ್ವಾಧ್ಯಕ್ಷರು ಆದ ಪ್ರೊ|| ರಾಮಚಂದ್ರ ಜಿ. ಭಟ್ ಕೋಟೆಮನೆ, ವೇದ ವಿಜ್ಞಾನ ಗುರುಕುಲ ಬೆಂಗಳೂರು, ವೈದ್ಯ ಸಾಹಿತಿ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ|| ಎಸ್.ಪಿ. ಯೋಗಣ್ಣ, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ|| ಭಗವಾನ್ ಬಿ.ಸಿ., ಸಂಸ್ಥಾಪಕರು ಭಾರತೀ ಯೋಗಧಾಮದ ಡಾ|| ಕೆ.ಎಲ್. ಶಂಕರನಾರಾಯಣ ಜೋಯಿಸ್, ಭರತ ಯೋಗ ಗುರುಕುಲಂನ ಸಂಸ್ಥಾಪಕರಾದ ಭರತ್ ಶೆಟ್ಟಿ, ಮೈಸೂರು ವಿಶ್ವವಿದ್ಯಾನಿಲಯದ ಪ್ರೊ|| ಲೋಕನಾಥ್ ಎನ್.ಕೆ., ನಂಜನಗೂರು ಶಾಸಕ ದರ್ಶನ್ ಧೃವನಾರಾಯಣ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ. ನಂಜುಂಡಸ್ವಾಮಿ ಹಾಗೂ ಯೋಗ ಸಮ್ಮೇಳನದ ಪ್ರಧಾನ ಸಂಚಾಲಕರಾದ ಎನ್. ಅನಂತ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ‘ಯೋಗ ರತ್ನಾಕರ’ ಎಂಬ ಶ್ರೇಷ್ಠವಾದ ಬಿರುದನ್ನು ಪ್ರದಾನ ಮಾಡಲಾಯಿತು.
ರಾಜ್ಯಮಟ್ಟದ ದ್ವಿತೀಯ ಯೋಗ ಸಮ್ಮೇಳನದಲ್ಲಿ ಯೋಗಕ್ಷೇತ್ರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ, ಪರಂಪರೆಯನ್ನು ಮುನ್ನಡೆಸಲು ಬೇಕಾಗುವ ಹಲವು ಬೇಡಿಕೆಗಳನ್ನು ಮುಂದಿಟ್ಟು 5 ನಿರ್ಣಯಗಳನ್ನು ಈಡೇರಿಸುವಂತೆ ಸಮ್ಮೇಳನಾಧ್ಯಕ್ಷರು ಕರ್ನಾಟಕ-ಘನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
(1) ಯೋಗವನ್ನು ಒಳಗೊಂಡ ಅಧ್ಯಾತಿಕ ಕೇಂದ್ರ ಸ್ಥಾಪನೆ (2) ಯೋಗ ಶಿಕ್ಷಕರಿಗೆ ರಾಷ್ಟ್ರೀಯ ಹಾಗೂ ವೈಜ್ಞಾನಿಕವಾಗಿ ಯೋಗದ ಅರಿವು ಮೂಡಿಸುವ ತರಬೇತಿ (3) ಯೋಗದ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸ್ಥಾಪನೆಗೆ ಘನ ಸರ್ಕಾರಕ್ಕೆ ಪ್ರಸ್ತಾವನೆ (4) ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ (5) ಮೈಸೂರಿನಲ್ಲಿ ಯೋಗದ ಬೆಳವಣಿಗೆಗೆ ಕಾರಣೀಭೂತರಾದ ಶ್ರೀ ಕೃಷ್ಣಮಾಚಾರ್ಯರ ಪುತ್ಥಳಿ ಸ್ಥಾಪನೆಗೆ ಒತ್ತಾಯ.
ಇದೇ ಸಂದರ್ಭದಲ್ಲಿ ಯೋಗ ಸಾಹಿತಿ ಎನ್. ಅನಂತ ಬರೆದಿರುವ ಯೋಗಿರಾಜ ತಿರುಮಲೆ ಶ್ರೀ ಕೃಷ್ಣಮಾಚಾರ್ಯ ಕೃತಿಯ ಪರಿಷ್ಕøತ ಆವೃತ್ತಿ ಲೋಕಾರ್ಪಣೆಗೊಳಿಸಲಾಯಿತು.
Read also : Davanagere | ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ಸೌಲಭ್ಯ ಪಡೆಯಲು ಅವಕಾಶ
ಯೋಗಸಿರಿ ಸವಿಸಂಚಿಕೆಯು ಕೂಡಾ ಲೋಕಾರ್ಪಣೆಗೊಂಡಿತು. ಭಾರತಿ ಯೋಗ ಧಾಮ ಮೈಸೂರು ವತಿಯಿಂದ ಯೋಗದರ್ಶಿನಿ-ಯೋಗ ರೂಪಕವನ್ನು ಶಾಸ್ತ್ರೀಯವಾಗಿ ಪ್ರದರ್ಶಿಸಿದ ರೂಪಕ ಎಲ್ಲರ ಮನಸೊರೆಗೊಂಡಿತು.