ಚಿತ್ರದುರ್ಗ : ಒಳ ಮೀಸಲು ಜಾರಿಗೆ ಸಿದ್ಧರಾಮಯ್ಯ ನೇತತ್ವದ ಕಾಂಗ್ರೆಸ್ ಸರಕಾರ ಬದ್ಧವಾಗಿದ್ದು, ಮಾದಿಗ ಸಮುದಾಯದ ಹೋರಾಟಗಾರರು ಪ್ರತಿಭಟನೆ, ಬಂದ್ ಹೇಳಿಕೆಗಳನ್ನು ಕೈ ಬಿಟ್ಟು ಆಗಸ್ಷ್ ತಿಂಗಳವರೆಗೆ ಕಾಯಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ’’ ಸಿಎಂ ಒಳ ಮೀಸಲು ಜಾರಿಗೆ ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾರೆ. ನ್ಯಾ.ನಾಗಮೋಹನದಾಸ್ ಆಯೋಗದ ವರದಿ ಕೈ ಸೇರುತ್ತಿದ್ದಂತೆ ನಾವು ಬೇಡವೆಂದರೂ ಜಾರಿ ಮಾಡಲು ಸಿದ್ಧರಾಗಿದ್ದಾರೆ. ಶೀಘ್ರ ಅನುಷ್ಟಾನ ಮಾಡುವಂತೆ ರಾಹುಲ್ ಗಾಂಧಿಯವರು ಸಹಾ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳು ಅನಗತ್ಯ. ಮೂರುವರೆ ದಶಕ ಹೋರಾಟ ಮಾಡಿದವರಿಗೆ ಇನ್ನೊಂದು ತಿಂಗಳು ಕಾಯಲು ಏನು ಕಷ್ಟ? ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ಜಾರಿಗಳಿಸುವ ಸಂಬಂಧ ಎಲ್ಲ ಸರಕಾರಗಳು ಸಹಕಾರ ನೀಡಿವೆ. ಕಾಂಗ್ರೆಸ್, ಬಿಜೆಪಿ, ದಳ ಎಂದು ರಾಜಕೀಯ ಮಾಡುವುದಕ್ಕೆ ಹೋಗುವುದಿಲ್ಲ. ಇದನ್ನ ಅನುಷ್ಠಾನಕ್ಕೆ ತರುವ ಸುವರ್ಣಾವಕಾಶ ಕಾಂಗ್ರೆಸ್‌ಗೆ ಸಿಕ್ಕಿದೆ. ಕಾಂಗ್ರೆಸ್ ಒಳ ಮೀಸಲಾತಿ ಜಾರಿಯ ನಿರೀಕ್ಷೆಯಲ್ಲೇ ಮಾದಿಗ ಸಮುದಾಯ ಕಾಂಗ್ರೆಸ್‌ಗೆ ಬೆಂಬಲಿಸಿದೆ. ಅದರ ಋಣ ತೀರಿಸುವ ಕೆಲಸ ಸಿದ್ಧರಾಮಯ್ಯ ಸರಕಾರ ಮಾಡಲಿದೆ ಎಂದರು.
ಒಳ ಮೀಸಲು ಜಾರಿಗೆ ಸರಕಾರ ಬದ್ಧವಾಗಿರುವಾಗ ಬೆಂಗಳೂರಿಗೆ ಹೋಗಿ ಮುತ್ತಿಗೆ ಹಾಕುವುದರಲ್ಲಿ ಅರ್ಥ ಇಲ್ಲ. ಸರಕಾರಕ್ಕೆ ಮುಜುಗರ ಮಾಡುವುದು ಬೇಡ. ಒಂದು ತಿಂಗಳು ಕಾಯೋಣ. ಒಂಬತ್ತು ತಿಂಗಳ ಕಾಲ ಎಲ್ಲ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಇಡಲಾಗಿದೆ. ಆಗಸ್ಟ್‌ನಲ್ಲಿ ಮಾದಿಗರಿಗೆ ಸ್ವತಂತ್ರ ಸಿಗಲಿದ್ದು, ಒಳಮೀಸಲಾತಿ ವಂಚಿತವಾಗಿದ್ದ ಮಾದಿಗ ಸಮುದಾಯಕ್ಕೆ ಎಲ್ಲ ರೀತಿಯ ಸೌಲಭ್ಯಗಳ ಸುರಿಮಳೆ ಆಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶರಣಪ್ಪ, ರವೀಂದ್ರ, ಮುಖಂಡ ಲಿಂಗರಾಜು ಇದ್ದರು.