ಮಾಜಿ ಸಚಿವ, ಹಿರಿಯ ನಾಯಕ ಕೆ.ಎನ್.ರಾಜಣ್ಣ ದಿಲ್ಲಿ ದಂಡಯಾತ್ರೆಗೆ ಸಜ್ಜಾಗಿದ್ದಾರೆ. ಮಂತ್ರಿಗಿರಿ ಕಳೆದುಕೊಂಡ ನಂತರ ಮೌನವಾಗಿದ್ದ ಅವರೀಗ ಕಂಪ್ಲೇಂಟುಗಳ ಪಟ್ಟಿಯೊಂದಿಗೆ ಅಬ್ಬರಿಸಲು ನಿರ್ಧರಿಸಿದ್ದಾರೆ. ಅಂದ ಹಾಗೆ ಬಿಜೆಪಿಯ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದಾಗ ವಿಸ್ಮಯ ವ್ಯಕ್ತಪಡಿಸಿದ್ದ ರಾಜಣ್ಣ ಇದೇ ಕಾರಣಕ್ಕಾಗಿ ಸಂಪುಟದಿಂದ ವಜಾ ಆಗಿದ್ದರು.
ಹೀಗೆ ತಾವು ವಜಾ ಆಗುವುದರ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಇದ್ದಾರೆ ಎಂಬ ತೀರ್ಮಾನಕ್ಕೆ ಬಂದ ರಾಜಣ್ಣ ಅವರು ತ್ವರಿತವಾಗಿ ದಿಲ್ಲಿಗೆ ಹೋಗಲು,ರಾಹುಲ್ ಗಾಂಧಿ ಅವರಿಗೆ ವಿವರ ನೀಡಲು ಬಯಸಿದ್ದರು. ಆದರೆ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ರಾಜಣ್ಣ ಎಷ್ಟೇ ಪ್ರಯತ್ನಿಸಿದರೂ ದಿಲ್ಲಿಯಿಂದ ಸಕಾರಾತ್ಮಕ ಸಂದೇಶ ಬರುತ್ತಿಲ್ಲ.
ಅರ್ಥಾತ್, ರಾಹುಲ್ ಗಾಂಧಿ ಅವರ ಭೇಟಿ ಮಾಡಲು ರಾಜಣ್ಣ ಅವರಿಗೆ ದಿಲ್ಲಿಯಲ್ಲಿರುವ ಮಧ್ಯವರ್ತಿಗಳು ಅವಕಾಶ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆರಳಿರುವ ರಾಜಣ್ಣ ಅವರೀಗ ತಮ್ಮ ಹೇಳಿಕೆಯನ್ನು ಹೇಗೆ ತಿರುಚಲಾಗಿದೆ ಎಂಬುದರಿಂದ ಹಿಡಿದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಂಪ್ಲೇಂಟುಗಳಿರುವ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ. ಅವರ ಆಪ್ತರ ಪ್ರಕಾರ, ಕೆಲವೇ ದಿನಗಳಲ್ಲಿ ಈ ಪಟ್ಟಿ ರಾಹುಲ್ ಗಾಂಧಿ ಅವರ ಕೈ ತಲುಪಲಿದೆ.
ಇ-ಮೇಲ್ ಮೂಲಕ ತಲುಪಲಿರುವ ಈ ಪಟ್ಟಿ ಸಹಜವಾಗಿ ಗಾಂಧಿ ಅವರ ಯೋಚನೆಗೆ ಕಾರಣವಾಗಲಿದೆ. ಮತ್ತು ರಾಜಣ್ಣ ಅವರನ್ನು ಭೇಟಿ ಮಾಡಲು ಹಾತೊರೆಯುವಂತೆ ಮಾಡಲಿದೆ. ಇವೇ ಮೂಲಗಳ ಪ್ರಕಾರ,ರಾಜಣ್ಣ ಅವರು ರೆಡಿ ಮಾಡಿರುವ ಕಂಪ್ಲೇಂಟುಗಳ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿದಿರುವ ಬಗ್ಗೆಯೇ ರಾಜಣ್ಣ ಅಚ್ಚರಿ ವ್ಯಕ್ತಪಡಿಸಿದ್ದಾರೆ.
2024 ರ ಲೋಕಸಭಾ ಚುನಾವಣೆ ಮುಗಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಬದಲಾಯಿಸುವುದಾಗಿ ನೀವೇ(ವರಿಷ್ಟರು) ಹೇಳಿದ್ದಿರಿ.ಆದರೆ ಚುನಾವಣೆ ಮುಗಿದು ಒಂದು ವರ್ಷ ಕಳೆದರೂ ಅವರನ್ನೇಕೆ ಬದಲಿಸಿಲ್ಲ? ಎಂಬುದು ರಾಜಣ್ಣ ಅವರ ಮೊದಲ ಕಂಪ್ಲೇಂಟು. ಇನ್ನು ಎರಡನೆಯ ಕಂಪ್ಲೇಂಟು ಎಂದರೆ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ್ದರು? ಎಂಬುದು.
ಅಂದ ಹಾಗೆ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರನ ಮದುವೆ ಮುಂಬಯಿಯಲ್ಲಿ ನಡೆಯಿತಲ್ಲ? ಈ ಸಂದರ್ಭದಲ್ಲಿ ಅಂಬಾನಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸುತ್ತಾರೆ ಮತ್ತು ಅವರ ಆಹ್ವಾನದ ಮೇಲೆ ಸಮಾರಂಭದಲ್ಲಿ ಪಾಲ್ಗೊಂಡ ಡಿ.ಕೆ.ಶಿವಕುಮಾರ್ ಅವರು ಪ್ರದಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ್ದಾರೆ.
Read also : Political analysis | ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು
ಇವತ್ತು ಪ್ರಧಾನಿ ನರೇಂದ್ರಮೋದಿ ಅವರು ಕಾಂಗ್ರೆಸ್ಸನ್ನು ಎಷ್ಟು ದ್ವೇಷಿಸುತ್ತಾರೆ ಎಂದರೆ, ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಾರೆ. ಅಂತಹ ನರೇಂದ್ರ ಮೋದಿಯವರ ಜತೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರಿಗೆ ಇರುವ ವಿಷಯವೇನು? ಎಂಬುದು ರಾಹುಲ್ ಗಾಂಧಿಯವರ ಮುಂದೆ ರಾಜಣ್ಣ ಇಡಲಿರುವ ಅನುಮಾನ ಮತ್ತು ಕಂಪ್ಲೇಂಟು.
ಇನ್ನು ಕೊಯಮತ್ತೂರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸಿದ ಕಾರ್ಯಕ್ರಮಮದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡಿದ್ದರಲ್ಲ? ಅದೇ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ಪಾಲ್ಗೊಂಡಿದ್ದರು. ಹೀಗೆ ಒಂದೇ ವೇದಿಕೆಯಲ್ಲಿ ಅಮಿತ್ ಶಾ ಮತ್ತು ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳುವುದು ಕಾಕತಾಳೀಯವಲ್ಲ.ಉದ್ದೇಶಪೂರ್ವಕ ಎಂಬುದು ರಾಜಣ್ಣ ಅವರ ಮೂರನೇ ಕಂಪ್ಲೇಂಟು.
ಈ ಮಧ್ಯೆ ತುಂಬಿದ ವಿಧಾನಸಭೆಯಲ್ಲಿ ನಿಂತು ನಮಸ್ತೆ ಸದಾ ವತ್ಸಲೆ ಅಂತ ಅರೆಸ್ಸೆಸ್ ಗೀತೆಯನ್ನು ಡಿ.ಕೆ.ಶಿವಕುಮಾರ್ ಹೇಳುತ್ತಾರೆ.ಇದರ ಬೆನ್ನಲ್ಲೇ ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎನ್ನುವ ಮೂಲಕ ಹಿಂದೂ ಮತ ಬ್ಯಾಂಕನ್ನು ಕ್ರೋಢೀಕರಿಸಿಕೊಳ್ಳಲು ಬಿಜೆಪಿಗೆ ಅವಕಾಶ ಮಾಡಿಕೊಡುತ್ತಾರೆ.
ಹೀಗೆ ನೋಡುತ್ತಾ ಹೋದರೆ ಅವರ ಒಂದೊಂದು ನಡೆಯೂ ಬಿಜೆಪಿಗೆ ಪ್ಲಸ್ ಆಗುವಂತಿದೆ. ಆದರೆ, ಡಿ.ಕೆ.ಶಿವಕುಮಾರ್ ಅವರ ಇಂತಹ ಹೆಜ್ಜೆಗಳ ವಿರುದ್ದ ಕ್ರಮ ಕೈಗೊಳ್ಳುವ ಕೆಲಸವಾಗುವುದಿಲ್ಲ. ಆದರೆ, ಮತಗಳ್ಳತನದ ಬಗ್ಗೆ ನಾನು ಆಡಿದ ಪೂರ್ತಿ ಮಾತುಗಳನ್ನು ಕೇಳದೆ ತಿರುಚಿರುವ ಒಂದು ವಿಡಿಯೋ ಅನ್ನು ಮುಂದಿಟ್ಟುಕೊಂಡು ನನ್ನನ್ನು ಸಂಪುಟದಿಂದ ವಜಾ ಮಾಡಲಾಗಿದೆ.
ಆದರೆ ವರಿಷ್ಟರು ಗಮನಿಸಬೇಕಿರುವ ಬಹುಮುಖ್ಯ ಸಂಗತಿ ಎಂದರೆ,ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆದರೆ ಕಾಂಹ್ರೆಸ್ ಪಕ್ಚ ಗೆದ್ದು ಅಧಿಕಾರ ಹಿಡಿಯುವುದಿರಲಿ, ಹೀನಾಯವಾಗಿ ಸೋಲುತ್ತದೆ. ಇದಕ್ಕೆ ಗ್ರೇಟರ್ ಬೆಂಗಳೂರು ಎಪಿಸೋಡೇ ಬಹುಮುಖ್ಯ ಕಾರಣ.
ಯಾಕೆಂದರೆ ಅದರ ಹೆಸರಿನಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳಿಂದ ಬಿಲ್ಡರುಗಳು ಸೇರಿದಂತೆ ಬಹುತೇಕ ಉದ್ಯಮ ವಲಯವೇ ಸಿಟ್ಟಿಗೆದ್ದಿದೆ ಎಂಬುದು ರಾಜಣ್ಣ ಅವರ ಕಂಪ್ಲೇಂಟು ಪಟ್ಟಿಯಲ್ಲಿರುವ ಮತ್ತೊಂದು ಅಂಶ.
ಹೀಗೆ ಹಲವು ವಿವರಗಳಿರುವ ಕಂಪ್ಲೇಂಟು ಪಟ್ಟಿಯನ್ನು ಈ ವಾರ ರಾಹುಲ್ ಗಾಂಧಿಯವರಿಗೆ ಕಳಿಸಲಿರುವ ರಾಜಣ್ಣ ಅವರು,ಇದರ ಆಧಾರದ ಮೇಲೆ ದಿಲ್ಲಿಗೆ ಬರುವಂತೆ ಕರೆ ಬಂದರೆ ದೌಡಾಯಿಸಲು ಸಜ್ಜಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ‘ಭಾಗವತ’ (Political analysis)
ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಪುನ: ಸಂಚಲನ ಶುರುವಾಗಿದೆ.ಆರೆಸ್ಸೆಸ್ ವರಿಷ್ಟರಾದ ಮೋಹನ್ ಭಾಗವತ್ ಅವರ ಹೇಳಿಕೆಯೇ ಇದಕ್ಕೆ ಕಾರಣ. ಕೆಲ ದಿನಗಳ ಹಿಂದೆ ಮೋಹನ್ ಭಾಗವತ್ ಅವರು: ಎಪ್ಪತ್ತೈದು ವರ್ಷಗಳಾದ ನಂತರ ತಾವು ಗೌರವಯುತವಾಗಿ ನಿವೃತ್ತಿಯಾಗಬೇಕು ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನು ಚುಚ್ಚಿದ್ದರು.
ಅರ್ಥಾತ್,ಎಪ್ಪತ್ತೈದು ವರ್ಷಗಳಾದ ನಂತರ ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿ ಕೆಳಗಿಳಿಯಲಿ ಎಂಬುದು ಅವರ ಇಂಗಿತವಾಗಿತ್ತು.
ಯಾವಾಗ ಅವರು ಈ ಸಿಗ್ನಲ್ಲು ನೀಡಿದರೋ? ಇದಾದ ನಂತರ ಬಿಜೆಪಿ ಪಾಳಯದಲ್ಲಿ ವಿವಿಧ ಬಗೆಯ ಚರ್ಚೆಗಳು ಶುರುವಾಗಿದ್ದವು. ಮೋದಿಯವರ ನಂತರ ಯೋಗಿ ಆದಿತ್ಯನಾಥ್ ಇಲ್ಲವೇ ನಿತೀನ್ ಗಡ್ಕರಿ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲು ಆರೆಸ್ಸೆಸ್ ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ, ಕಳೆದ ವಾರ ಇದ್ದಕ್ಕಿದ್ದಂತೆ ಧ್ವನಿ ಬದಲಿಸಿದ ಮೋಹನ್ ಭಾಗವತ್ ಅವರು:ಎಪ್ಪತ್ತೈದು ವರ್ಷಗಳಾದ ತಕ್ಷಣ ನಾನು ನಿವೃತ್ತಿಯಾಗಬೇಕು ಎಂದೇನಿಲ್ಲ.ಸಂಘ ಎಲ್ಲಿಯವರೆಗೆ ಇರಲು ಹೇಳುತ್ತದೋ?ಅಲ್ಲಿಯವರೆಗೆ ನಾನು ಮುಂದುವರಿಯಬೇಕು ಅಂತ ಹೇಳಿದ್ದರು.
ಯಾವಾಗ ಅವರು ಈ ಮಾತನಾಡಿದರೋ? ಇದಾದ ನಂತರ ಬಿಜೆಪಿ ಪಾಳಯದಲ್ಲಿ : ಮೋದಿ ಮತ್ತು ಆರೆಸ್ಸೆಸ್ ಮಧ್ಯೆ ಸಂಧಾನವಾಗಿದೆ.ಅದರ ಫಲವಾಗಿ ಮೋದಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಭಾಗವತ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತು ಶುರುವಾಗಿದೆ. ಅಂದ ಹಾಗೆ ಮೋದಿ ಮತ್ತು ಆರೆಸ್ಸೆಸ್ ನಡುವೆ ಸಂಘರ್ಷ ನಡೆಯುತ್ತಿದ್ದ ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಷಯ ಉತ್ತುಂಗದಲ್ಲಿತ್ತು.
ಅದರ ಪ್ರಕಾರ,ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಅವರಿಗೆ ಪಟ್ಟ ಕಟ್ಟಲು ಮೋದಿ-ಅಮಿತ್ ಶಾ ಜೋಡಿ ಬಯಸಿತ್ತು. ಇದೇ ರೀತಿ ಸಂಘ ನಿಷ್ಟ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಟ್ಟ ಕಟ್ಟಲು ಆರೆಸ್ಸೆಸ್ ಬಯಸಿತ್ತು.
ಆರೆಸ್ಸೆಸ್ಸಿನ ಈ ನಿರ್ಧಾರಕ್ಕೆ ದೇಶ ಮತ್ತು ವಿಶ್ವದ ರಾಜಕೀಯ ಚಿತ್ರಣ ಬದಲಾಗುತ್ತಿರುವ ವೇಗ ಕಾರಣವಾಗಿತ್ತಲ್ಲದೆ, ಇಂತಹ ಕಾಲಘಟ್ಟದಲ್ಲಿ ಸಂಘನಿಷ್ಟರೊಬ್ಬರು ಪಕ್ಷದ ಸಾರಥ್ಯ ವಹಿಸಬೇಕು ಎಂಬ ಲೆಕ್ಕಾಚಾರ ಮುಖ್ಯವಾಗಿತ್ತು. ಆದರೆ, ಮೋದಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರೆ, ಆ ಜಾಗಕ್ಕೆ ತಾವು ಬರಲು ಪೂರಕವಾಗುವಂತೆ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಬರಲಿ ಎಂಬ ಇಚ್ಚೆ ಅಮಿತ್ ಶಾ ಅವರಲ್ಲಿತ್ತು. ಮತ್ತು ಅಮಿತ್ ಶಾ ಬಯಕೆಗೆ ಪೂರಕವಾಗಿ ಮೋದಿ ವರ್ತಿಸುತ್ತಿದ್ದರು.
ಯಾವಾಗ ಈ ಪೈಪೋಟಿ ಅತಿಯಾಯಿತೋ? ಅಗ ಅರೆಸ್ಸೆಸ್ ವರಿಷ್ಟ ಮೋಹನ್ ಭಾಗವತ್ ಅವರು,ಮೋದಿ ಕೆಳಗಿಳಿಯಲಿ ಎಂದು ಪರೋಕ್ಷ ಸಂದೇಶ ರವಾನಿಸಿದ್ದರು. ಆದರೆ, ಈಗ ಇದ್ದಕ್ಕಿದ್ದಂತೆ ಅವರು ಯೂ ಟರ್ನ್ ಹೊಡೆದಿದ್ದಾರೆ ಎಂದರೆ ಮೋದಿಯವರು ಆರೆಸ್ಸೆಸ್ ಜತೆ ಹೊಂದಿಕೊಂಡು ಹೋಗಲು ಬಯಸಿದ್ದಾರೆ.
ಅರ್ಥಾತ್,ಅದರ ಇಚ್ವೆಯಂತೆ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಟ್ಟ ಕಟ್ಟಲು ಒಲವು ತೋರಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾತು.
ಪರಿಣಾಮ? ಶಿವರಾಜ್ ಸಿಂಗ್ ಚೌಹಾಣ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೆ ಕರ್ನಾಟಕದಲ್ಲೂ ಸಂಘಪರಿವಾರದ ಪವರ್ರು ಜಾಸ್ತಿಯಾಗುತ್ತದೆ. ಮತ್ತದು ಯಾವ ಕಾರಣಕ್ಕೂ ವಿಜಯೇಂದ್ರ ಪಕ್ಷಾಧ್ಯಕ್ಷರಾಗಿರುವುದನ್ನು ಬಯಸುವುದಿಲ್ಲ ಎಂಬುದು ಅದರ ಮಾತು. ಸಹಜವಾಗಿಯೇ ಈ ಮಾತು ರಾಜ್ಯ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿಗಳು ಖುಷಿಯಾಗುವಂತೆ ಮಾಡಿವೆ.ಆದರೆ, ಈ ಖುಷಿ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ.
ಪಪ್ಪಿಗೆ ಸಂಕಟ ತಂದವರು ಯಾರು? (Political analysis)
ಈ ಮಧ್ಯೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಶಾಸಕ ಪಪ್ಪಿ ಆರೆಸ್ಟ್ ಬಗ್ಗೆ ಗಂಭೀರ ಚರ್ಚೆಯಾಗುತ್ತಿದೆ. ಅಂದ ಹಾಗೆ ಕೆಲ ದಿನಗಳ ಹಿಂದೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಕೇಂದ್ರದ ಜಾರಿ ನಿರ್ದೇಶನಾಲಯ ಬಂಧಿಸಿತಲ್ಲ? ಇದಕ್ಕೇನು ಕಾರಣ ಎಂಬುದೇ ಕೈ ಪಾಳಯದ ಲೇಟೆಸ್ಟು ಚರ್ಚೆ. ಅದರ ಪ್ರಕಾರ,ರಾಜ್ಯ ಕಾಂಗ್ರೆಸ್ಸಿನ ಪವರ್ ಫುಲ್ ನಾಯಕರೊಬ್ಬರು ವೀರೇಂದ್ರ ಪಪ್ಪಿ ಅವರಿಗೆ ಮಂತ್ರಿಗಿರಿಯ ಆಸೆ ತೋರಿಸಿದ್ದರಂತೆ.
‘ಹೇಗಿದ್ದರೂ ಡಿಸೆಂಬರ್ ವೇಳೆಗೆ ಮಂತ್ರಿ ಮಂಡಲ ಪುನರ್ರಚನೆ ಅಗಲಿದೆ. ಈ ಸಂದರ್ಭದಲ್ಲಿ ನೀವು ಮಂತ್ರಿ ಆಗುವಿರಂತೆ. ಆದರೆ ಅದಕ್ಕಾಗಿ ಬಿಹಾರ ವಿಧಾನಸಭೆ ಚುನಾವಣೆಗೆ ನೀವು ನೆರವು ಕೊಡಬೇಕು’ಅಂತ ಅವರು ಹೇಳಿದ್ದರಂತೆ.
ಇದು ಎಷ್ಟರ ಮಟ್ಟಿಗೆ ನಿಜವೋ? ಅದರೆ ಮಂತ್ರಿಯಾಗಲು ಬಯಸಿರುವ ವೀರೇಂದ್ರ ಪಪ್ಪಿ ಬಿಹಾರ ವಿಧಾನಸಭೆ ಚುನಾವಣೆಗೆ ಫಂಡು ಸರಬರಾಜು ಮಾಡುತ್ತಿದ್ದಾರೆ ಎಂಬ ಮೆಸೇಜು ಇ.ಡಿ ಗೆ ತಲುಪಿದೆ. ಹೀಗೆ ಇ.ಡಿ ಗೆ ತಲುಪಿದ ಮೆಸೇಜೇ ವೀರೇಂದ್ರ ಪಪ್ಪಿ ಅವರಿಗೆ ಮುಳುವಾಯಿತು ಎಂಬುದು ಕಾಂಗ್ರೆಸ್ ಪಾಳಯದ ಬಿಸಿ-ಬಿಸಿ ಚರ್ಚೆ.
ಆರ್.ಟಿ.ವಿಠ್ಠಲಮೂರ್ತಿ