ದಾವಣಗೆರೆ: ಗ್ರಾಮೀಣ ಪ್ರದೇಶ ಹೆಚ್ಚಾಗಿರುವ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಜನರಿಗೆ ಸರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕೆಲಸ ಮಾಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ನಗರದ ಅರುಣಾ ಟಾಕೀಸ್ ವೃತ್ತದಲ್ಲಿರುವ ಪಶು ಇಲಾಖೆ ಆವರಣದ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಅಗತ್ಯ ಇರುವ ಎಲ್ಲ ಸರ್ಕಾರಿ ಇಲಾಖೆಗಳ ಕಟ್ಟಡ, ಜ್ವಲಂತ ಸಮಸ್ಯೆಗಳು ಸೇರಿದಂತೆ ಮೂಲಭೂತ ಕೊರತೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಖರವಾದ ಅಂಕಿ-ಅಂಶ ನೀಡಿದರೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಸಹಾಯವಾಗುತ್ತದೆ ಎಂದರು.
ಸಿಡಿಪಿಒ ಅಭಿಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ 44 ಹೊಸ ಅಂಗನವಾಡಿ ಕಟ್ಟಡಗಳು ಅಗತ್ಯವಿದ್ದು, ಈ ಸಂಬಂಧ ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 197 ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿಗಳು ನಡೆಯುತ್ತಿವೆ. ಈ ಪೈಕಿ ನಗರ ಪ್ರದೇಶದಲ್ಲಿ 157, ಗ್ರಾಮೀಣ ಪ್ರದೇಶದಲ್ಲಿ 38 ಇವೆ. ಶಿಥಿಲಗೊಂಡಿರುವ 44 ಕಟ್ಟಡಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹೊಸ ಕಟ್ಟಡ ನಿರ್ಮಾಣದ ವೇಳೆ ಶೌಚಾಲಯ ಮತ್ತು ಅಡುಗೆ ಮನೆಗೆ ಮೊದಲ ಆದ್ಯತೆ ನೀಡಬೇಕು. ಮಕ್ಕಳು ಹಾಗೂ ತಾಯಂದಿರಿಗೆ ಹೆಚ್ಚಿನ ಪೌಷ್ಠಿಕ ಆಹಾರ ಧಾನ್ಯಗಳ ಅಗತ್ಯಇದ್ದರೆ ಇದರ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ದೇವರಾಜ್ ಮಾತನಾಡಿ, ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಟ್ಟಡಗಳಿವೆ. ಆದರೆ ಆಲೂರು ಗ್ರಾಮದಲ್ಲಿ ಪಿಎಚ್‌ಸಿ ಕಟ್ಟಡ ಶಿಥಿಲಗೊಂಡಿದ್ದು, ಇಲ್ಲಿ ಹೊಸ ಕಟ್ಟಡದ ಅಗತ್ಯವಿದೆ. ಈ ಬಗ್ಗೆ ತಮ್ಮ ಗಮನಕ್ಕೆ ತರಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕ್ಷೇತ್ರದಲ್ಲಿ ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು. ಅಧಿಕಾರಿಗಳು ನೀಡುವ ಸಮರ್ಪಕ ಮಾಹಿತಿ ಆಧರಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ಅಗತ್ಯ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪೂರಕ ಕೆಲಸ ಮಾಡಲು ಅವಕಾಶವಾಗುತ್ತದೆ ಎಂದರು.
ಆಲೂರು ಪಿಎಚ್‌ಸಿಗೆ ಭೇಟಿ ನೀಡಿದಾಗ ಅವಧಿ ಮೀರಿದ ಔಷಧಿಗಳು ಇರುವುದು ನಮ್ಮ ಗಮನಕ್ಕೆ ಬಂದಿದೆ. ಅಗತ್ಯಕ್ಕೆ ಅನುಗುಣವಾಗಿ ಔಷಧಿಗಳನ್ನು ತರಿಸಬೇಕು. ಗ್ರಾಮೀಣ ಪ್ರದೇಶಗಳ ಜನರ ಜೀವದ ಜೊತೆಗೆ ಚೆಲ್ಲಾಟ ಆಡಬಾರದು. ಇಂತಹ ಪ್ರಕರಣಗಳು ಮರುಕಳಿಸಿದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮಾಸಿಕ ಅಗತ್ಯ ಇರುವಷ್ಟು ಔಷದಿಗಳನ್ನು ಮಾತ್ರ ತರಿಸಿಕೊಳ್ಳಬೇಕು. ಒಂದು ವೇಳೆ ಅವುಗಳ ಅವಧಿ ಮುಗಿದಿದ್ದರೆ ವಾಪಾಸು ಕಳಿಸಬೇಕು ಎಂದು ತಾಕೀತು ಮಾಡಿದರು.
ಕಳೆದ 4 ವರ್ಷದಿಂದ ಆಶ್ರಯ ಮನೆಗಳನ್ನು ಸರ್ಕಾರ ನೀಡಿಲ್ಲ. ಬರುವ ಮಾರ್ಚ್ ವೇಳೆಗೆ ಆಶ್ರಯ ಮನೆಗಳನ್ನು ಸರ್ಕಾರ ನೀಡುವ ಉತ್ಸಾಹದಲ್ಲಿದೆಯಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಜನರ ಪ್ರತಿ ಮನೆಗೆ ನೀಡುವ ಅನುದಾನ ಕೂಡ ಹೆಚ್ಚಾಗಲಿದೆ. ಹಾಗಾಗಿ ನೈಜ ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರು ಹೇಳಿದರು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ, ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಕೆಗಳ ಅಧಿಕಾರಿಗಳು ಅಗತ್ಯ ಬೇಡಿಕೆಗಳ ಪಟ್ಟಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್. ತಾಪಂ ಇಪ ರಾಮಭೋವಿ, ಸಮಿತಿ ಸದಸ್ಯರಾದ ರೇಣುಕಮ್ಮ, ಸಾಕಮ್ಮ, ಮಂಜುನಾಥ್ , ಬಸಣ್ಣ ಇತರರು ಉಪಸ್ಥಿತರಿದ್ದರು.
ಸಭೆಗೆ ಬಿಇಒ ಗೈರು: ಶಿಸ್ತು ಕ್ರಮಕ್ಕೆ ಸೂಚನೆ….ಕಳೆದ ನಾಲ್ಕು ಸಭೆಗಳಿಗೆ ನಿರಂತರ ಗೈರು ಹಾಜರಾಗಿರುವ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯ ಪರವಾಗಿ ಸಭೆಗೆ ಆಗಮಿಸಿದ್ದ ಇಲಾಖೆಯ ಅಧಿಕಾರಿಯನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿದ ಶಾಸಕರು, ಸತತ ಗೈರು ಹಾಜರಿ ಕುರಿತು ಕಾರಣ ಕೇಳಿ ಅಂತಿಮ ನೋಟಿಸ್ ಜಾರಿ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ರಾಮಭೋವಿ, ಜಿಪಂ ಉಪಕಾರ್ಯದರ್ಶಿ ಮಮತಾ ಹೊಸಗೌಡರ್ ಅವರಿಗೆ ಸೂಚನೆ ನೀಡಿದರು.
