ದಾವಣಗೆರೆ : ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಬೀದಿ ಬದಿಯ ಆಹಾರ ತಯಾರಿಕಾ ಮತ್ತು ಮಾರಾಟ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ಮತ್ತು ತಪಾಸಣೆ ಕಾರ್ಯ ಕೈಗೊಳ್ಳಲಾಯಿತು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರ ನಿರ್ದೇಶನದ ಮೇರೆಗೆ ಜಿಲ್ಲಾ ಅಂಕಿತಾಧಿಕಾರಿ ಡಾ.ಜೆಎಸ್.ನಾಗರಾಜ್ ಅವರ ನೇತೃತ್ವದಲ್ಲಿ 74 ಕ್ಕೂ ಅಧಿಕ ಬೀದಿ ಬದಿಯಲ್ಲಿ ಆಹಾರ ತಯಾರಿಕೆ ಮತ್ತು ಮಾರಾಟ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮತ್ತು ತಪಾಸಣೆ ನಡೆಸಿ ಜಾಗೃತಿ ಮೂಡಿಸಲಾಗಿದೆ ಎಂದು ಡಾ.ನಾಗರಾಜ್ ತಿಳಿಸಿದ್ದಾರೆ.
ದಾವಣಗೆರೆ, ಚನ್ನಗಿರಿ, ಜಗಳೂರು, ಹರಿಹರ, ಹೊನ್ನಾಳಿ ಸೇರಿದಂತೆ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಬೀದಿ ಬದಿಯ ವ್ಯಾಪಾರ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ 58 ವ್ಯಾಪಾರಿಗಳಿಗೆ ಹೊಸ ನೋಂದಣಿ ವಿತರಣೆ ಮಾಡಿ, ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟ ಕಾಪಾಡುವುದು, ನಿಷೇಧಿತ ಬಣ್ಣ ಬಳಕೆ ಮಾಡದಂತೆ, ರುಚಿ ಹೆಚ್ಚಿಸುವ ಕೃತಕ ರಾಸಾಯನಿಕ ಬಳಸದಂತೆ ಹಾಗೂ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
Read also : ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಸಿಎಂ,ಡಿಸಿಎಂಗೆ ಶಾಸಕ ಕೆ.ಎಸ್.ಬಸವಂತಪ್ಪ ಮನವಿ
ಆಹಾರ ತಯಾರಿಕೆ ಸ್ಥಳ ಮತ್ತು ಪರಿಸರ ನೈರ್ಮಲ್ಯವಾಗಿರಬೇಕು, ತಯಾರಿಕೆಗೆ ಸೇವನೆಗೆ ಶುದ್ಧವಾದ ನೀರು ಬಳಸಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು, ತಯಾರಿಸಿದ ಆಹಾರ ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಅರಿವು ಮೂಡಿಸಿ, ಕರಪತ್ರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆಹಾರ ಸುರಕ್ಷತೆಯ ಅಂಕಿತಾಧಿಕಾರಿ ಡಾ.ಜೆ.ಎಸ್.ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಹರಪನಹಳ್ಳಿ ಕೊಟ್ರೇಶಪ್ಪ, ನವೀನ್ ಕುಮಾರ್, ಕಿಫಾಯತ್ ಅಹಮದ್ ಹಾಗೂ ಗವಿರಂಗಪ್ಪ ಉಪಸ್ಥಿತರಿದ್ದರು.