ದಾವಣಗೆರೆ: ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡುವ ಏಕೈಕ ಶಾಲೆ ಈಶ್ವರಮ್ಮ ಶಾಲೆಯಾಗಿದೆ. ಶಾಲೆಯಲ್ಲಿ ನಡೆಸುವ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸಂಸ್ಕಾರವಂತರಾಗಿರುವುದರಿಂದ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಲು ಸಾಧ್ಯವಾಗಿದೆ ಎಂದು ಶ್ರೀ ಜಡೆ ಸಿದ್ದ ಶ್ರೀ ಶಿವಯೋಗೀಶ್ವರ ಮಠದ ಡಾ. ಶ್ರೀ ಶಿವಾನಂದ ಸ್ವಾಮಿಗಳು ಹೇಳಿದರು.
ನಗರದ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಭಾನುವಾರ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಲಾ ಪೋಷಕರಿಂದ ಶ್ರೀ ಸತ್ಯ ಸಾಯಿ ಪಾದುಕಾ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಂದಾ ದೀಪ ಬೆಳಗಿಸಿ ಪ್ರತಿನಿತ್ಯ ಪಾದುಕೆ ಪೂಜೆಯನ್ನು ಮಾಡುವುದರಿಂದ ಮಕ್ಕಳು ಪೋಷಕರನ್ನು ನೋಡಿ ಕಲಿಯುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕೊಟ್ಟರೆ ದೇಶದ ಸತ್ಪಜೆಗಳಾಗುತ್ತಾರೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮ ಭಾವವನ್ನು ಬೆಳೆಸಿದವರೇ ಸಿರಿವಂತರು ಎಂದು ತಿಳಿಸಿದರು.
ನಮ್ಮಲ್ಲಿ ಪ್ರೇಮ, ಕರುಣೆ, ದಯೆ, ಆಧ್ಯಾತ್ಮದ ಭಾವವಿದ್ದರೆ ಯಾವ ಭಯವೂ ಇರುವುದಿಲ್ಲ. ಆಧ್ಯಾತ್ಮದ ತವಕ ಭಕ್ತಿಯ ಭಾವವಿದ್ದರೆ ಜೀವನ ಸಾರ್ಥಕವಾಗುವುದು. ಶಿಕ್ಷಕರಿಗೆ ಇರುವಷ್ಟೇ ಹೊಣೆಗಾರಿಕೆ ಪೋಷಕರಲ್ಲಿ ಇರಬೇಕು. ಆಧ್ಯಾತ್ಮ ಮತ್ತು ಸಂಸ್ಕಾರವಿಲ್ಲದ ಶಿಕ್ಷಣ ಪರಿಮಳ ಇಲ್ಲದ ಹೂವಿನಂತಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲಾ ವಾಹನಗಳಿಗೆ ಬ್ರೇಕ್ ಇದೆ. ಆದರೆ ನಮ್ಮ ಮನಸ್ಸಿಗೆ ಬ್ರೇಕ್ ಇಲ್ಲದಂತಾಗಿದೆ. ನಮ್ಮ ಮನಸ್ಸಿಗೆ ಬ್ರೇಕ್ ಎಂದರೆ ಅದು ಆಧ್ಯಾತ್ಮದ ಭಾವ ಮತ್ತು ಸಂಸ್ಕಾರವಾಗಿದೆ. ಅಂತಹ ನಮ್ಮ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ಕಿವಿಮಾತು ಹೇಳಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್. ಸುಜಾತ ಕೃಷ್ಣ ಮಾತನಾಡಿ, ಶಾಲೆಯಲ್ಲಿ ಒಂದನೇ ತರಗತಿಯಿಂದ 10 ನೇ ತರಗತಿಯವರೆಗೆ ಎಲ್ಲಾ ಶಿಕ್ಷಕರು ಬಾಲವಿಕಾಸ ತರಗತಿಗಳನ್ನು ತೆಗೆದುಕೊಂಡು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದಾರೆ. ವಿದ್ಯೆ ಜೀವನಕ್ಕಾಗಿ ಅಲ್ಲ, ಜೀವನದ ಸಾರ್ಥಕತೆಗಾಗಿ ಎಂದು ಸ್ವಾಮಿ ಹೇಳಿರುವಂತೆ ನಮ್ಮ ಬದುಕು ಸಾರ್ಥಕವಾಗಬೇಕು. ಮಕ್ಕಳಲ್ಲಿ ಸೇವೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿದಾಗ ಅವರು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
Read also : ದಾವಣಗೆರೆ: ಏಕಲವ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಶಾಸ್ರೋಕ್ತ ಪೂಜಾ ವಿಧಿ-ವಿಧಾನಗಳೊಂದಿಗೆ ಶ್ರೀ ಸಾಯಿ ಅಷ್ಟೋತ್ತರ ಶತನಾಮಾವಳಿ ಮತ್ತು ಸಾಯಿ ಪಾದುಕಾ ಶತನಾಮಾವಳಿ ಹೇಳುವುದರ ಮೂಲಕ ಶ್ರೀ ಸತ್ಯ ಸಾಯಿ ಪಾದುಕಾ ಪೂಜೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವಿ.ಎಸ್.ರೆಡ್ಡಿ , ವನಜಾ ರೆಡ್ಡಿ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಿಕ್ಷಕಿ ಬಿ.ಶ್ರೀ ದೇವಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
