ದಾವಣಗೆರೆ.ಸೆ.9: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಅವರ ಕುರಿತು ಹರಿಹರ ಶಾಸಕ ಬಿ.ಪಿ.ಹರೀಶ್ ನೀಡಿರುವ ಹೇಳಿಕೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಶಾಖೆಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹರಿಹರ ಶಾಸಕರು ಸೆ.2 ರಂದು ಪತ್ರಿಕಾಗೋಷ್ಟಿ ನಡೆಸುವಾಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಅವಹೇಳನಕಾರಿಯಾಗಿ ನಿಂದಿಸಿರುವ ಕುರಿತು ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ತಿಳಿದು ಬಂದಿದೆ. ಶಾಸಕರ ಈ ಹೇಳಿಕೆಯನ್ನು ಸರ್ಕಾರಿ ನೌಕರರ ಜಿಲ್ಲಾ ಶಾಖೆ ಕಟುವಾಗಿ ಖಂಡಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು, ಅಧಿಕಾರಿಗಳ ಆತ್ಮಸ್ಥೆöÊರ್ಯಕ್ಕೆ ಧಕ್ಕೆ ತರುವಂಥಹ ಹೇಳಿಕೆಗಳನ್ನು ಯಾವುದೇ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಇನ್ನು ಮುಂದೆ ನೀಡಬಾರದು. ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಸರ್ಕಾರಿ ನೌಕರರಿಗೆ ಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸಲು ಸಹಕಾರ ನೀಡುವಂತೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ, ನಿಕಟ ಪೂರ್ವ ಅಧ್ಯಕ್ಷ ಪಾಲಾಕ್ಷಿ, ಕೆ.ಎಸ್.ಗೋವಿಂದರಾಜ್, ನ್ಯಾಯಾಂಗ ಇಲಾಖೆಯ ಮಾರುತಿ ಸೇರಿದಂತೆ ನೂರಕ್ಕೂ ಅಧಿಕ ನೌಕರರು, ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.