ದಾವಣಗೆರೆ : ದಾವಣಗೆರೆಯ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (STPI) ಕೇಂದ್ರದಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಎಸ್ ಟಿಪಿಐ ಚಟುವಟಿಕೆಗಳಿಗೆ ಉತ್ತೇಜನ ಹಾಗೂ ಐಟಿಪಾರ್ಕ್ ಸ್ಥಾಪನೆ ಕುರಿತಂತೆ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿತ್ತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾನಿಲಯ, ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಎಂ.ಬಿ.ಎ., ಪಾಲಿಟೆಕ್ನಿಕ್ ಕಾಲೇಜುಗಳ ಪ್ರತಿನಿಧಿಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಮಹತ್ವದ ಸಭೆಯಲ್ಲಿ, ಎಸ್‌ಟಿಪಿಐ ನಿರ್ದೇಶಕರಾದ ಡಾ. ಸಂಜಯ್ ತ್ಯಾಗಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿ, ಮುಂದಿನ ಒಂದು ವರ್ಷದ ಕಾರ್ಯಚಟುವಟಿಕೆಗಳ ಕ್ಯಾಲೆಂಡರ್ ಬಗ್ಗೆ ಚರ್ಚೆ ನಡೆಸಿ ಅಧಿಕೃತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ , ಮೆಡಿಕಲ್ ಕಾಲೇಜುಗಳು ಹಾಗೂ ಆಸ್ಪತ್ರೆಗಳಲ್ಲಿ ಹೆಲ್ತ್ ಕೇರ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಕುರಿತು ಹಾಗೂ ವಿಶ್ವವಿದ್ಯಾಲಯ ಜೊತೆಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಬಗ್ಗೆ ಎಸ್ ಟಿಪಿಐ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಅದೇ ರೀತಿ ದಾವಣಗೆರೆಯಲ್ಲಿ ಡಾಟಾ ಸೆಂಟರ್ ಗಳನ್ನು ಸ್ಥಾಪಿಸುವ ಬಗ್ಗೆಯೂ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಸರ್ಕಾರಿ,ಅರೆ ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ತಾತ್ಕಾಲಿಕವಾಗಿ ಐಟಿ ಕಂಪನಿಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಯಿತು. ರಾಜ್ಯ ಸರ್ಕಾರದ ಐಟಿಬಿಟಿ ಮಂತ್ರಾಲಯದ ‘ಬಿಯಾಂಡ್ ಬೆಂಗಳೂರು’ ಕಲ್ಪನೆಯಡಿಯಲ್ಲಿ ಸಾಫ್ಟ್‌ವೇರ್ ಕಂಪನಿಗಳನ್ನು ಬೆಂಗಳೂರಿನಿಂದ ಹೊರಗಡೆ ಕರೆತರಲು ಕಂಪನಿಗಳನ್ನು ಉತ್ತೇಜಿಸುವ ನಿಯಮಗಳ ಬಗ್ಗೆಯೂ ಚರ್ಚೆ ನಡೆಯಿತು.
ಎಐ,ರೋಬೋಟಿಕ್ಸ್,ಕ್ವಾಂಟಮ್ ಕಂಪ್ಯೂಟರಿಂಗ್,ಡ್ರೋಣ್ ಪ್ರಯೋಗಾಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸುಸಜ್ಜಿತಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳಾದ ಜಿ.ಎಂ ಗಂಗಾಧರ ಸ್ವಾಮಿ , ಆಗಸ್ಟ್14 ರಂದು ದಾವಣಗೆರೆ ಜಿಲ್ಲೆಯ ಎಲ್ಲಾ ಬೃಹತ್,ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಉದ್ಯಮಿಗಳ ಸಭೆಯನ್ನು ಕರೆಯಲಾಗಿದೆ.ಈ ಸಭೆಯಲ್ಲಿ ಅಭಿಪ್ರಾಯ ಪಡೆದು ‘ವಿಜನ್ ದಾವಣಗೆರೆಗೆ’ ಕೈಜೋಡಿಸಲು ಆಹ್ವಾನಿಸಲಾಗುವುದು ಎಂದು ಸಭೆಗೆ ತಿಳಿಸಿದರು.
Read also : ದಾವಣಗೆರೆ|ರೈತನ 300 ಅಡಿಕೆ ಮರ ಕಡಿದ ದುಷ್ಕರ್ಮಿಗಳು
ದಾವಣಗೆರೆ ಜಿಲ್ಲೆಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ 30 ಸಾವಿರ ಚದುರಡಿ ಕಟ್ಟಡದಲ್ಲಿ ಮಲ್ಟಿಸ್ಕಿಲ್ಸ್ ಟ್ರೈನಿಂಗ್ ಸೆಂಟರ್ (MSTP) ಹಾಗೂ ಮಾಡಲ್ ಕೆರಿಯರ್ ಕೌನ್ಸಿಲ್ (MCC) ಸ್ಥಾಪನೆ ಮಾಡಲು ಸ್ಥಳ ನಿಗದಿಪಡಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಎಸ್ ಟಿಪಿಐ,ಕೇಡರ್ ಹಾಗೂ ಕಿಯೋನಿಕ್ಸ್ ನ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯ ನಂತರ ಸಂಸದರು ಎಸ್‌ಟಿಪಿಐಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಕಂಪನಿಗಳು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಭೇಟಿ ನೀಡಿ, ಉದ್ಯೋಗಿಗಳೊಂದಿಗೆ ನೇರ ಸಂವಾದ ನಡೆಸಿದರು. ಈ ವೇಳೆ ಎಸ್‌ಟಿಪಿಐ ದಾವಣಗೆರೆ ಅಧಿಕಾರಿಗಳು ಹಾಗೂ ಟೀಮ್ ವಿಷನ್ ಐಟಿ ದಾವಣಗೆರೆ ತಂಡದ ಸದಸ್ಯರು ಉಪಸ್ಥಿತರಿದ್ದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನ ಹಾಗೂ ಸಲಹೆಯಂತೆ ಎಸ್‌ಟಿಪಿಐ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ, ಈಗಾಗಲೇ ಎಸ್ ಟಿಪಿಐ ಬೇಡಿಕೆಯಂತೆ 2 ಎಕರೆ ಸೂಕ್ತ ಜಾಗದ ಜೊತೆಗೆ,ಲಗತ್ತಾಗಿ ಐಟಿ ಪಾರ್ಕ್ ಸ್ಥಾಪನೆಗಾಗಿ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸುವ ದಿಶೆಯಲ್ಲಿ ಪರಿಶೀಲನೆ ನಡೆಯಿತು.ಈ ಸಂದರ್ಭದಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ಹೆಚ್ಚುವರಿ ನಿರ್ದೇಶಕರಾದ ಸುಬೋದ್ ಹುನುಗುಂದ್, ಸೇಷಿ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳಾದ ಜಿ.ಎಂ. ಗಂಗಾಧರಸ್ವಾಮಿ ಅವರೊಂದಿಗೆ ಸೂಕ್ತ ಸ್ಥಳಗಳ ಪರಿಶೀಲನೆ ಮತ್ತು ವೀಕ್ಷಣೆ ಕೈಗೊಳ್ಳಲಾಯಿತು.