ದಾವಣಗೆರೆ: ಸಹಕಾರ ಕ್ಷೇತ್ರ ಹೆಮ್ಮರವಾಗಿ ಬೆಳೆದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಫಲ ಲಭಿಸಿದರೆ ಸಹಕಾರ ಕ್ಷೇತ್ರಕ್ಕೆ ಹೆಸರು ಬರಲಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಆಶಿಸಿದರು.
ತಾಲ್ಲೂಕಿನ ಕುರ್ಕಿ ಗ್ರಾಮದ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ 5 ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಗಳು ಕೂಡ ಸಹಕಾರ ಕ್ಷೇತ್ರಕ್ಕೆ ಸಹಕಾರ ನೀಡಬೇಕಿದೆ. ಸಹಕಾರ ಸಂಘಗಳ ಮೂಲಕ ಎಲ್ಲ ರೈತರಿಗೆ ಸಾಲ ಸಿಗಬೇಕು ಎನ್ನುವುದು ನಮ್ಮ ಬಯಕೆಯಾಗಿದೆ. ಆದರೆ, ಈ ಕ್ಷೇತ್ರದಲ್ಲಿ ಆರ್ಥಿಕ ಮುಗ್ಗಟ್ಟು ಇರುವುದು ಎಲ್ಲರಿಗೂ ಗೊತ್ತಿದೆ. ಇಂಥಹ ಸಂದರ್ಭದಲ್ಲಿ ಸರ್ಕಾರ ಹೆಚ್ಚು ಅನುದಾನ ನೀಡಿ ಸಂಘಗಳ ಕೈ ಹಿಡಿಯಬೇಕಾದ ಅಗತ್ಯವಿದೆ.
ನಬಾರ್ಡ್ ಕೂಡ ಸಾವಿರಾರು ಕೋಟಿ ರೂ ಸಾಲ ಕಡಿತಗೊಳಿಸಿರುವುದರಿಂದ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಸಾಧ್ಯವಾಗುತಿಲ್ಲ. ಇಂಥಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬರುವ ದಿನಗಳಲ್ಲಿ ನಬಾರ್ಡ್ ಕಡಿತ ಮಾಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೂಡ ಸಹಕಾರ ಸಂಘಗಳಿಗೆ ವಿಶೇಷ ಅನುದಾನ ನೀಡಲು ಮುಂದೆ ಬರಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು. ಸಹಕಾರ ಕ್ಷೇತ್ರದಲ್ಲಿ ಯುವಕರು ಮತ್ತು ಮಹಿಳೆಯರು ಸಕ್ರ‍್ರಿಯವಾಗಿ ಭಾಗವಹಿಸಿದರೆ ಮಾತ್ರ ಸಂಘಗಳು ಅಭಿವೃದ್ಧಿ ಕಾಣಲು ಸಾಧ್ಯ. ಸಹಕಾರ ಸಂಘಗಳ ನಿರ್ದೇಶಕ, ಅಧ್ಯಕ್ಷರ ಹೀಗೆ ಎಲ್ಲ ಹಂತದ ಹುದ್ದೆಗಳನ್ನು ಯುವಕರು ಮತ್ತು ಮಹಿಳೆಯರು ನಿಭಾಯಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸರ್ಕಾರ ನೀಡುವ ಬಡ್ಡಿ ಸಹಾಯಧನ ಶೇ.3 ರಿಂದ 1.75 ಗೆ ಇಳಿಕೆಗೊಂಡಿದ್ದು, ಈ ಸಂಬಂಧ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸರ್ಕಾರದ ಗಮನ ಸೆಳೆದು ಪಿಎಸಿಎಸ್ ಕಾರ್ಯದರ್ಶಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಹಳ್ಳಿ ಉದ್ಧಾರವಾದರೆ ಮಾತ್ರ ದಿಲ್ಲಿ ಉದ್ಧಾರ ಎಂಬ ಮಾತಿದೆ. ಆದರೆ ಗ್ರಾಮೀಣ ಪ್ರದೇಶದ ರೈತರಿಗೆ ನೀಡುವ ಸಾಲದ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಬಾರ್ಡ್ನವರು ಶೇ.48 ರಷ್ಟು ಸಾಲ ನೀಡಿಕೆ ಕಡಿಮೆ ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ನೀತಿಯಾಗಿದೆ. ಆದ್ದರಿಂದ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸಿದರು.
ಗುಡಿ ಕೈಗಾರಿಕೆಗಳು, ಹೈನುಗಾರಿಕೆ, ಮೀನುಗಾರಿಕೆ ಹೆಚ್ಚು ಅಭಿವೃದ್ಧಿಯಾಗಬೇಕಾ ದರೆ ಅವರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಈ ಉದ್ಯಮ ಆರಂಭಿಸಲು ಬ್ಯಾಂಕುಗಳ ಸಾಲ ನೀಡಲು ಒಪ್ಪುವುದಿಲ್ಲ. ಸಾಲ ನೀಡಲು ಬ್ಯಾಂಕುಗಳು ಸಿಬಿಲ್ ಸ್ಕೋರ್ ಕೇಳುತ್ತವೆ. ಇದಕ್ಕೆ ಪರಿಹಾರ ಏನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಿದರೆ ಸಹಕಾರ ಕ್ಷೇತ್ರ ನಿಜವಾಗಿಯೂ ಅಭಿವೃದ್ಧಿ ಕಾಣಲಿದೆ ಎಂದರು.
ಇದಕ್ಕೂ ಮುನ್ನ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, “ಸಹಕಾರಿ ಉದ್ಯಮ ಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ” ಕುರಿತು ಉಪನ್ಯಾಸ ನೀಡಿದರು.
ಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುಳಾ ಗಣೇಶಪ್ಪ, ಜೆ.ಎಸ್.ವೇಣುಗೋಪಾಲ ರೆಡ್ಡಿ, ಕೆ.ಜಿ.ಸುರೇಶ್, ಜಗದೀಶಪ್ಪ ಬಣಕಾರ್, ಉಪಾಧ್ಯಕ್ಷ ಬಿ.ಶೇಖರಪ್ಪ, ಶಿಮುಲ್ ಉಪಾಧ್ಯಕ್ಷ ಚೇತನ್ ಎಸ್.ನಾಡಿಗೇರ್, ಎಚ್.ಬಿ.ಭೂಮೇಶ್ವರಪ್ಪ, ಯೂನಿಯನ್ ನಿರ್ದೇಶಕ ಎಚ್.ಆರ್.ಸಿದ್ದೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
