ದಾವಣಗೆರೆ : ಅಂಗವಿಕಲರ ಬಗ್ಗೆ ಕರುಣೆ ತೋರಿಸದೆ ಅವಕಾಶ ಮತ್ತು ಸಮಾನ ಮನ್ನಣೆ ನೀಡಿ ಎಲ್ಲರನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರಣ್ಣವರ ಹೇಳಿದರು.
ನಗರದ ಹೊರವಲಯದಲ್ಲಿನ ಸಂಯೋಜಿತ ಪ್ರಾದೇಶಿಕ ಕೇಂದ್ರ [ದಿವ್ಯಾಂಗಜನ್] – CRC ಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಮೊದಲ ನೇರಳೆ ಮೇಳವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು,
ಕಲೆ, ಸಂಸ್ಕೃತಿ, ಕ್ರೀಡಾ ಪ್ರತಿಭೆಗಳು ಮತ್ತು ಅಂಗವಿಕಲ ವ್ಯಕ್ತಿಗಳ ಉದ್ಯಮಶೀಲತೆಯಲ್ಲಿ ಅವರ ವಿಶೇಷ ಸಾಮರ್ಥ್ಯಗಳನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು. ಯಾವುದೇ ವ್ಯಕ್ತಿಗೆ ಮಾನಸಿಕ ಅಥವಾ ದೈಹಿಕ ದೌರ್ಬಲ್ಯ ಇದ್ದರೂ ಇತರ ಅಗಾಧ ಕೌಶಲ್ಯ, ಮಾನಸಿಕವಾಗಿ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ. ಅವರ ಶಕ್ತಿ ಸಾಮರ್ಥ್ಯಗಳನ್ನು ಪ್ರಾಮಾಣಿಕವಾಗಿ ಗುರುತಿಸಿ, ಸರಿಯಾದ ಮನೋಭಾವದಿಂದ ನಿರ್ವಹಿಸಿದಲ್ಲಿ ಅದ್ವಿತೀಯ ಯಶಸ್ಸನ್ನು ಕಾಣುತ್ತಾರೆ. ಇಂತಹ ಅಭೂತಪೂರ್ವ ಸಾಧನೆ ಮಾಡಬೇಕೆಂದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಅದರಂತೆ ನಮ್ಮ ಗುರಿ ಸಹ ಉನ್ನತ ಮಟ್ಟದಲ್ಲಿರಬೇಕು. ವಿಕಲಚೇತನರು ಸಿಗುವಂತಹ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ತಮ್ಮ ಶಕ್ತಿ ಸಾಮರ್ಥ್ಯ ಇನ್ನಷ್ಟು ಬಲಪಡಿಸಿಕೊಳ್ಳಲು CRC ಸಹಕಾರಿಯಾಗಿದೆ. ತುಮಕೂರು ಜಿಲ್ಲೆಯವರಾದ ಶ್ರೀ ಕೆಂಪಾ ಹೊನ್ನಯ್ಯ ಕುರುಡುತನದಿಂದ ಬಳಲುತ್ತಿದ್ದರೂ ಪಶ್ಚಿಮ ಬಂಗಾಳದಲ್ಲಿ ಐಎಎಸ್ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಸ್ಮರಿಸಿದರು.
ಆದ್ದರಿಂದ ಪ್ರತಿಯೊಬ್ಬರೂ CRC ಯ ಸೌಲಭ್ಯಗಳು ಮತ್ತು ಯೋಜನೆಗಳನ್ನು ಬಳಸಿಕೊಂಡು ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕೆಂದು ಪ್ರೋತ್ಸಾಹಿಸಿದರು.
ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎಸ್. ನಟರಾಜ್ ಮಾತನಾಡಿ, ನೇರಳೆ ಬಣ್ಣವು ವಿಕಲಚೇತನರ ಘನತೆಯ ಸಂಕೇತವಾಗಿದೆ. ರಾಜ್ಯ ಸರ್ಕಾರದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಅವರು ವಿವರಿಸಿದ ಅವರು, ಸಂಯೋಜಿತ ಪ್ರಾದೇಶಿಕ ಕೇಂದ್ರದ (ಸಿಆರ್‌ಸಿ) ಒಂದೇ ಸೂರಿನಡಿ ವಿಕಲಚೇತನರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊದಗಿಸುವುದೇ ಇದರ ಸದುದ್ದೇಶವಾಗಿದೆ. ಈ ನೇರಳೆ ಕಾರ್ಯಕ್ರಮವು ವಿಕಲಚೇತನರನ್ನು ಗೌರವಿಸುತ್ತದೆ ಮತ್ತು ಅವರ ಸಾಮರ್ಥ್ಯಗಳನ್ನು ಬೆಳಕಿಗೆ ತರಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಇದೇ ರೀತಿಯ ನೇರಳೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಲ್ಲದೇ ಬೆಂಗಳೂರು ವ್ಯಾಪ್ತಿಯಲ್ಲಿ ಸಂಯೋಜಿತ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಕ್ರಮವಹಿಸಲಾಗುವುದು ಎಂದರು.
Read also : ದಾವಣಗೆರೆ | ಬೀದಿ ಬದಿ ವ್ಯಾಪಾರ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ-ತಪಾಸಣೆ
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ, ಅಂಗವಿಕಲ ವ್ಯಕ್ತಿಗಳಿಗೆ ಸಾಮರ್ಥ್ಯವಿದೆ ಆದರೆ ಅವಕಾಶಗಳಿಂದ ವಂಚಿತರಾಗಿ ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಪ್ರಸ್ತುತ ಇಂದಿಗೂ ಕೆಲವು ಅಂಗವಿಕಲರು ತಮ್ಮ ಅಂಗವೈಕಲ್ಯತೆಯನ್ನು ಮರೆಮಾಚಿ ಜೀವನ ನಡೆಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೋತ್ಸಾಹಿಸಬೇಕು. ಯಾವುದೇ ಒಬ್ಬ ವ್ಯಕ್ತಿ ಅಂಗವೈಕ್ಯತೆ ಹೊಂದಿದ್ದರೆ, ಮತ್ತೊಂದು ರೀತಿಯ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ಒಳಗೊಂಡಿರುತ್ತಾರೆ. ಉದಾಹರಣೆಗೆ ಪಂಡಿತ್ ಪುಟ್ಟರಾಜ ಗವಾಯಿ ಎಂದು ಸ್ಮರಿಸಿದರು.
ಅದೇ ರೀತಿ ಎಲ್ಲಾ ಅಂಗವಿಕಲರು ಸಹ ಸಮಾಜದಲ್ಲಿ ಗೌರವಯುತ ಜೀವನವನ್ನು ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಸಿಆರ್‌ಸಿ ನಿರ್ದೇಶಕಿ ಮಿನಾಕ್ಷಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಂಗವಿಕಲರ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಡಾ.ಕೆ.ಕೆ.ಪ್ರಕಾಶ್, ಎಸ್.ಎಸ್. ಆಸ್ಪತ್ರೆಯ ನರವಿಜ್ಞಾನಿ ಡಾ.ರಚಿತಾ ಹಾಗೂ ವಿಶೇಷಚೇತನ ಫಲಾನುಭವಿಗಳು, ಎನ್‌ಜಿಒಗಳು, ಪೋಷಕರು, ವಿವಿಧ ವಿಶೇಷ ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಉಚಿತ ಸಹಾಯಕ ಸಾಧನಗಳ ವಿತರಣೆ:
ಕಾರ್ಯಕ್ರಮಕ್ಕೆ ಒಂದು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, 85 ಫಲಾನುಭವಿಗಳಿಗೆ [36 ಅಂಗವಿಕಲರು ಮತ್ತು 49 ಹಿರಿಯ ನಾಗರಿಕರು] CRC-PMDK ಯಿಂದ ಉಚಿತ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿAದ ಸ್ಥಾಪಿಸಲಾದ ಅಂಗವಿಕಲರ ಪುನರ್ವಸತಿಗಾಗಿ ಬಳಸುವ ಸುಧಾರಿತ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಿದರು. ವಿಕಲಚೇತನರ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸುವ ಕಲಾಕೃತಿಗಳು, ಕರಕುಶಲ ವಸ್ತುಗಳು, ಆಹಾರ ಮಳಿಗೆಗಳು ಇತರೆ ಮಳಿಗೆ ಉದ್ಘಾಟಿಸಿ, ಕಲಾ ಪ್ರದರ್ಶನ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ವಿಕಲಚೇತನರಿಗಾಗಿ ವಿವಿಧ ಕ್ರೀಡಾ ಕೂಟ:
ಅಂಗವಿಕಲರಿಗಾಗಿ 100 ಮೀಟರ್ ಓಟ, 400 ಮೀಟರ್ ರಿಲೇ, ಸಾಫ್ಟ್ಬಾಲ್, ವೀಲ್‌ಚೇರ್ ರೇಸಿಂಗ್ ಮತ್ತು ಶಾರ್ಟ್ಪಟ್ ಸೇರಿದಂತೆ ಅನೇಕ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿಶೇಷ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹೆಚ್ಚಿನ ಸಾಧನೆ ಮಾಡಿದ ಅಂಗವಿಕಲರಿಗೆ ಸಿಆರ್‌ಸಿ ನಿರ್ದೇಶಕಿ ಶ್ರೀಮತಿ ಮಿನಾಕ್ಷಿ ಸ್ಪೂರ್ತಿದಾಯಕ ಹಿತ ನುಡಿಗನ್ನಾಡುವ ಮೂಲಕ ಹುರಿದುಂಬಿಸಿದರು.