ಹರಿಹರ: ತಾಲ್ಲೂಕಿನ ದೊಗ್ಗಳ್ಳಿ ಗ್ರಾಮ ಠಾಣಾ ವ್ಯಾಪ್ತಿಗೆ ಹೊಂದಿಕೊಂಡ ಜಮೀನಿನ ಅಳತೆ ಮಾಡುವಾಗ ಹನಗವಾಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯು ರೈತರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ವ್ಯಕ್ತಪಡಿಸಿದರು.
ತಾಪಂ ಇಒ ಎಸ್.ಪಿ.ಸುಮಲತಾ ಅವರಿಗೆ ಮನವಿ ನೀಡಿದ ನಂತರ ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಪ್ರಭುಗೌಡ್ರು ಮಾತನಾಡಿ, ದೊಗ್ಗಳ್ಳಿ ಗ್ರಾಮದ ರೈತರೊಬ್ಬರು ನೀಡಿದ ಅರ್ಜಿ ಅನ್ವಯ ಭೂಮಾಪನಾ ಇಲಾಖೆ ಸಿಬ್ಬಂದಿ ಸೆ.16 ರಂದು ಸ್ಥಳಕ್ಕೆ ಆಗಮಿಸಿದ್ದಾಗ ಪಿಡಿಒ ಪ್ರಭಾಕರ ಅವಾಚ್ಯ ಶಬ್ದಗಳಿಂದ ಅರ್ಜಿದಾರ ರೈತನಿಗೆ ನಿಂದಿಸಿದ್ದಾರೆ.
ಅರ್ಜಿದಾರನ ಪರವಾಗಿ ವರದಿ ನೀಡಬೇಡಿರಿ ಎಂದೂ ಭೂಮಾಪಕ ಸಿಬ್ಬಂದಿಗೆ ಒತ್ತಡ ಹೇರಿದ್ದಾರೆ, ಇ ಸ್ವತ್ತು ನೀಡಲು ಗ್ರಾಮಸ್ಥರಿಂದ ಹಣ ಪಡೆಯುತ್ತಾರೆಂಬ ದೂರು ಇವರ ವಿರುದ್ಧ ಇದೆ, ಹೀಗಾಗಿ ಆ ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಡಿಒ, ಅವಾಚ್ಯವಾಗಿ ಮಾತನಾಡಿಲ್ಲ, ಇ ಸ್ವತ್ತು ನೀಡಲು ನಾನು ಹಣಕ್ಕೆ ಬೇಡಿಕೆ ಇಡುವುದಾದರೆ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಬಹುದು, ಕಾರ್ಯಒತ್ತಡ, ಆನ್‍ಲೈನ್ ಮೀಟಿಂಗ್ ನಿಂದಾಗಿ ಕೆಲಸ ಮಾಡಿಕೊಡುವುದು ತಡವಾಗಬಹುದಷ್ಟೆ ಎಂದು ಸಮಜಾಯಿಷಿ ನೀಡಿದರು.
Read also : ಹರಿಹರ|ಬದುಕನ್ನು ಹಸನು ಮಾಡುವ ಶಕ್ತಿ ಅಭಿಯಂತರರಿಗಿದೆ : ಮಾರುತಿ ಬೇಡರ್
ನಂತರ ಇಒ ಮಾತನಾಡಿ, ರೈತರನ್ನು ನಿಂದಿಸಬಾರದು, ನಿಗದಿತ ಅವಧಿಯಲ್ಲಿ ಗ್ರಾಪಂ ಕೆಲಸ, ಕಾರ್ಯಗಳನು ಮಾಡಿಕೊಡಬೇಕು ಎಂದು ಪಿಡಿಒಗೆ ಸೂಚಿಸಿದ ಜೊತೆಗೆ, ಅರ್ಜಿದಾರ ರೈತ ಜಮೀನಿನ ಅಳತೆಯನ್ನು ಬೆಳೆ ಕಟಾವು ಮಾಡಿದ ನಂತರ ಹಿಂದಿನ ಶುಲ್ಕದಲ್ಲೆ ಮಡಿಕೊಡಬೇಕೆಂದು ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಕಲ್ಲೇಶ್ ಅವರಿಗೆ ಸೂಚಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ದಾವಣಗೆರೆ ಅಂಜಿನಪ್ಪ, ದೊಗ್ಗಳ್ಳಿ ಮಹೇಶ್ವರಪ್ಪ, ಗರಡಿಮನಿ ಬಸಣ್ಣ, ಅಮರಾವತಿ ಚಂದ್ರಪ್ಪ, ಬೆಳವನೂರು ಕರಿಬಸಪ್ಪ, ಭೀಮಪ್ಪ ಕೆ.ಎನ್., ಎಂ.ಬಿ.ಪಾಟೀಲ್ ಪಾಳ್ಯ, ನಾಗರಾಜ್ ಹಾಗೂ ಇತರರಿದ್ದರು.
