ದಾವಣಗೆರೆ : ಕೇಂದ್ರ ಸರ್ಕಾರದ ಬೈಕ್ ಟ್ಯಾಕ್ಸಿ ಪರವಾದ ಧೋರಣೆಯ ವಿರುದ್ಧ ಧ್ವನಿಯೆತ್ತಲು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕರ್ನಾಟಕ ಚಾಲಕರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್. ಅರವಿಂದಾಕ್ಷ ಮಾತನಾಡಿ, ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ನೂತನ ಮಾರ್ಗಸೂಚಿ ಹೊರಡಿಸಿದ್ದು, ಇದು ಆಟೋ ಮತ್ತು ಕಾರುಚಾಲಕರ ಬದುಕಿಗೆ ಮಾರಕವಾಗಿದೆ. ಕೇಂದ್ರ ಸರ್ಕಾರವು ಕನಿಷ್ಠ ಜ್ಞಾನ ಇಲ್ಲದ ರೀತಿ ಬೈಕ್ ಟ್ಯಾಕ್ಸಿ ವಿಚಾರದಲ್ಲಿ ವರ್ತಿಸುತ್ತಿದ್ದು, ಒಂದು ವೇಳೆ ಬೈಕ್ ಟ್ಯಾಕ್ಸಿಗಳ ಸಂಚಾರ ಅಧಿಕೃತವಾಗಿ ರಾಜ್ಯಾದ್ಯಂತ ಹಾಗೂ ರಾಷ್ಟ್ರಾದ್ಯಂತ ಶುರುವಾದರೆ ಈ ರಾಷ್ಟ್ರದ ಕೋಟ್ಯಾಂತರ ಹಾಗೂ ಈ ನಾಡಿನ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು ದುಸ್ತರವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿ ಹೆಸರಿನಲ್ಲಿ ಬೈಕ್ ಟ್ಯಾಕ್ಸಿಗೆ ಉತ್ತೇಜನ ನೀಡುತ್ತಿರುವುದು ಸರಿಯಲ್ಲ. ಬೈಕ್ ಟ್ಯಾಕ್ಸಿ ಬದಲು ದ್ವಿಚಕ್ರವಾಹನದಲ್ಲಿ ಊಟ, ಉಪಹಾರ ವಿತರಣೆ, ಔಷಧಿ, ತರಕಾರಿ, ನೀರಿನ ಸರಬರಾಜು ಸೇರಿದಂತೆ ಈ ತರಹದ ಸೇವೆಗೆ ಉತ್ತೇಜನ ನೀಡಲಿ. ಅದು ಬಿಟ್ಟು ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿ, ಉದ್ಯೋಗ ಸೃಷ್ಟಿ ಮಾಡುವ ಭರದಲ್ಲಿ ದೇಶದ ಹಾಗೂ ರಾಜ್ಯದ ಕೋಟ್ಯಾಂತರ ಚಾಲಕರ ಬದುಕುಗಳ ಆರ್ಥಿಕ ಭದ್ರತೆಯನ್ನು ಕಿತ್ತೆಸೆಯುವಂತಹ ಕೆಲಸ ಮಾಡುತ್ತಿರುವುದು ತರವಲ್ಲ ಎಂದರು.
Read also : ಮಹಾಜ್ಞಾನಿ ವಚನಕಾರ, ಶಿವಶರಣ ಹಡಪದ ಅಪ್ಪಣ್ಣ
ಕೇಂದ್ರ ಸರ್ಕಾರವು ಸಹಕಾರ ಟ್ಯಾಕ್ಸಿ ಎಂಬ ಯೋಜನೆಯನ್ನು ಶೀಘ್ರದಲ್ಲೇ ಓಲಾ ಮತ್ತು ಉಬರ್ ಕಂಪನಿಗಳಿಗೆ ಸರಿಸಮನಾಗಿ ಆರಂಭಿಸಲಿದ್ದು, ಕರ್ನಾಟಕ ಚಾಲಕರ ಒಕ್ಕೂಟ ಇದನ್ನು ಸ್ವಾಗತಿಸುತ್ತದೆ. ಆದರೆ ಸಹಕಾರ ಟ್ಯಾಕ್ಸಿ ಯೋಜನೆಯಡಿ ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿಗೂ ಸಹ ಅನುಮತಿ ನೀಡುವುದನ್ನು ನಮ್ಮ ಒಕ್ಕೂಟ ವಿರೋಧಿಸುತ್ತದೆ. ಆದ್ದರಿಂದ ತಾವು ಈ ಬಗ್ಗೆ ಕೇಂದ್ರದ ಗಮನಕ್ಕೆ ತರಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ, ದಾವಣಗೆರೆ ಜಿಲ್ಲಾಧ್ಯಕ್ಷರಾದ ಪಿ.ಬಿ. ಅಂಜುಕುಮಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕಾರ್ಯಾಧ್ಯಕ್ಷ ಜಯರಾಂ, ಕಾರ್ಯದರ್ಶಿ ವೀರೇಶ್, ಸಹಕಾರ್ಯದರ್ಶಿ ಗಂಗಾಧರ್, ಕಾರ್ಯದರ್ಶಿ ಶಿವಯೋಗಿ, ದಾ.ಹ. ಶಿವಕುಮಾರ್, ಗುರುರಾಜ್ ಎನ್., ಸಂತೋಷ್, ಚನ್ನಗಿರಿ ತಾಲೂಕು ಗೌರವಾಧ್ಯಕ್ಷ ಅಣ್ಣಪ್ಪ, ತಾಲೂಕು ಅಧ್ಯಕ್ಷ ಪೃಥ್ವಿ, ಪ್ರಧಾನ ಪ್ರಧಾನ ಕಾರ್ಯದರ್ಶಿ ಸಾಧಿಕ್, ಮಧುಪೂಜಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.