ದಾವಣಗೆರೆ : ಹೆಣ್ಣನ್ನು ಪೌರಾಣಿಕ ಕಾಲದಿಂದಲೂ ದ್ವಿತೀಯ ದರ್ಜೆಯಾಗಿ ಕಾಣಲಾಗುತ್ತಾ ಬರಲಾಗಿದೆ. ಅತಂಹ ಸಂಕಟದಲ್ಲಿ ಹೆಣ್ಣು ಪುರುಷ ಪ್ರಧಾನ ಸಮಾಜದಲ್ಲಿ ಅನುಭವಿಸಿದ ನೋವು ಯಾತನೆ, ಶೋಷಣೆ ಕಲ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಖ್ಯಾತ ಕವಯತ್ರಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಹೇಳಿದರು
ನಗರದ ಎ.ವಿ.ಕೆ ಮಹಿಳಾ ಕಾಲೇಜು ಮತ್ತು ಬೇರು-ಚಿಗುರು ವೇದಿಕೆ ಸಹಯೋಗದೊಂದಿಗೆ ಆಯೋಜನೆ ಮಾಡಿದ್ದ “ಕನ್ನಡ ಸಾಹಿತ್ಯ : ಮಹಿಳಾ ಸಂವೇದನೆ” ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಂಪರೆಯ ಒಳಗೆ ಒಂದಲ್ಲ ಒಂದು ಕಾರಣದಿಂದ ಹೆಣ್ಣನ್ನು ದೈಹಿಕ ರಚನೆಯಲ್ಲಿ ನೋಡುತ್ತಾ ಬರಲಾಗಿದೆ. ಅವಳನ್ನು ಪುರುಷ ಪ್ರಧಾನ ಸಮಾಜ ಲೈಂಗಿಕ ಸರಕಾಗಿ ಬಳಸಿಕೊಂಡದ್ದು ವಿಷಾದನೀಯ ಸಂಗತಿ. ಹಾಗೆಂದ ಮಾತ್ರಕ್ಕೆ ಎಲ್ಲಾ ಪುರುಷರು ಕೆಟ್ಟವರಲ್ಲ, ಒಳ್ಳವರಲ್ಲ. ಅದೇ ರೀತಿ ಎಲ್ಲಾ ಹೆಣ್ಣು ಮಕ್ಕಳು ಒಳ್ಳವರಲ್ಲ ಮತ್ತು ಕೆಟ್ಟವರಲ್ಲ ಎಂದು ಹೇಳಿದರು.
ಕನ್ನಡದ ಪ್ರಾಚೀನ ಕಾಲಘಟ್ಟದ ಸಾಹಿತ್ಯದಿಂದ ಇಂದಿನ ಹೊಸ ತಲೆಮಾರಿನ ಬರಹಗಾರರ ವರೆಗೂ ಹೆಣ್ತನದ ಆಂತರಿಕ ಸಂವೇದನೆಯನ್ನು ಇಟ್ಟುಕೊಂಡು ಬರೆದಿರುವುದು ನೋಡುತ್ತೇವೆ. ಪರಂಪರೆಯ ಒಳಗೆ ಅನೇಕ ಕವಿಗಳು ಆಯ ಘಟಕ್ಕೆ ಸಾಹಿತ್ಯ ಕೃತಿಗಳಲ್ಲಿ ಭಿನ್ನ ಭಿನ್ನ ಮಾದರಿಯಲ್ಲಿ, ಭಿನ್ನ ಭಿನ್ನ ನೋಟದಲ್ಲಿ ಚಿತ್ರಿಸಿರುವುದು ನೋಡುತ್ತೇವೆ ಎಂದರು.
ಪ್ರಬಂಧ ಮಂಡನೆಯ ಆರು ಹೊತ್ತಿಗೆಯನ್ನು ಲೋಕಾರ್ಪಣೆಗೊಳಿದ ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಮಾತನಾಡಿ, ಧರ್ಮದ ಕಾರಣದಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಅಂತಹದ್ದರ ನಡುವೆ ನಾವು ಜಾಗ್ರುತವಾಗಬೇಕಿದೆ. ಅಷ್ಟೇ ಅಲ್ಲದೆ ನಾವು ಸಾಹಿತ್ಯ ಕೃತಿಗಳನ್ನು ಹೆಚ್ಚು ಹೆಚ್ಚು ಓದುವ ಮೂಲಕ ನಾವು ಸಮ ಸಮಾಜ ಕಟ್ಟಬೇಕಿದೆ ಎಂದರು.
ಡಾ. ಕರಿಯಪ್ಪ ಮಾಳಗಿ ಮಾತನಾಡಿ, ಸಾಹಿತ್ಯ ಎಂದರೆ ಸಂಭ್ರಮ, ಸಾಹಿತ್ಯ ಓದುವುದೇ ಸಂಭ್ರಮ, ಸಾಹಿತ್ಯ ವಿಚಾರವನ್ನು ಕುರಿತು ವಿಚಾರ ಕೇಳುವುದೇ ಸಂಭ್ರಮ ಆ ನಿಟ್ಟಿನಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದರು.
Read also : ಶ್ರೀ ಸತ್ಯ ಸಾಯಿ ಜನ್ಮ ಶತಮಾನೋತ್ಸ|ಯಶಸ್ವಿ ವ್ಯಕ್ತಿಗಳ ಸಂಗದಿಂದ ಯಶಸ್ಸು ಸಾಧ್ಯ: ಕೆ.ಎಂ.ಗಂಗಾಧರಸ್ವಾಮಿ
ಶ್ರೀಮತಿ ಜಿ.ಎಸ್. ಸುಶೀಲಾ ಆರ್ ರಾವ್ ಅವರು ನವೋದಯ ಪೂರ್ವ ಮತ್ತು ನಂತರದ ಕಾಲ ಘಟ್ಟದ ಬರಹಗಳು ಅಂದಿನ ತಲೆಮಾರಿನ ಮೇಲೆ ಗಾಢವಾದ ಪ್ರಭಾವ ಬೀರುವ ಮೂಲಕ ಆ ತಲೆಮಾರಿನವರಿಗೆ ಪ್ರೇರಣೆ ನೀಡಿತು ಎಂದರು.
ಮೊದಲಮೊದಲ ಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಹಿರಿಯಡ್ಕ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಶಟ್ಟಿ ಅವರು ಪ್ರಾಚೀನ ಕನ್ನಡ ಸಾಹಿತ್ಯ: ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.
ಎರಡನೇ ಗೋಷ್ಠಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಶುಭ ಮರವಂತೆ ಅವರು ವಚನ-ಷಟ್ಪದಿ-ಸಾಂಗತ್ಯ ಕಾವ್ಯಗಳು : ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.
ಮೂರನೇ ಗೋಷ್ಠಿಯಲ್ಲಿ ಖ್ಯಾತ ವಿಮರ್ಶಕಿ ಪ್ರೊ. ತಾರಿಣಿ ಶುಭದಾಯಿನಿ ಅವರು ಕೀರ್ತನೆ ಮತ್ತು ತತ್ವಪದ ಸಾಹಿತ್ಯ: ಮಹಿಳಾ ಸಂವೇದನೆ ಕುರಿತು ವಿಚಾರ ಮಂಡಿಸಿದರು.
ನಂತರ ನಾಡಿನ ಅನೇಕ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರು ತಮ್ಮ ಪ್ರಬಂಧ ಮಂಡಿಸಿದರು.
ಕು|| ದೀಪಾ ಜಿ.ಟಿ ಮತ್ತು ತಂಡದವರು ಪ್ರಾರ್ಥಿಸಿದರು. ಎ.ವಿ.ಕೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ಸ್ವಾಗತಿಸಿದರು.
ಬೇರು-ಚಿಗುರು ವೇದಿಕೆಯ ಕಾರ್ಯದರ್ಶಿ ಅಂಜಿನಪ್ಪ, ಪ್ರಾಸ್ತಾವಿಕ ನುಡಿಗಳಾಡಿದರು. ಎ.ಎಂ.ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಾಗೇಶಪ್ಪ ಕೆ ವಂದಿಸಿದರು. ಎ.ವಿ.ಕೆ. ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಕವಿತ ಆರ್.ಜಿ. ಮತ್ತು ಡಾ. ಲೋಹಿತ್ ಹೆಚ್.ಎಂ. ನಿರೂಪಿಸಿದರು.
