ದಾವಣಗೆರೆ : ನಗರ ಹಾಗೂ ಜಿಲ್ಲಾದ್ಯಂತ ತಾಲ್ಲೂಕುವಾರು ಅತೀ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಕುಷ್ಠರೋಗ, ಕ್ಷಯ ಹಾಗೂ ಇನ್ನಿತರೆ ಖಾಯಿಲೆಗಳ ಕುರಿತು ಕಾರ್ಯಗಾರ ಆಯೋಜಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಪಂ ಸಿಇಓ ಗಿತ್ತೆ ಮಾಧವ ವಿಠಲ ರಾವ್ ತಿಳಿಸಿದರು.
ನಗರದ ಜಿಪಂ ಕಚೇರಿಯಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಕಳೆದ 5 ವರ್ಷಗಳಲ್ಲಿ ಕಂಡು ಬಂದಂತಹ ಪ್ರದೇಶಗಳಾದ ನಗರ, ಕೊಳಗೇರಿ, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ನವೆಂಬರ್ 3 ರಿಂದ 14 ದಿನಗಳ ಕಾಲ ಕುಷ್ಠರೋಗಿಗಳನ್ನು ಗುರುತಿಸಿ ಪತ್ತೆ ಹಚ್ಚುವ ಸಮೀಕ್ಷಾ ಕಾರ್ಯ ನಡೆಯಲಿದೆ. ಅಧಿಕಾರಿಗಳು ಸಿಬ್ಬಂದಿ ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಜಿಲ್ಲೆ ಹಾಗೂ ತಾಲ್ಲೂಕುವಾರು ಸಾರ್ವಜನಿಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕುಷ್ಠರೋಗ, ಕ್ಷಯ ಮತ್ತು ಇನ್ನಿತರೆ ಖಾಯಿಲೆಗಳ ಬಗ್ಗೆ ಜಾಗೃತಿ ಕಾರ್ಯಗಾರ ಆಯೋಜಿಸಬೇಕು. ಅದರಲ್ಲೂ ಅತೀ ಹೆಚ್ಚು ಜನನಿಬಿಡ ಪ್ರದೇಶ ಮತ್ತು ನರೇಗಾ ಕಾಮಗಾರಿ, ಕೆರೆ ಹೂಳೆತ್ತುವ ಸ್ಥಳ ಅಥವಾ ಹೆಚ್ಚಿನ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ಅವರಿರುವಲ್ಲಿಗೆ ತೆರಳಿ ಕಾರ್ಮಿಕರಿಗೆ ಚಿಕಿತ್ಸೆಗೆ ಒಳಪಪಡಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ 6802 ಜನ ಸಂಶಯಾಸ್ಪದ ಕುಷ್ಠರೋಗಿಗಳೆಂದು ಗುರುತಿಸಲಾಗಿದೆ. ಈ ಪೈಕಿ ಎಲ್ಲರನ್ನು ಸಮಗ್ರವಾಗಿ ಪರೀಕ್ಷೆಗೆ ಒಳಪಡಿಸಿದಾಗ ದಾವಣಗೆರೆ, ಹೊನ್ನಾಳಿ, ಚನ್ನಗಿರಿ ಹಾಗೂ ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ 2, ಹರಿಹರ ತಾಲ್ಲೂಕಿನಲ್ಲಿ 3 ಪ್ರಕರಣ ಸೇರಿ ಒಟ್ಟು 11 ಪ್ರಕರಣ ದೃಢಪಟ್ಟಿವೆ. ಪ್ರಸಕ್ತ ವರ್ಷದಲ್ಲಿ 56 ಪ್ರಕರಣ ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
Read also : ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ
ಕುಷ್ಠರೋಗ ಸಮೀಕ್ಷೆಗೆ 410 ತಂಡ:
ಜಿಲ್ಲಾದ್ಯಂತ ಸಮೀಕ್ಷಾ ಕಾರ್ಯಕ್ಕೆ ಒಬ್ಬ ಆಶಾ ಕಾರ್ಯಕರ್ತೆ ಮತ್ತು ಒಬ್ಬ ಸ್ವಯಂ ಸೇವಕರು ಒಳಗೊಂಡಂತೆ ಒಟ್ಟು 410 ತಂಡಗಳನ್ನು ರಚಿಸಲಾಗಿದೆ. ಆ ಒಂದು ತಂಡವು ದಿನಕ್ಕೆ ಗ್ರಾಮೀಣ ಭಾಗದಲ್ಲಿ 20 ಕುಟುಂಬ ಹಾಗೂ ನಗರ ಪ್ರದೇಶಗಳಲ್ಲಿ 25 ಕುಟುಂಬಗಳ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷಾ ಕಾರ್ಯ ನಡೆಸಿದ ಒಂದು ತಂಡಕ್ಕೆ ರೂ.150 ಅಂದರೆ ತಲಾ ರೂ.75 ನಂತೆ ಗೌರವ ಧನ ನೀಡಲಾಗುತ್ತದೆ.
ಸಂಶಯಾಸ್ಪದ ವ್ಯಕ್ತಿಯನ್ನು ಚಿಕಿತ್ಸೆಗೆ ಒಳಪಡಿಸಿದಾಗ ಅವರಿಗೆ ಕಾಯಿಲೆ ದೃಢಪಟ್ಟಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರಕರಣ ಒಂದಕ್ಕೆ ರೂ.250 ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಅಧಿಕಾರಿಯವರು ಮಾಹಿತಿ ನೀಡಿದರು.
ಈ ವೇಳೆ ಡಿಹೆಚ್‌ಓ ಷಣ್ಮುಖಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಸಂದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
