ಹಾಲಿ ಶಾಸಕರ ಸ್ವಗ್ರಾಮದಲ್ಲಿಯೇ ಪ್ರಜಾಪ್ರಭುತ್ವವನ್ನು ಅಸ್ಪೃಶ್ಯತೆಯ ಕಗ್ಗತ್ತಲಲ್ಲಿ ಕೂರಿಸಲಾಗಿದೆ….
ಬೆನಕನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಿರಗಂಟಿಯೊರ್ವನ ಹೆಂಡತಿ ಗ್ರಾಮ ಪಂಚಾಯತಿಯ ಅಧ್ಯಕ್ಷಣಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪವಾಡವಾದರೆ..
ಪರಿಶಿಷ್ಟ ಜಾತಿಯವಳೊಬ್ಬ ಅಧ್ಯಕ್ಷಣಿಯ ಸ್ಥಾನದಲ್ಲಿ ಕೂತಾಗ ಅವಳೊಂದಿಗೆ ಗ್ರಾಮ ಸಭೆಯಲ್ಲಿ ಭಾಗವಸಿ ಕೂರುವುದೇಗೆ ಎಂದು ಸತತವಾಗಿ ಮೂರೂ ಗ್ರಾಮ ಸಭೆಗಳಿಗೆ ಹಾಜರಾಗದೇ ಮತ್ತು ಗ್ರಾಮ ಪಂಚಾಯಿತಿಯ ಯಾವ ಕೆಲಸ ಕಾರ್ಯ ಮತ್ತು ಹಕ್ಕುಗಳನ್ನು ಚಲಾಯಿಸಲು ಅವಕಾಶಗಳನ್ನು ಮಾಡಿಕೊಡದೆ ಪಂಚಾಯತ್ ರಾಜ್ ನ ಕಾನೂನು ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡು ಪ್ರಜಾ ಪ್ರಭುತ್ವವನ್ನೆ ಜಾತಿ ಸಂಕೊಲೆಯ ಕಗ್ಗತ್ತಲಲ್ಲಿ ಕೂರಿಸುವ ಈ ಜಾತಿವಾದಿ ಇತರ ಗ್ರಾಮ ಪಂಚಾಯತಿಯ ಸದಸ್ಯರುಗಳನ್ನು ಜಾತಿವಾದಿಗಳೆನ್ನದೆ, ಅಸ್ಪೃಶ್ಯತೆಯ ಆಚರಣೆಯ ರೂವಾರಿಗಳನ್ನೆದೆ ಏನನ್ನಬೇಕು???
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಬೆನಕನಹಳ್ಳಿ ಗ್ರಾಮ ಇದು ಅಸಲಿಗೆ ಪ್ರಸ್ತುತ ಜನಪ್ರಿಯ ಶಾಸಕರು ಎಂದೆನಿಸಿಕೊಳ್ಳುವ ಡಿ.ಜಿ ಶಾಂತನಗೌಡರ ಸ್ವ-ಗ್ರಾಮ. ಈ ಗ್ರಾಮ ಪಂಚಾಯತಿಯಲ್ಲಿ ನೀರಗಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್. D ತಂದೆ ದುರುಗಪ್ಪ AK ಎಂಬುವರ ಪತ್ನಿ AK ರೇಷ್ಮಾ ಗಣೇಶ್ ಎಂಬ ಗ್ರಾಮ ಪಂಚಾಯತಿಯ ಸದಸ್ಯೆ 30 ಮೇ 2025 ರಂದು ಗಾಮ ಪಂಚಾಯಿತಿಯ ಚುನಾವಣೆಯಲ್ಲಿ ತೆರವಾದ ಗ್ರಾಂ.ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಸಮಗ್ರ ಗ್ರಾಮದ ಅಭಿವೃದ್ಧಿ ಮಾಡುವಲ್ಲಿ ನನಗೂ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಆಯ್ಕೆಯಾದ ಈ ಸಂದರ್ಭದಲ್ಲಿ ಬಹಳ ಸಂತಸ ವ್ಯಕ್ತಪಡಿಸುತ್ತಾರೆ. ಆದರೆ ಈ ಸಂತೋಷ ಬಹಳ ದಿನ ಉಳಿಯುವುದಿಲ್ಲ.
ಈ ನೂತನ ಅಧ್ಯಕ್ಷಣಿ
- 1) ಮಳೆ ಎತ್ತೆಚ್ಚವಾಗಿ ಬೀಳುತ್ತಿರುವುದರಿಂದ ಗ್ರಾಮದ ಚರಂಡಿಗಳು ಊಳೆತ್ತದೆ ಗಬ್ಬು ನಾರುತ್ತಿವೆ ಹಾಗಾಗಿ ಪದಗ್ರಹಣವಾದ ಬಳಿಕ ಗ್ರಾಮದ ಎಲ್ಲಾ ಕಾಲುವೆ ಮತ್ತು ರಾಜ್ ಕಾಲವೆಗಳನ್ನು ಊಳೆತ್ತಿಸಿ ಸ್ವಚ್ಛ ಗ್ರಾಮವನ್ನಾಗಿ ಮಾಡುವುದು
- 2) ದಲಿತರ ಪಾಲಿಗೆ ಮುಳ್ಳಾಗಿರುವ BSNL ಜಾಗದ ದುರಸ್ಥಿಯ ಕಾರ್ಯದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವುದು
- 3) ಸರ್ಕಾರದಿಂದ ಬಂದಂತಹ ಕಾಗದ ಪತ್ರಗಳನ್ನು ಓದಿ ಹೇಳುವುದು
- 4) ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ವಿಚಾರಣೆ ಮಾಡುವುದು
- 5) ಗ್ರಾಮ ಪಂಚಾಯಿತಿಯ ಜಮಾ-ಖರ್ಚಿನ ಅನುಮೊದನೆ ನೀಡುವುದು
- 6) ಪರಿಶಿಷ್ಟ ಪಂಗಡದ ಹೊಳೆ ಮೆಟ್ಲಿಂಗ್
- 7) ಗ್ರಾಮದ ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ದುರಸ್ತಿಯಲ್ಲಿರುವ ಹೈ ಮಾಸ್ಕ್ ದೀಪದ ಕಂಬಗಳ ದುರಸ್ತಿಕಾರ್ಯ ಮಾಡಿಸುವುದು
ಹೀಗೆ ಹತ್ತು ಹಲವು ಮಹತ್ವದ ಜನಪರ ಅಭಿವೃದ್ದಿಯ ಕಾರ್ಯಗಳನ್ನು ಮಾಡುವ ಕನಸನ್ನು ಹೊತ್ತಿರುವ ನೂನತ ಅಧ್ಯಕ್ಷಣಿಯು ಗ್ರಾಮ ಪಂಚಾಯಿತಿಯ PDO ರವಿಕುಮಾರ್ ಮತ್ತು ಕಾರ್ಯದರ್ಶಿ ರಮೇಶನಾಯ್ಕ್ ಇವರ ಸಲಹೆ ಮತ್ತು ಸಹಕಾರದಿಂದ ದಿನಾಂಕ 10/06/2025 ರಂದು ಒಂದು ಸಾಮಾನ್ಯ ಸಭೆಯನ್ನು ಕರೆಯುತ್ತಾರೆ, ದುರಂತ ಅಂದ್ರೆ ಈ ಪರಿಶಿಷ್ಟ ಜಾತಿಯವಳೊಬ್ಬ ಅಧ್ಯಕ್ಷಣಿಯಾಗಿರುವುದು ಸಹಿಸಲಾಗದೆ ಮತ್ತು ಜಾತಿ ಮೈಲಿಗೆಯ ಮನೋಭಾವದಿಂದ ನೂತನ ಅಧ್ಯಕ್ಷಣಿಯು ಕರೆದ ಸಭೆಗೆ ಸುಮಾರು 8 ಜನ ಸದಸ್ಯರುಗಳು ಉಪಾಧ್ಯಕ್ಷರೂ ಸೇರಿದಂತೆ ಗೈರುಹಾಜರಾಗಿ ಕೊರಂ ಬರದಂತೆ ನೋಡಿಕೊಂಡು ಸಭೆಯು ಯಶಸ್ವಿಯಾಗದಂತೆ ತಡೆದು ಅಸ್ಪೃಶ್ಯತೆಯ ಆಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಾರೆ.
ಇದನ್ನ ಮನಗಂಡು ಮನನೊಂದ ನೂತನ ಅಧ್ಯಕ್ಷಣಿ AK ರೇಷ್ಮಾ ಗಣೇಶ್ ಮತ್ತೆ ದಿನಾಂಕ 12/06/2025 ರಂದು ಎರಡನೇ ಸಲ ಸಾಮನ್ಯ ಸಭೆಯನ್ನು ಕರೆಯುತ್ತಾರೆ. ದುರಂತವೆಂದರೆ ಈ ಸಭೆಗೂ ಗೈರು ಹಾಜರಾಗಿ ನೂತನ ಅಧ್ಯಕ್ಷಣಿಯ ಹಕ್ಕು ಮತ್ತು ಕನಸಿಗೆ ತಣ್ಣಿರು ಎರೆಚುತ್ತಾರೆ. ಹೀಗೆ ಮುಂದು ವರೆದು ದಿನಾಂಕ 08/07/2025 ರಂದು ಮೂರನೇಯ ಸಾಮನ್ಯ ಸಭೆಯನ್ನು ಕರೆಯುತ್ತಾರೆ ಜಾತಿವಾದಿಗಳು ಈ ಸಭೆಯನ್ನು ಹಿಂದಿನಂತೆಯೇ ಗೈರು ಹಾಜರಾಗಿ ತಮ್ಮ ಅಸ್ಪೃಶ್ಯತೆಯ ಕ್ರೌರ್ಯವನ್ನು ಮೆರೆದು ಪ್ರಜಾಪ್ರಭುತ್ವವನ್ನು ಅಸ್ಪೃಶ್ಯತೆಯ ಕಗ್ಗತ್ತಲಲ್ಲಿ ಕೂಡುಹಾಕಿದ್ದಾರೆ…
ಹಾಲಿ ಶಾಸಕರೊಬ್ಬರ ಸ್ವಗ್ರಾಮದಲ್ಲಿಯೇ ಇಂತಹದ್ದೊಂದು ಪ್ರಜಾಪ್ರಭುತ್ವದ ಕರಾಳತೆ ವಿಜೃಂಬಿಸುತ್ತಿದ್ದರೆ ಇತ್ತ ತಾಲ್ಲೂಕಿನ ಉನ್ನತ ಅಧಿಕಾರಿಗಳಾದ CEO, ತಹಶಿಲ್ದಾರ್, ಉಪ ವಿಭಾಗಾದಿಕಾರಿಗಳು, ಜಿಲ್ಲಾಧಿಕಾರಿಗಳು ಅಷ್ಟೇ ಏಕೆ ಜನಪ್ರಿಯ ಶಾಸಕರೂ ಸಹ ಇತ್ತ ತಿರುಗಿ ನೋಡದೆ ಈ ಪ್ರಜಾಪ್ರಭುತ್ವದ ಅಸ್ಪೃಶ್ಯತೆಯ ಆಚರಣೆಗೆ ಕೈ ಜೋಡಿಸಿದಂತಿರುವುದು ದುರಂತವೇ ಸರಿ….
ಪ್ರಜಾಪ್ರಭುತ್ವದ ಮೊದಲ ಸಾರ್ವಜನಿಕ ಪವಿತ್ರ ಸೌಧ ಎಂದರೆ ಅದು ಗ್ರಾಮ ಪಂಚಾಯತಿಯೇ ಆಗಿರುತ್ತದೆ. ಇಂತಹ ಮೊದಲ ಪವಿತ್ರ ಪ್ರಜಾಸೌಧದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬಳು ಅಧ್ಯಕ್ಷಣಿಯಾಗಿ ಆಯ್ಕೆಯಾದ ಬಳಿಕ ಸತತವಾಗಿ ಮೂರು ಸಲ ಗ್ರಾಮ ಪಂಚಾಯಿತಿಯ ಸಾಮನ್ಯ ಸಭೆಗಳಿಗೆ ಹಾಜರಾಗದೆ, ಅಭಿವೃದ್ಧಿಯ ಕಾರ್ಯಗಳಿಗೆ ಕಡಿವಾಣಹಾಕಿ ಅಸ್ಪೃಶ್ಯತೆಯ ಆಚರಣೆಯನ್ನು ಆಚರಿಸಿ ಶಿಷ್ಟಾಚಾರವನ್ನು ಉಲ್ಲಂಘಿಸಿದ ಉಪಾಧ್ಯಕ್ಷರನ್ನೊಳಗೊಂಡ ಇತರ ಗೈರು ಹಾಜರಿಯ ಸದಸ್ಯರುಗಳಿಗೆ ಅಟ್ರಾಸಿಟಿ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಬೇಕು
ಮತ್ತು ಅವರುಗಳು ಅಲಂಕರಿಸಿರುವ ಗ್ರಾಮ ಪಂಚಾಯಿತಿಯ ಸ್ಥಾನಮಾನಗಳಿಂದ ಅವರನ್ನು ವಜಾಗೊಳಸಬೇಕು.
ಈ ಅಸ್ಪೃಶ್ಯತೆಯ ಆಚರಣೆಯ ಜಾತಿ ವ್ಯವಸ್ತೆಯ ಕೂಪದಲ್ಲಿ ನೊಂದಂತಹ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷಣಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಬೇಕು. ಮತ್ತು ಇನ್ನೂ ಹೆಚ್ಚಿನ ಕಾಲಾವಕಾಶಕ್ಕೆ ಅಧ್ಯಕ್ಷಣಿಯ ಸ್ಥಾನದಲ್ಲಿ ಮುಂದುವರೆದು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು.
ಮೋಹನ್ ಕುಮಾರ್ ಎಂ.ಸಿ
ವಕೀಲರು ಹೊನ್ನಾಳಿ