ದಾವಣಗೆರೆ : ರಾಜ್ಯಾದ್ಯಂತ ಬಡವರ, ಕೂಲಿ ಕಾರ್ಮಿಕರ ಹಾಗೂ ಸ್ಲಂಜನರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಜನವಿರೋಧಿ ಕ್ರಮವನ್ನು ಖಂಡಿಸಿ ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಮಿತಿಯ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರದ್ದುಗೊಳಿಸಿರುವ ಬಿಪಿಎಲ್ ಕಾರ್ಡ್ಗಳನ್ನು ಮರಳಿ ನೀಡುವಂತೆ ಒತ್ತಾಯಿಸಿ ಆಹಾರ ಇಲಾಖೆಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಎಸ್.ಎಲ್.ಆನಂದಪ್ಪ ಮಾತನಾಡಿ, ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ಬಡವರ ಬಿಪಿಎಲ್ ಪಡಿತರ ಕಾರ್ಡುಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಂದಿದ್ದಾರೆ ಎಂದರು.
ರಾಜ್ಯ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಕುಟುಂಬಗಳಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನುಕೂಲ ಮಾಡಲಾಗುವುದೆಂದು ಭರವಸೆಯನ್ನು ನೀಡಲಾಗಿತ್ತು. ಅದರಂತೆ 2023 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಾದ ಗೃಹಲಕ್ಷ್ಮಿ, ಗೃಪಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯಯೋಜನೆ, ಹಾಗೂ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಡ ಕುಟುಂಬದ ಯಾರೂ ಉಪವಾಸ ಇರಬಾರದೆಂದು ಹಸಿವು ಮುಕ್ತ ಘೋಷಣೆಯೊಂದಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದ್ದು. ಆದರೆ ಈಗ ರಾಜ್ಯ ಸರ್ಕಾರ 8 ಲಕ್ಷಕ್ಕೂ ಅಧಿಕ ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಲಕ್ಷಾಂತರ ಕೂಲಿ ಕಾರ್ಮಿಕರು ಹಾಗೂ ಸ್ಲಂ ಪ್ರದೇಶದ ಕುಟುಂಬಗಳಿಗೆ ಆಹಾರ ಸಿಗದೆ ಬೀದಿಗೆ ಬಂದಿದ್ದಾರೆ ಎಂದು ಹೇಳಿದರು.
Read also : ವೃದ್ಧೆಯ ಸರಗಳ್ಳತನ : ವೃದ್ದೆಯ ಸಂಬಂಧಿಕರ ಬಂಧನ
ಕೇಂದ್ರ ಸರ್ಕಾರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ಮಾತ್ರ ರದ್ದು ಗೊಳಿಸಲಾಗುತ್ತದೆ ಎಂದು ಹೇಳಿ ಈಗ 8 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಿರುವುದನ್ನು ನಾವು ಖಂಡಿಸುತ್ತೇವೆ. ರಾಜ್ಯ ಸರ್ಕಾರ ಲಕ್ಷಾಂತರ ಕುಟುಂಬಗಳನ್ನು ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿಸುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರದಿಂದ ಬಡವರಿಗೆ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಆದ್ದರಿಂದ ಕೂಡಲೇ ರದ್ದಾಗಿರುವ ಬಿಪಿಎಲ್ ಕಾರ್ಡುಗಳನ್ನು ಪುನರ್ ಪರಿಶೀಲಿಸಿ ವಾಪಾಸ್ಸು ನೀಡಬೇಕು ಇಲ್ಲವಾದರೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಸಮಿತಿಯ ಸುಹಿಲ್ ಭಾಷ, ಹೆಚ್.ಗಣೇಶ್, ಸಾದಿಕ್, ಸುನೇರಾ ಬಾನು, ಬಿಬಿಜಾನ್, ಸೀಮಾ, ಶಂಕ್ರಮ್ಮ, ಕೌಸರ್, ರಜೀಯಾ ಬಾನು ಇತರರು ಇದ್ದರು.
