ಪೋಕ್ಸೋ (POCSO – Protection of Children from Sexual Offences) ಕಾಯ್ದೆ, 2012 ಮಕ್ಕಳ ರಕ್ಷಣೆಗಾಗಿ ಇರುವ ಅತ್ಯಂತ ಪ್ರಬಲ ಕಾನೂನುಗಳಲ್ಲಿ ಒಂದಾಗಿದೆ. ಈ ಕಾಯ್ದೆಯಡಿ ಮಕ್ಕಳ ಸುರಕ್ಷತೆ, ತನಿಖೆ, ನ್ಯಾಯಾಂಗ ಪ್ರಕ್ರಿಯೆ ಮತ್ತು ಸಂತ್ರಸ್ತರಿಗೆ ನೀಡಲಾಗುವ ಪರಿಹಾರಗಳ ಕುರಿತು ಸಮಗ್ರ ವಿವರಗಳು ಇಲ್ಲಿವೆ.
1. ಪೋಕ್ಸೋ ಕಾಯ್ದೆಯ ಪ್ರಮುಖ ನಿಯಮಗಳು : ಈ ಕಾಯ್ದೆಯು 18 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳನ್ನು ‘ಮಕ್ಕಳು’ ಎಂದು ಪರಿಗಣಿಸುತ್ತದೆ.
ವರದಿ ಮಾಡುವುದು ಕಡ್ಡಾಯ: ಮಗುವಿನ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದ ಯಾವುದೇ ವ್ಯಕ್ತಿ ಪೊಲೀಸರಿಗೆ ಅಥವಾ ‘ಚೈಲ್ಡ್‌ಲೈನ್’ (1098) ಗೆ ಮಾಹಿತಿ ನೀಡುವುದು ಕಡ್ಡಾಯ. ವರದಿ ಮಾಡದಿದ್ದರೆ ಜೈಲು ಶಿಕ್ಷೆಯ ನಿಬಂಧನೆಯೂ ಇದೆ.
ಮಕ್ಕಳ ಸ್ನೇಹಿ ತನಿಖೆ: ಮಗುವಿನ ಹೇಳಿಕೆಯನ್ನು ಅವರ ಮನೆಯಲ್ಲಿ ಅಥವಾ ಅವರಿಗೆ ಕಂಫರ್ಟ್ ಅನಿಸುವ ಸ್ಥಳದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೇ ದಾಖಲಿಸಬೇಕು. ಪೊಲೀಸರು ಸಮವಸ್ತ್ರದಲ್ಲಿರಬಾರದು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಮಕ್ಕಳ ಸ್ನೇಹಿ ಪೊಲೀಸರು ಇರಲೇಬೇಕು. ಇದಕ್ಕೆ ಎಸ್‌ಜೆಪಿಯು ಎಂದು ಕರೆಯುತ್ತಾರೆ.
ಗೌಪ್ಯತೆ: ಸಂತ್ರಸ್ತ ಮಗುವಿನ ಹೆಸರು, ವಿಳಾಸ ಅಥವಾ ಶಾಲೆಯ ಮಾಹಿತಿಯನ್ನು ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ.
2. ಪ್ರಮುಖ ಸಮಿತಿಗಳು ಮತ್ತು ಅವುಗಳ ಪಾತ್ರ : ಕರ್ನಾಟಕದಲ್ಲಿ ಪೋಕ್ಸೋ ಕಾಯ್ದೆಯ ಅನುಷ್ಠಾನಕ್ಕಾಗಿ ಹಲವು ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ
ಮಕ್ಕಳ ಕಲ್ಯಾಣ ಸಮಿತಿ (Child Welfare Committee – CWC): ಪ್ರತಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಈ ಸಮಿತಿಯು ಸಂತ್ರಸ್ತ ಮಗುವಿನ ರಕ್ಷಣೆ ಮತ್ತು ಪುನರ್ವಸತಿಯ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತದೆ. ಮಗುವಿಗೆ ತಕ್ಷಣದ ಆಶ್ರಯ ಬೇಕಾದಲ್ಲಿ ಅದನ್ನು ಒದಗಿಸುತ್ತದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA): ಇದು ಸಂತ್ರಸ್ತರಿಗೆ ಉಚಿತ ಕಾನೂನು ನೆರವು ಮತ್ತು ಸರ್ಕಾರದ ವತಿಯಿಂದ ನೀಡಲಾಗುವ ಪರಿಹಾರ ಧನವನ್ನು (Compensation) ಕೊಡಿಸಲು ಕೆಲಸ ಮಾಡುತ್ತದೆ.

ವಿಶೇಷ ಪೋಕ್ಸೋ ನ್ಯಾಯಾಲಯಗಳು: ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಗಳನ್ನು ಸ್ಥಾಪಿಸಲಾಗಿದೆ.ಇಲ್ಲಿ ಪ್ರಕರಣ ದಾಖಲಾದ ಒಂದು ವರ್ಷದೊಳಗೆ ವಿಚಾರಣೆ ಮುಗಿಯಬೇಕು ಎಂಬ ನಿಯಮವಿದೆ.
ಶಾಲಾ ಮಟ್ಟದ ಸುರಕ್ಷಾ ಸಮಿತಿ: ಕರ್ನಾಟಕ ಶಿಕ್ಷಣ ಇಲಾಖೆಯ ಆದೇಶದಂತೆ ಪ್ರತಿ ಶಾಲೆಯಲ್ಲಿ ಮಕ್ಕಳ ಸುರಕ್ಷಾ ಸಮಿತಿಯನ್ನು ರಚಿಸಬೇಕು. ಇದು ದೂರು ಪೆಟ್ಟಿಗೆಗಳನ್ನು ಇರಿಸುವುದು ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತದೆ.
3. ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಗಳು :ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಮತ್ತು ಅದರ ಜಿಲ್ಲಾ ಘಟಕಗಳು (DLSA) ಸಂತ್ರಸ್ತರಿಗೆ ಈ ಕೆಳಗಿನ ನೆರವು ನೀಡುತ್ತವೆ
ಉಚಿತ ವಕೀಲರ ಸೇವೆ: ಸಂತ್ರಸ್ತ ಮಗು ಅಥವಾ ಅವರ ಕುಟುಂಬಕ್ಕೆ ಪ್ರಕರಣವನ್ನು ನಡೆಸಲು ಉಚಿತವಾಗಿ ವಕೀಲರನ್ನು ನೇಮಿಸಲಾಗುತ್ತದೆ.
ಸಹಾಯ ವ್ಯಕ್ತಿ (Support Person): ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಯ ಸಮಯದಲ್ಲಿ ಮಗುವಿಗೆ ಮಾನಸಿಕ ಮತ್ತು ಪ್ರಾಯೋಗಿಕ ಬೆಂಬಲ ನೀಡಲು ಒಬ್ಬ ‘ಸಹಾಯ ವ್ಯಕ್ತಿ’ಯನ್ನು ನೇಮಿಸಲು ನೆರವಾಗುತ್ತದೆ.
ಅರಿವು ಮೂಡಿಸುವಿಕೆ: ಗ್ರಾಮೀಣ ಮಟ್ಟದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತದೆ.
4. ಪುನರ್ವಸತಿ ಮತ್ತು ಪರಿಹಾರ ಯೋಜನೆಗಳು : ಸಂತ್ರಸ್ತ ಮಗುವಿನ ಚೇತರಿಕೆಗಾಗಿ ಸರ್ಕಾರ ಮತ್ತು ನ್ಯಾಯಾಲಯವು ವಿವಿಧ ಸೌಲಭ್ಯಗಳನ್ನು ಒದಗಿಸುತ್ತವೆ
ಅ) ಆರ್ಥಿಕ ಪರಿಹಾರ (Victim Compensation Scheme) ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆಯಡಿ (Victim Compensation Scheme) ಸಂತ್ರಸ್ತರಿಗೆ ಈ ಕೆಳಗಿನಂತೆ ಆರ್ಥಿಕ ಸಹಾಯ ಸಿಗುತ್ತದೆ. ತಕ್ಷಣದ ಪರಿಹಾರ (Interim Compensation): ಎಫ್.ಐ.ಆರ್ (FIR) ದಾಖಲಾದ 15-30 ದಿನಗಳೊಳಗೆ ಮಗುವಿನ ತುರ್ತು ಅಗತ್ಯಗಳಿಗಾಗಿ ಮಧ್ಯಂತರ ಪರಿಹಾರವನ್ನು ನೀಡಲಾಗುತ್ತದೆ.
ಗರಿಷ್ಠ ಪರಿಹಾರ: ಅತ್ಯಾಚಾರ ಅಥವಾ ತೀವ್ರ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಅವರ ಹಾನಿಯ ತೀವ್ರತೆಗೆ ಅನುಗುಣವಾಗಿ 3 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡುವ ಅವಕಾಶವಿದೆ. ಇದು ಡಿಜಿಟಲ್ ಪೋರ್ಟಲ್ ಮೂಲಕ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಆ)ಪುನರ್ವಸತಿ ಸೌಲಭ್ಯಗಳು : ವೈದ್ಯಕೀಯ ಮತ್ತು ಮಾನಸಿಕ ನೆರವು: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಕನಿಷ್ಠ 2 ವರ್ಷಗಳವರೆಗೆ ಅಥವಾ ಮಗು ಚೇತರಿಸಿಕೊಳ್ಳುವವರೆಗೆ ಮಾನಸಿಕ ತಜ್ಞರಿಂದ ಆಪ್ತ ಸಮಾಲೋಚನೆ (Counselling) ನೀಡಲಾಗುತ್ತದೆ.
ಶಿಕ್ಷಣದ ಮುಂದುವರಿಕೆ: ಮಗುವಿನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ CWC ಕ್ರಮ ವಹಿಸುತ್ತದೆ. ಅಗತ್ಯವಿದ್ದಲ್ಲಿ ಮಗುವಿನ ಗುರುತನ್ನು ಮರೆಮಾಚಿ ಬೇರೆ ಶಾಲೆಗೆ ದಾಖಲಿಸಲಾಗುತ್ತದೆ.
ಸಂಸ್ಥೆಗಳ ಆಶ್ರಯ: ಮಗುವಿಗೆ ಮನೆಯಲ್ಲಿ ಸುರಕ್ಷತೆ ಇಲ್ಲದಿದ್ದಲ್ಲಿ, ಸರ್ಕಾರಿ ಬಾಲ ಮಂದಿರಗಳಲ್ಲಿ ಅಥವಾ ಮಾನ್ಯತೆ ಪಡೆದ ಎನ್‌ಜಿಒ (NGO) ಆಶ್ರಯ ಧಾಮಗಳಲ್ಲಿ ರಕ್ಷಣೆ ನೀಡಲಾಗುತ್ತದೆ.
ನೆನಪಿಡಿ: ಮಗುವಿನ ಮೇಲೆ ದೌರ್ಜನ್ಯ ನಡೆದಾಗ ಭಯಪಡುವ ಅಗತ್ಯವಿಲ್ಲ. ತಕ್ಷಣ ಸಹಾಯಕ್ಕಾಗಿ 1098 (ಚೈಲ್ಡ್‌ಲೈನ್) ಅಥವಾ 112 (ಪೊಲೀಸ್ ಸಹಾಯವಾಣಿ) ಗೆ ಕರೆ ಮಾಡಿ. ಉಚಿತ ಕಾನೂನು ಸಲಹೆಗಾಗಿ 15100 ಗೆ ಕರೆ ಮಾಡಬಹುದಾಗಿದೆ.
ಮಹಾವೀರ ಮ.ಕರೆಣ್ಣವರ
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು
ಸದಸ್ಯ ಕಾರ್ಯದರ್ಶಿಗಳು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಾವಣಗೆರೆ.
