ದಾವಣಗೆರೆ: ಭಾರತ ಸಂಸ್ಕೃತ ವೈಭವ ಇದೊಂದು ವಿನೂತನವಾದ ವಸ್ತು ಪ್ರದರ್ಶನವಾಗಿದೆ. ಮಕ್ಕಳಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಸಕರಾದ ಬಿ. ರವಿಚಂದ್ರ ಹೇಳಿದರು.
ನಗರದ ಪಿ.ಜೆ. ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ‘ಭಾರತ ಸಂಸ್ಕೃತಿ ವೈಭವ’ ಸೃಜನಶೀಲತೆಯ ಅನಾವರಣ” ಎಂಬ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಇದನ್ನು ಸದುಪಯೋಗ ಮಾಡಿಕೊಳ್ಳಿರಿ. ಪ್ರತಿ ದಿನ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ ಎಂದು ಕಿವಿಮಾತು ಹೇಳಿದರು.
ಎಲ್ಲಾ ಧರ್ಮಗಳಿಗೂ ಪ್ರವರ್ತಕರಿದ್ದಾರೆ. ಆದರೆ ಭಾರತದ ಸನಾತನ ಧರ್ಮಕ್ಕೆ ಒಬ್ಬ ವ್ಯಕ್ತಿ ಪ್ರವರ್ತಕನಾಗಿಲ್ಲ. ಇದು ಋಷಿ ಮುನಿಗಳಿಂದ ಉದಯಿಸಿ, ಎಲ್ಲರನ್ನು ಒಗ್ಗೂಡಿಸುವ ಧರ್ಮವಾಗಿದೆ. ವಿವಿಧತೆಯಲ್ಲಿ ಏಕತೆ ಭಾರತ ಸಂಸ್ಕೃತಿಯ ವೈಶಿಷ್ಠತೆಯಾಗಿದೆ. ನಮ್ಮ ದೇಶದ ಸಂಸ್ಕೃತಿ. ನಮ್ಮ ಹೆಮ್ಮೆ. ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ತಿಳಿದುಕೊಳ್ಳಬೇಕೆಂದರು.
ವಿದ್ಯೆ ಕಲಿಸುವ ತಂದೆ, ಬುದ್ದಿ ಹೇಳುವ ಗುರುಗಳು, ಬಿದ್ದಿರಲು ಬಂದು ನೋಡುವ ತಾಯಿ ಇವರು ದೇವರಂತೆ. ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಾದರೆ ಮತ್ತು ನೆಮ್ಮದಿ ಶಾಂತಿಯಿಂದ ಇರಬೇಕೆಂದರೆ ತಂದೆ ತಾಯಿ ಮತ್ತು ಗುರುಗಳ ಮಾತನ್ನು ಕೇಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರಾದ ಎ.ಎನ್. ನಿಂಗಪ್ಪ ಮಾತನಾಡಿ, ಮಕ್ಕಳು ಇಡೀ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಬೇಕಾದ ಕಾರ್ಯಕ್ರಮಗಳನ್ನು ನಿಮ್ಮ ಶಾಲೆ ನಡೆಸುತ್ತಿದೆ. ಬಾಲ್ಯದಿಂದಲೇ ಮೌಲ್ಯಗಳನ್ನು ಬೆಳೆಸಿಕೊಂಡರೆ, ಶ್ರೇಷ್ಠ ವ್ಯಕ್ತಿಗಳಾಗಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಕ್ಕಳ ಬೌದ್ಧಿಕ ಮಟ್ಟ ಹಾಗೂ ಅವರಲ್ಲಿರುವ ಸೃಜನಾತ್ಮಕ ಕಲೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ಈಶ್ವರಮ್ಮ ಶಾಲೆ ಉತ್ತಮ ವೇದಿಕೆ ಕಲ್ಪಿಸಿದಡ. ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಇಂತಹ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಪ್ರೀತಿಸಿ, ಅನ್ಯ ಸಂಸ್ಕೃತಿಯನ್ನು ಗೌರವಿಸಬೇಕು. ವಿದ್ಯೆ ಜೀವನಕ್ಕಾಗಿ ಅಲ್ಲ, ಜೀವನದ ಸಾರ್ಥಕತೆಗಾಗಿ ಎಂದು ಶ್ರೀ ಸತ್ಯ ಸಾಯಿ ಬಾಬಾರವರು ಹೇಳಿದ ಹೇಳಿರುವಂತೆ ನಮ್ಮ ಬದುಕು ವಿದ್ಯೆಯಿಂದ ಸಾರ್ಥಕವಾಗಬೇಕು. ಮಕ್ಕಳಲ್ಲಿ ಸೇವೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸಿದಾಗ ಅವರು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಭಾರತ ಸಂಸ್ಕೃತಿ ವೈಭವದಲ್ಲಿ ವಿದ್ಯಾರ್ಥಿಗಳು ಭಾರತೀಯ ವೈವಿದ್ಯತೆಗಳ ಕಲಾಕೃತಿಗಳನ್ನು ಹಬ್ಬ ಹರಿದಿನಗಳನ್ನು, ಸನಾತನ ಧರ್ಮದ ಕೃತಿಗಳನ್ನು, ವಿವಿಧ ಧರ್ಮದ ಧರ್ಮ ಗ್ರಂಥಗಳು, ಬುಡಕಟ್ಟು ಜನಾಂಗ, ಭಾರತದ ಹಳ್ಳಿಯ ಸೊಬಗು. ಜಾತ್ರೆ ಪರಿಷೆಗಳು, ಭಾರತೀಯ ಹಬ್ಬಗಳು, ರಾಮಾಯಣ ಪ್ರತಿಬಿಂಬಿಸುವ ಗೊಂಬೆಯಾಟ, ಭಾರತದ ಆಹಾರ ವೈವಿದ್ಯತೆ, ಪೂಜಾ ಪರಿಕರಗಳು ಮುಂತಾದ ಕಲಾ ಕೃತಿಗಳನ್ನು ಸೃಜನಶೀಲತೆಯಿಂದ ಮಾಡಿರುವುದು ಕಂಡುಬಂದಿತು.
ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಸದಸ್ಯರಾದ ಕೆ.ವಿ. ಸುಜಾತ, ಶಾಲಾ ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್ , ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಾಲಾ ಮಂತ್ರಿ ಮಂಡಲ ವಿದ್ಯಾರ್ಥಿಗಳು ಮತ್ತು ಗುರುವೃಂದದವರು ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕಿ ಬಿ. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಆಗಮಿಸಿ, ಈ ವಸ್ತು ಪ್ರದರ್ಶನವನ್ನು ವಿಕ್ಷೀಸಿ, ಸದುಪಯೋಗ ಪಡೆದುಕೊಂಡರು.
ಅಂಕ ಗಳಿಕೆಯೊಂದೇ ಜೀವನದ ಗುರಿಯಲ್ಲ. ಮೊಬೈಲ್ ನೋಡುವುದನ್ನು ಬಿಟ್ಟು ಒಳಾಂಗಣ & ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಿರಿ. ಮತ್ತೊಬ್ಬರಿಗೆ ತೊಂದರೆ ಮತ್ತು ನೋವು ಮಾಡದ ರೀತಿಯಲ್ಲಿ ಸಾರ್ಥಕವಾದ ಜೀವನವನ್ನು ನಡೆಸುವಂತವರಾಗಬೇಕು.-ಬಿ.ರವಿಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಕರು, ದಾವಣಗೆರೆ.
