ನವದೆಹಲಿ/ದಾವಣಗೆರೆ.ಆ.12; ಮತಕಳವು ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ರಮಗಳ ವಿರುದ್ಧವಾಗಿ, ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ಘೋಷಣೆಗಳೊಂದಿಗೆ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಪಕ್ಷದ ಅಧಿನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಇಂಡಿಯಾ ಒಕ್ಕೂಟದ ಸಂಸದರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಈ ಪ್ರತಿಭಟನಾಕಾರರು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಚುನಾವಣಾ ಅಕ್ರಮ, ನಕಲಿ ಮತದಾರರ ಸೇರ್ಪಡೆ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಹಾಳು ಮಾಡುವ ಪ್ರಯತ್ನಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಚುನಾವಣೆ ಅಕ್ರಮಗಳನ್ನು ತಡೆದು ಪ್ರಜಾಪ್ರಭುತ್ವವನ್ನು ಕಾಪಾಡುವ ಹೋರಾಟ ಮುಂದುವರಿಯಲಿದೆ” ಎಂದು ಇಂಡಿಯಾ ಒಕ್ಕೂಟದ ಸಂಸದರುಗಳು ಘೋಷಿಸಿದರು.
ಈ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಗಾಂಧಿಯವರೊಂದಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಜೊತೆಗೂಡಿದರು.