ದಾವಣಗೆರೆ.ಡಿ.13: ಮಂಡ್ಯ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರ ನೀಡಿ ವಂಚಿಸಿದ್ದ ಇಬ್ಬರನ್ನು ಬಂಧಿಸಿ 5,90 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ಹಾಡೋನಹಳ್ಳಿ ಗ್ರಾಮದ ಪರಶುರಾಮ ಮತ್ತು ಜಿಲ್ಲೆಯ ನ್ಯಾಮತಿ ತಾಲೂಕು ದಾನಿಹಳ್ಳಿ ಗ್ರಾಮದ ಮನೋಜ ಬಂಧಿತರು. ಮಳವಳ್ಳಿ ತಾಲೂಕಿನ ಕುಂದೂರು ಗ್ರಾಮದ ಮೂರ್ತಿ ಅವರಿಗೆ ಕರೆ ಮಾಡಿ ಮನೆಯ ಪಾಯ ಅಗೆಯುವಾಗ 4 ಕೆ.ಜಿ ಯಷ್ಟು ಬಂಗಾರ ಸಿಕ್ಕಿದ್ದು, ಮಾರುಕಟ್ಟೆ ದರಕ್ಕಿಂತ ಅರ್ಧ ಬೆಲೆಗೆ ಕೊಡುವುದಾಗಿ ನಂಬಿಸಿದ್ದರು.
ಆರೋಪಿಗಳ ಮಾತು ನಂಬಿದ ಮೂರ್ತಿ 6 ಲಕ್ಷ ರೂಗಳೊಂದಿಗೆ ಹೊನ್ನಾಳಿಯ ಹಿರೇಮಠದ ಸರ್ಕಲ್ ಬಳಿ ಬಂದ ಕೆ.ವಿ.ಮೂರ್ತಿಗೆ ಅಸಲಿ ಚಿನ್ನದ ಬಿಲ್ಲೆ ಕೊಟ್ಟಿದ್ದರು.
ಬಂಗಾರದ ಅಂಗಡಿಯಲ್ಲಿ ಚಿನ್ನ ಅಸಲಿ ಎಂಬುದನ್ನು ಖಾತ್ರಿಪಡಿಸಿಕೊಂಡ ಮೂರ್ತಿಯಿಂದ 6 ಲಕ್ಷ ರೂ. ಪಡೆದು ಬಟ್ಟೆ ಗಂಟನ್ನು ಕೊಟ್ಟು ಹೋಗಿದ್ದರು. ಇದರಲ್ಲಿದ್ದ 150 ಗ್ರಾಂ ಬಿಲ್ಲೆಗಳನ್ನು ಚಿನ್ನದಂಗಡಿಯಲ್ಲಿ ಪರೀಕ್ಷಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ನಿರೀಕ್ಷಕ ಹೆಚ್.ಸುನೀಲ್ ಕುಮಾರ್ ನೇತೃತ್ವದ ಅಧಿಕಾರಿ, ಸಿಬ್ಬಂದಿಯನ್ನು ಒಳಗೊಂಡ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಪರಶುರಾಮನ ಮೇಲೆ ಈ ಹಿಂದೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಿಡುಗಡೆ ಹೊಂದಿದ್ದ. ತದ ನಂತರ ಹೊನ್ನಾಳಿ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
