ದಾವಣಗೆರೆ: ಇಲ್ಲಿನ ನಿಜಲಿಂಗಪ್ಪ ಬಡಾವಣೆ 1ನೇ ಮುಖ್ಯರಸ್ತೆಯ ಶೆಡ್ ಒಂದರಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ನೀಡಲಾದ ಅಕ್ಕಿ ಸಂಗ್ರಹಿಸಲಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಅಕ್ಕಿ ಮತ್ತು ರಾಗಿಯನ್ನು ವಶಪಡಿಸಿಕೊಂಡಿದ್ಧಾರೆ.
ದಾವಣಗೆರೆ ನಗರ ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್.ವಿಶ್ವನಾಥಗೌಡ, ಆಹಾರ ನಿರೀಕ್ಷಕ ಟಿ.ಮಂಜುನಾಥ, ಜೆ.ನಾಗೇಂದ್ರ ಇವರ ತಂಡವು ಬಡಾವಣೆ ಠಾಣೆ ಪೊಲೀಸರೊಂದಿಗೆ ಶುಕ್ರವಾರ ರಾತ್ರಿ ದಾಳಿ ಮಾಡಿ ಅಕ್ರಮ ಅಕ್ಕಿ ಹಾಗೂ ರಾಗಿ ದಾಸ್ತಾನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
Read also : Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ
ಈ ಸಂಬಂಧ ತನಿಖೆ ನಡೆಸುವಂತೆ ಆಹಾರ ನಿರೀಕ್ಷಕ ಟಿ.ಮಂಜುನಾಥ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶೆಡ್ ಗೋದಾಮಿನಿಂದ 89.77 ಕ್ವಿಂಟಾಲ್ ಅಕ್ಕಿ ಹಾಗೂ 6.80 ಕ್ವಿಂಟಾಲ್ ರಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.