ದಾವಣಗೆರೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಲಿರುವ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಆರೋಪಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತಾಶ್ರಯದಲ್ಲಿ ನ.5 ರಂದು ಹೈಸ್ಕೂಲು ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಿರುವ ಸಂಘ ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಆಯ್ಕೆ ಸಂಬಂಧ ಕಳೆದ ಹತ್ತು ದಿನಗಳ ಹಿಂದೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಸರದ ಬಗ್ಗೆ ಹೆಚ್ಚು ಕೆಲಸ ಮಾಡಿರುವ ಪರಿಸರ ಸಂರಕ್ಷಣಾ ವೇದಿಕೆ ಹೆಸರು ಹೆಚ್ಚಾಗಿ ಕೇಳಿ ಬಂದಿತ್ತು. ಆದರೆ, ಆಯ್ಕೆಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಬೇಸರ ತಂದಿದ್ದು ಇದರಲ್ಲಿ ರಾಜಕೀಯ ಹಸ್ತಕ್ಷೇಪವಾಗಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನೆ ಆರೋಪಿಸಿದ್ದಾರೆ.
ಪರಿಸರ ಸಂರಕ್ಷಣಾ ವೇದಿಕೆ ನೊಂದಣಿಯಾಗಿರು ಸಂಘಟನೆಯಾಗಿದ್ದು ಸುಮಾರು 20 ವರ್ಷಗಳಿಂದ ಯುವಕರನ್ನು ಕಟ್ಟಿಕೊಂಡು ಜಿಲ್ಲಾದ್ಯಂತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಪರಿಸರ ಮಿತ್ರ ಕಾರ್ಯಕ್ರಮ, ಪಿಓಪಿ ಗಣೇಶ ಮೂರ್ತಿಗಳ ಜಾಗೃತಿ ಕಾರ್ಯಕ್ರಮ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಜಾಗೃತಿ, ಪಟಾಕಿ ಜಾಗೃತಿ ಹಾಗೂ ಇತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಕ್ರಮಗಳಲ್ಲಿ ಜಿಲ್ಲಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದಿದ್ದಾರೆ.
Read also : ದಾವಣಗೆರೆ: ಪರಿಶಿಷ್ಟರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ
ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿ ವೃಕ್ಷ ಮಾತೆ ಮರದ ತಿಮ್ಮಕ್ಕ ಹಾಗೂ ಇತರ ಮಠಾಧೀಶರು ಮತ್ತು ಅರಣ್ಯ ಇಲಾಖೆ, ಕಾನೂನು ಪ್ರಾಧಿಕಾರ, ಹಾಗೂ ಹಲವು ಸಂಘ ಸಂಸ್ಥೆಗಳ ಜೊತೆ ಸೇರಿ ಗಿಡ ನೆಡುವ ಕಾರ್ಯಕ್ರಮ, ಇತರೆ ಹಲವಾರು ಪರಿಸರ ಸಂರಕ್ಷಣೆ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಪರಿಸರ ಸಂರಕ್ಷಣಾ ವೇದಿಕೆ ಇಲ್ಲಿಯವರೆಗೂ ಸರ್ಕಾರ ನೀಡುವ ಯಾವುದೇ ಪ್ರಶಸ್ತಿಗಳಿಗೆ ಅರ್ಜಿಯನ್ನು ಹಾಕಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಪರಿಸರ ರಕ್ಷಣೆಯ ಜವಾಬ್ದಾರಿಯಿಂದ ನಮ್ಮ ಸಂಘಟನೆಯನ್ನು ನಡೆಸುತ್ತಿದೆ ಎಂದು ಸ್ಪಷ್ಠನೆ ನೀಡಿದ್ದಾರೆ.
ಪ್ರಶಸ್ತಿ ಆಯ್ಕೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆಯ ಹೆಸರಿದ್ದರು ರಾಜಕೀಯ ದುರುದ್ದೇಶದಿಂದ ಹೆಸರನ್ನು ತೆರವುಗೊಳಿಸಿರುವುದು ಬೇಸರ ಮೂಡಿಸಿದೆ. ಯಾರ ನಿರ್ದೇಶನದ ಮೇರೆಗೆ ತೆರೆವುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಬೇಕು ಎಂದು ಗಿರೀಶ್ ದೇವರಮನಿ ಆಗ್ರಹಿಸಿದ್ದಾರೆ.
