ದಾವಣಗೆರೆ ಅಗಸ್ಟ್ 29 : ಯಾವುದೇ ಹಂತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಬಾರದು ಮತ್ತು ಶಾಲೆ, ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿ.ಪಂ ಸಿಇಓ ಗಿತ್ತೆ ಮಾಧವ್ ವಿಠ್ಠಲ್‍ರಾವ್ ಸೂಚಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಶಾಲೆ, ಹಾಸ್ಟೆಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣೆ ಅತೀ ಮುಖ್ಯವಾಗಿದೆ. ಎಲ್ಲರೂ ಮಕ್ಕಳ ರಕ್ಷಣೆ ಮಾಡಲು ಮುಂದಾಗಬೇಕು. ಜೊತೆಗೆ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ. ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಸಹ ಅದನ್ನು ಬಳಸದೇ ಬೀಗಹಾಕಿರುವ ಬಗ್ಗೆ ಗಮನಿಸಲಾಗಿದೆ. ಆದರೆ ಮಕ್ಕಳು ಶೌಚಾಲಯಕ್ಕೆ ಬಯಲು ಪ್ರದೇಶವನ್ನೇ ಆಶ್ರಯಿಸುವ ಸ್ಥಿತಿಯನ್ನು ಅಲ್ಲಿನ ಶಿಕ್ಷಕರೇ ನಿರ್ಮಾಣ ಮಾಡಿರುತ್ತಾರೆ. ಎಲ್ಲಾ ಶಾಲೆಗಳಿಗೆ ನೀರಿನ ಪೂರೈಕೆ ಮಾಡಲು ಕಡ್ಡಾಯ ಮಾಡಲಾಗಿದೆ. ಆದರೂ ಸಹ ಮಕ್ಕಳು ಸ್ವಚ್ಚತೆ ಕಾಪಾಡುವುದಿಲ್ಲ ಎಂದು ಶೌಚಾಲಯಕ್ಕೆ ಬೀಗ ಹಾಕದೇ ಬಳಕೆಗೆ ಅವಕಾಶ ಮಾಡಿಕೊಡಬೇಕು. ಕೆಲವು ಶಾಲೆಗಳಲ್ಲಿ ಶೌಚಾಲಯಗಳು ಇದ್ದರೂ ಸಹ ಸರಿಯಾಗಿ ಬಳಕೆ ಮಾಡಿಕೊಳ್ಳದೇ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಡಿಡಿಪಿಐ ಅವರು ಸುತ್ತೋಲೆಯ ಮೂಲಕ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಶೌಚಾಲಯ ಬಳಸುವಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ ಅವರು ಮಾತನಾಡಿ ಎಲ್ಲ ಶಾಲೆ, ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಫಲಕ ಅಳವಡಿಸಬೇಕು. ಸಲಹಾ ಪೆಟ್ಟಿಗೆಗಳನ್ನು ಇಡಬೇಕು. ಅಂಗನವಾಡಿ ಕೇಂದ್ರಗಳು ಅಸುರಕ್ಷಿತ ಕಟ್ಟಡದಲ್ಲಿದ್ದರೆ ತಕ್ಷಣವೇ ಸರಿಪಡಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಇದ್ದು, ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.
ವಿಶೇಷ ಪಾಲನಾ ಯೋಜನೆ; ಹೆಚ್‍ಐವಿ ಸೋಂಕಿತ ಹಾಗೂ ಬಳಲುತ್ತಿರುವ ಬಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಮಾಸಿಕ ರೂ.2000 ಗಳ ಪ್ರೋತ್ಸಾಹಧನವನ್ನು ಮಕ್ಕಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಡಿ 406 ಫಲಾನುಭವಿಗಳಿದ್ದು 101 ಗಂಡು ಮತ್ತು 305 ಹೆಣ್ಣು ಮಕ್ಕಳಿದ್ದಾರೆ. ಈ ಯೋಜನೆಗೆ ರೂ.24.36 ಲಕ್ಷ ಬಿಡುಗಡೆಯಾಗಿದ್ದು ಡಿಬಿಟಿ ಮೂಲಕ ಜಮಾ ಮಾಡಲಾಗಿದೆ.
Read also : ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ
ಪ್ರಾಯೋಜಕತ್ವ ಯೋಜನೆ; ಮಕ್ಕಳ ಪಾಲನ ಸಂಸ್ಥೆಯಲ್ಲಿ ದಾಖಲಾಗಿದ್ದು, ನಂತರ ಕುಟುಂಬಕ್ಕೆ ಸೇರ್ಪಡೆಯಾದ ಮಕ್ಕಳು, ಮಕ್ಕಳ ಹೆತ್ತವರು ಜೈಲಿನಲ್ಲಿದ್ದರೆ, ಅನಾಥ ಮಕ್ಕಳು, ಏಕಪೋಷಕ ಮಕ್ಕಳಿಗೆ, ಮಿಷನ್ ವಾತ್ಸಲ್ಯ ಯೋಜನೆಯಡಿ 18 ವರ್ಷದೊಳಗೆ ಒಂದು ಭಾರಿ ಮಾತ್ರ 12 ತಿಂಗಳು ಈ ಯೋಜನೆಯಡಿ ಮಾಸಿಕ ರೂ.4000/-ದಂತೆ ಡಿ.ಬಿ.ಟಿ ಮುಖಾಂತರ ಮಕ್ಕಳ ಬ್ಯಾಂಕ್ ಖಾತೆಗೆ ಪ್ರೋತ್ಸಹಧನ ಜಮೆ ಮಾಡಲಾಗುತ್ತದೆ. 518 ಮಕ್ಕಳಿಗೆ ಏಪ್ರಿಲ್‍ನಿಂದ ಜೂನ್ ವರೆಗೆ ರೂ.61.52 ಲಕ್ಷ ಪಾವತಿಸಲಾಗಿದೆ.
ಪಿಎಂ ಕೇರ್ ಮತ್ತು ಸಿಎಂ ಬಾಲಸೇವಾ ಯೋಜನೆ; ಪಿಎಂ ಕೇರ್ ಪ್ರಾಯೋಜಕತ್ವದಡಿ ಕೋವಿಡ್ ಸಂದರ್ಭದಲ್ಲಿ ತಂದೆ, ತಾಯಿ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ ರೂ.4000 ಮತ್ತು ಸಿಎಂ ಬಾಲಸೇವಾ ಯೋಜನೆಯಡಿ ರೂ.3500 ಗಳನ್ನು ಮಾಸಿಕವಾಗಿ ಒಟ್ಟು 7500 ರೂ.ಗಳನ್ನು 18 ವರ್ಷ ತುಂಬುವವರೆಗೆ ಅಂತಹ ಮಕ್ಕಳಿಗೆ ನೀಡಲಿದ್ದು ಇಬ್ಬರು ಪೋಷಕರು ಇಲ್ಲದ ದಾವಣಗೆರೆ-1 ಹಾಗೂ ಹೊನ್ನಾಳಿಯಿಂದ 1 ಮಕ್ಕಳು ಈ ಸೌಲಭ್ಯ ಪಡೆಯುತ್ತಿದ್ದಾರೆ.
ಉಪಕಾರ ಯೋಜನೆ; ಈ ಯೋಜನೆಯಡಿ ನೊಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆ ಹೊಂದಿ 18 ವರ್ಷಗಳನ್ನು ಪೂರೈಸಿದವರಿಗೆ ಆರ್ಥಿಕವಾಗಿ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಲು 3 ವರ್ಷಗಳ ವರೆಗೆ ಮಾಸಿ ರೂ.5000 ಗಳಂತೆ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. 19 ಮಕ್ಕಳು ಜಿಲ್ಲೆಯಲ್ಲಿ ಈ ಸೌಲಭ್ಯ ಪಡೆಯುತ್ತಿದ್ದು ಮೊದಲ ತ್ರೈಮಾಸಿಕದಲ್ಲಿ ರೂ.95 ಸಾವಿರ ಅವರ ಖಾತೆಗೆ ಜಮಾ ಮಾಡಲಾಗಿದೆ.
ವಿಶೇಷ ದತ್ತು ಕೇಂದ್ರ; ದಾವಣಗೆರೆಯಲ್ಲಿ ವಿಶೇಷ ದತ್ತು ಕೇಂದ್ರಗಳು ಎರಡು ಘಟಕಗಳಿವೆ. ಎರಡು ಘಟಕಗಳಲ್ಲಿ ಒಟ್ಟು 25 ಮಕ್ಕಳಿದ್ದಾರೆ. 2 ಪರಿತ್ಯಕ್ತ, ಇಲಾಖೆಗೆ ಒಪ್ಪಿಸಿದ 6 ಮಕ್ಕಳು, ಪೋಷಣೆ ಮತ್ತು ರಕ್ಷಣೆ ಕೋರಿ 8 ಮಕ್ಕಳು, 2 ಮಕ್ಕಳನ್ನು ದತ್ತು ನೀಡಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯಲ್ಲಿರುವ ಪ್ರಕರಣ, ಪುನರ್ವಸತಿ ವಿವರ; ಜೂನ್‍ವರೆಗೆ ಇದ್ದ 71 ಪ್ರಕರಣಗಳಲ್ಲಿ 37 ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. 34 ಪ್ರಕರಣಗಳು ಬಾಕಿ ಇದ್ದು ಆದಷ್ಟು ಬೇಗ ಆದ್ಯತೆ ಮೇಲೆ ಇತ್ಯರ್ಥ ಮಾಡಲು ಸೂಚನೆ ನೀಡಲಾಯಿತು. ಬಾಲ ನ್ಯಾಯ ಮಂಡಳಿಯಲ್ಲಿ 51 ಬಾಕಿ ಸೇರಿ 13 ಹೊಸ ಪ್ರಕರಣ ಸೇರಿದಂತೆ 64 ರಲ್ಲಿ 6 ಪ್ರಕರಣ ಇತ್ಯರ್ಥ ಮಾಡಿದ್ದು 58 ಬಾಕಿ ಇರುತ್ತವೆ.
ಬಾಲ್ಯ ವಿವಾಹ, ಪೋಕ್ಸೋ; ಬಾಲ್ಯ ವಿವಾಹದಡಿ 31 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು ಇದರಲ್ಲಿ 29 ರಲ್ಲಿ ವಿವಾಹ ತಡೆದು 2 ರಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಪೋಕ್ಸೋದಡಿ ಮಾರ್ಚ್ ಅಂತ್ಯದವರೆಗೆ 244 ಪ್ರಕರಣಗಳಿದ್ದು ಜೂನ್ ವರೆಗೆ 30 ಸೇರಿ 271 ಪ್ರಕರಣಗಳಲ್ಲಿ 22 ಖುಲಾಸೆ, 1 ರಲ್ಲಿ ಶಿಕ್ಷೆಯಾಗಿದೆ. 228 ವಿಚಾರಣಾ ಹಂತದಲ್ಲಿದ್ದು 23 ತನಿಖಾ ಹಂತದಲ್ಲಿವೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಆಯುಕ್ತೆ ರೇಣುಕಾ, ಮಕ್ಕಳ ರಕ್ಷಣಾ ಘಟಕದ ಕವಿತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.