ದಾವಣಗೆರೆ, ಆಗಸ್ಟ್ 08, 2025: ದಾವಣಗೆರೆ ನಗರದ ರಿಂಗ್ ರೋಡ್‌ನಲ್ಲಿರುವ ನವೋದಯ ಶಾಲೆ ಎದುರು ಇಂದು ಕೆಎಸ್ಆರ್ಟಿಸಿ ಬಸ್‌ಗೆ ಬೈಕ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ತಿಪ್ಪೇಸ್ವಾಮಿ (43) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಶಿವಣಿ ನಿವಾಸಿಯಾಗಿದ್ದ ತಿಪ್ಪೇಸ್ವಾಮಿ, ಆರ್‌ಟಿಒ ಕಚೇರಿಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಸೈಡ್‌ಗೆ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಬಸ್‌ನ ಗಾಲಿ ತಿಪ್ಪೇಸ್ವಾಮಿಯ ತಲೆಗೆ ಏರಿದ್ದು, ಹೆಲ್ಮೆಟ್ ಧರಿಸಿದ್ದರೂ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಕುರಿತು ತಕ್ಷಣವೇ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ದುರಂತದಿಂದ ತಿಪ್ಪೇಸ್ವಾಮಿಯ ಕುಟುಂಬ ಹಾಗೂ ಸಹೋದ್ಯೋಗಿಗಳಲ್ಲಿ ಆಘಾತ ಮೂಡಿದ್ದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.