ಮಲೇಬೆನ್ನೂರು : ಶಿವಮೊಗ್ಗ, ಹರಿಹರ ಮತ್ತು ಹೊಸಪೇಟೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 25ರ ಮಲೇಬೆನ್ನೂರು ಪಟ್ಟಣದ ಮೂಲಕ ಹಾದು ಹೋಗುವ ರಸ್ತೆ ಹದಗೆಟ್ಟಿದ್ದು, ಸಂಚಾರದ ದೃಷ್ಟಿಯಿಂದ ಸಕಲ ಜನತೆಗೆ ತೊಂದರೆಯಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆಯ ಕುರಿತು ಸ್ಥಳೀಯರು, ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಧ್ವನಿ ಎತ್ತಿದ್ದರೂ ಪರಿಹಾರ ಸಾಧ್ಯವಾಗಲಿಲ್ಲ.
ಪ್ರವಾಸೋದ್ಯಮಕ್ಕೆ ಮಹತ್ವಪೂರ್ಣವಾದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಆದ್ದರಿಂದ ವಾಹನ ಸವಾರರಿಗೆ ಗಂಭೀರ ತೊಂದರೆ ಉಂಟಾಗುತ್ತಿದೆ. ರಸ್ತೆ ತುಂಬಾ ಗುಂಡಿಗಳಿಂದ ಕಿರಿಕಿರಿ ಉಂಟಾಗಿ, “ರಸ್ತೆಯಲ್ಲಿ ಗುಂಡಿಯೂ ಅಥವಾ ಗುಂಡಿಯಲ್ಲಿ ರಸ್ತೆಯು?” ಎನ್ನುವಂತಹ ಸ್ಥಿತಿ ಉಂಟಾಗಿದೆ.
ಸ್ಥಳೀಯ ಜನಪ್ರತಿನಿಧಿಗಳಿಗೆ ಈ ಬಗ್ಗೆ ಅರಿವು ಇದ್ದರೂ ನಿರ್ಲಕ್ಷ್ಯ ತೋರುತ್ತಿರುವುದು ಅತ್ಯಂತ ವಿಷಾದಕರ. ನಿರಂತರ ಮಳೆಯಿಂದಾಗಿ ರಸ್ತೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಅಪಘಾತಗಳ ಪ್ರಮಾಣವೂ ಹೆಚ್ಚುತ್ತಿದೆ. ಈ ದುಸ್ಥಿತಿಯನ್ನು ಗಮನಿಸಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಲೇಬೆನ್ನೂರು ಪುರಸಭೆ ಸಮಿತಿಯ ಕಾರ್ಯಕರ್ತರು ಸಾಮಾಜಿಕ ಜವಾಬ್ದಾರಿ ಮೆರೆದು ಪುರಸಭೆ ಕಚೇರಿಯಿಂದ ಬೆಸ್ಕಾಂ ಕಛೇರಿ ವರೆಗೆ ರಸ್ತೆಯ ಗುಂಡಿಗಳಿಗೆ ಗ್ರಾವೆಲ್ ಹಾಕುವ ಮೂಲಕ ತಾತ್ಕಾಲಿಕ ಪರಿಹಾರ ಒದಗಿಸಿದ್ದಾರೆ. ಇದರಿಂದ ಸಂಚಾರದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ಸ್ಥಳೀಯರು ಈಗಲಾದರೂ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿರೀಕ್ಷೆಯಲ್ಲಿ ಇದ್ದಾರೆ.