ದಾವಣಗೆರೆ: ಕಾನೂನಿನ ಚೌಕಟ್ಟಿನೊಳಗೆ ಮಾನವೀಯ ನೆಲೆಗಟ್ಟಿನ ಆಧಾರದ ಮೇಲೆ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಹಾಗೂ ತಮ್ಮ ಸಾಹಿತ್ಯದ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸಿರುವ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಸಮಾಜಕ್ಕೆ ಊರುಗೋಲಾಗಿದ್ದಾರೆ ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 2025 ರ ಸಾಲಿನ “ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ” ರಾಜ್ಯ ಪ್ರಶಸ್ತಿಯನ್ನು ನ್ಯಾ.ಶಿವರಾಜ ವಿ ಪಾಟೀಲರಿಗೆ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಸಂದೇಶ ನೀಡಿದರು.
ಜನಿಸಿದ ಕುಗ್ರಾಮದಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ತನಕ ಅವರು ತಲುಪಿದ ಹಾದಿಯಲ್ಲಿ ಅವರು ಏರಿದ ಒಂದೊಂದು ಮೆಟ್ಟಿಲುಗಳು ಅವರ ಯಶೋಗಾಥೆಯನ್ನು ಪ್ರತಿಬಿಂಬಿಸುತ್ತವೆ. ಕಡು ಬಡತನ, ಕುಗ್ರಾಮದ ಪರಿಸರವನ್ನು ಮೆಟ್ಟಿ ನಿಂತು ಅವರು ತೋರಿದ ಅಸಾಮಾನ್ಯ ಸಾಧನೆ ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದರು.
ನ್ಯಾ.ಶಿವರಾಜ ವಿ ಪಾಟೀಲ ಮಾತನಾಡಿ, ಬಡತನವು ಶಾಪವಲ್ಲ ಬದಲಾಗಿ ಅದೊಂದು ವರ. ಶರಣ ಮಾಗನೂರು ಬಸಪ್ಪ ಹಾಗೂ ನನ್ನ ಜೀವನಕ್ಕೂ ಹಲವಾರು ಸಾಮ್ಯತೆಗಳಿವೆ. ಸಾಧನೆ ಮಾಡುವ ಛಲವಿದ್ದಾಗ ಮಾತ್ರ ಯಾವುದೇ ಸಮಸ್ಯೆಯನ್ನು ಎದುರಿಸಲು ಆತ್ಮವಿಶ್ವಾಸ ಬರುತ್ತದೆ. ಪರಿಶ್ರಮ, ಪ್ರಾಮಾಣಿಕತೆ, ವಿನಯ, ಛಲ, ಶಿಸ್ತು, ಮಾನವೀಯತೆ, ಅನುಕಂಪಗಳೇ ನನ್ನ ಜೀವನದ ಯಶಸ್ಸಿಗೆ ಕಾರಣವಾದ ಮೂಲಮಂತ್ರಗಳಾಗಿವೆ ಎಂದರು.
20 ನೇ ಶತಮಾನದ ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶರಣ ಮಾಗನೂರು ಬಸಪ್ಪ ಹೆಸರಿನ ಪ್ರಶಸ್ತಿಯು ನನ್ನ ಸಾಮಾಜಿಕ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಪ್ರಶಸ್ತಿಯೊಂದಿಗೆ ನೀಡಿದ ರೂ.50000/- ವನ್ನು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ದಾಸೋಹ ನಿಧಿಗೆ ಕಾಣಿಕೆಯಾಗಿ ನೀಡುವುದಾಗಿ ಘೋಷಿಸಿದರು.
ಅಧ್ಯಕ್ಷತೆ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಸಂಗಮೇಶ್ವರ ಗೌಡರು ವಹಿಸಿದ್ದರು. ಪ್ರಾಸ್ತಾವಿಕವಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿದರು.
ಶರಣ ಮಾಗನೂರು ಬಸಪ್ಪ ಅವರ ಜೀವನ ಮತ್ತು ಸಾಧನೆಯ ಕುರಿತಾಗಿ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಉಪನ್ಯಾಸ ನೀಡಿದರು.
Read also : ಒಳ ಮೀಸಲಾತಿ|ಲಾಭ ಪಡೆದುಕೊಳ್ಳಲು ಜ್ಞಾನದ ಗ್ರಹಿಕೆಯ ಶಕ್ತಿ ಬೆಳೆಸುವುದು ಮುಖ್ಯ
ನ್ಯಾ. ಶಿವರಾಜ ಪಾಟೀಲರನ್ನು ಅಭಿನಂದಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಎ.ಮುರಿಗೆಪ್ಪನವರು ಮಾತಾಡಿದರು. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ನ್ಯಾ. ಶಿವರಾಜ ಪಾಟೀಲರಿಗೆ ಅರ್ಪಿಸಿದ ಅಭಿನಂದನಾ ಪತ್ರವನ್ನು ವಾಚಿಸಿದರು. ಸಮಾರಂಭದ ವೇದಿಕೆಯಲ್ಲಿ ಎಂ.ಎಸ್.ಸುನಂದಾ ದೇವಿ, ಅನ್ನಪೂರ್ಣ ಶಿವರಾಜ ಪಾಟೀಲ ಇದ್ದರು.
ನ್ಯಾಯಾಧೀಶರುಗಳು, ನ್ಯಾಯವಾದಿಗಳು, ಈ ಹಿಂದೆ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಗೆ ಭಾಜನರಾಗಿದ್ದ ಡಾ.ಬಿ.ಟಿ.ಲಲಿತಾ ನಾಯಕ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಅಮರೇಶ್ ಯತ್ಗಲ್, ವಿಶ್ರಾಂತ ಪೋಲಿಸ್ ಅಧಿಕಾರಿ ಶಂಕರ ಬಿದರಿ, ಮಾಗನೂರು ಚಂದ್ರಶೇಖರ ಗೌಡರು, ಮಾಗನೂರು ಪ್ರಭುದೇವ್, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಬಿ.ದಿಳ್ಯಪ್ಪ, , ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಸುಮತಿ ಜಯಪ್ಪ, ಡಿ.ಎಂ.ಮಂಜುನಾಥಯ್ಯ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ನ ಎಸ್.ಆರ್.ಶಿರಗುಂಬಿ, ಪ್ರಾಂಶುಪಾಲೆ ಎ.ಎಸ್.ಕುಸುಮ, ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲಿನ ಶಿಕ್ಷಕರು, ಸಿಬ್ಬಂದಿವರ್ಗದವರು, ನ್ಯಾಯಮೂರ್ತಿ ಶಿವರಾಜ ಪಾಟೀಲರ ಅಭಿಮಾನಿ ವರ್ಗದವರು, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಿಷ್ಯವರ್ಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.