ಇದ್ದೇ ಇರುತ್ತದೆ
ನನ್ನನ್ನು
ನಿರ್ಮಿಸಿದ ಚರಿತ್ರೆ
ಹಾಗೂ
ನಾವು ನಿರ್ಮಿಸಿದ
ಚರಿತ್ರೆ
ಇವು ಶೇಷಗಿರಿರಾವ್ ಹವಲ್ದಾರ ಎಂಬ ಕವಿಯೊಬ್ಬನ ಮೊತ್ತ ಮೊದಲ ಕೃತಿಯಿಂದ ಆಯ್ದ ಕವಿತೆಯೊಂದರ ಸಾಲುಗಳು.
ಶೇಷಗಿರಿರಾವ್ ಹವಲ್ದಾರ್!
ಅವರನ್ನು ನೋಡಿದ್ದು ಕಡಿಮೆ.ಮಾತನಾಡಿಸಿದ್ದು ಮತ್ತೂ ಕಡಿಮೆ.ನನಗೂ ಅವರಿಗೂ ನೇರ ಸಂಪರ್ಕವಿರಲಿಲ್ಲ. ಆದರೆ ಅವರ ಶಿಷ್ಯಗಣಗಳಾದ ಪಿ.ಆರ್.ವೆಂಕಟೇಶ,ಪೀರ್ ಬಾಷ, ಲಪಾಟಿ ಖಾದರ್ ಬಾಷಾ, ಸುರೇಶ ಅಂಗಡಿ, ಮತ್ತಿಹಳ್ಳಿ.. ಇವರಂತಹ ಇನ್ನೂ ಅನೇಕರ ಪ್ರಖರ ವೈಚಾರಿಕ ಮಂಡನೆಗಳನ್ನು ಕಿವಿಗೆ ಹಾಕಿಕೊಂಡವನು.
ಆದರೆ,ಇವತ್ತಿಗೂ ಕುತೂಹಲವಿರುವುದು ಮೂವತ್ತು ಜನರ ಒಂದಿಡೀ ಕುಟುಂಬವನ್ನು ಒಂದೇ ಸೈದ್ಧಾಂತಿಕ ತಾತ್ವಿಕತೆಯ ಅಡಿಯಲ್ಲಿ ತರುವುದು ಸಾಮಾನ್ಯ ಕೆಲಸವೇನಲ್ಲ.ಇಡೀ ಕುಟುಂಬವೇ ಚಳುವಳಿಗಳಿಗೆ ತೊಡಗಿಸಿಕೊಳ್ಳುವುದು ಬಹಳ ಕಷ್ಟದ್ದು.ಕೆಳ ಮಧ್ಯಮ ವರ್ಗಗಳ ಇಂತಹ ಸಣ್ಣ ಸಣ್ಣ ಪ್ರಯತ್ನಗಳೇ..ತೊರೆಗಳಾಗಿ ನದಿಗಳಾಗಿ ಇನ್ನೂ ಹರಿಯುತ್ತಿವೆ.ಆ ಕಾರಣದಿಂದಲೇ ಏನೋ ಭಾರತದಂತಹ ವೈವಿಧ್ಯಮಯ ದೇಶ ಇನ್ನೂ ಉಸಿರಾಡಲು ಸಾಧ್ಯವಾಗಿದೆ.
೧೯೯೦ !
ಭಾರತದ ಮಟ್ಟಿಗೆ ಅಪರೂಪದ ದಶಕ.ಚಳುವಳಿಗಳ ದಶಕ ಎನ್ನಬಹುದು .ಮಂಡಲ್ ವರದಿ ಜಾರಿಗಾಗಿ ಹೋರಾಟ,ಕಮಂಡಲ ಹಿಡಿದು ರಥಯಾತ್ರೆ ಮಾಡಿದ ನೇತಾರರು,ಉದಾರೀಕರಣ,ಜಾಗತೀಕರಣದ ಅಬ್ಬರ, ಒಟ್ಟಾರೆ ಬೌದ್ಧಿಕ,ಧಾರ್ಮಿಕ,ಸಾಮಾಜಿಕಹಾಗೂ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾದ ದಶಕ.
ನಾನು ಬಿ.ಎಸ್ಸಿ.ಓದುತ್ತಿದ್ದ ಕಾಲವದು.ಹವಾಲ್ದಾರರ ಮನೆಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು ಮರುದಿನ ಗೌರ್ಮೆಂಟ್ ಲೈಬ್ರೆರಿಯ ಕಟ್ಟೆಗಳ ಮೇಲೆ ರಂಗೇರುತ್ತಿದ್ದವು.ಈಗಿನಂತೆ ವಾಟ್ಸಾಪು,ಫೇಸ್ ಬುಕ್ಕು,ಈ ಮೇಲುಗಳಿಲ್ಲದ, ಟೀವಿಗಳೂ ಇಲ್ಲದ ಸಾದಾ ಸೀದಾ ಕಾಲವದು.ಇರಬರೋ ಪೇಪರುಗಳನೆಲ್ಲ ಓದಿ..ಲೈಬ್ರರಿಯನ್ ಇನ್ನೇನು ಸಾಕು ನಡ್ರಪೋ..ಎನ್ನಬೇಕು, ಅಲ್ಲಿವರೆಗೂ ಮಾತು..ಮಾತು.
ಮಾಗಳದಿಂದ.. ಮಾಸ್ಕೋ ವರೆಗೂ,
ತಿಪ್ಪಾಪುರದಿಂದ ಯುನೆಸ್ಕೋ ವರೆಗೂ,
ಡೆಲ್ಲಿಯಿಂದ ಇಟಿಗಿವರೆಗೆ..
ಮಾತು..ಮಾತು….
ಪರ-ವಿರೋಧದ ಚರ್ಚೆಗಳು!
ಆ ಕಾಲದ ಇಂತಹ ಚರ್ಚೆಗಳು ಹುಟ್ಟುಹಾಕಿದ “ಜಾತ್ಯತೀತ”ಪ್ರಶ್ನೆಗಳಿಗೆ ಉತ್ತರವೆಂಬಂತೆ ನನ್ನ ಹಾಗೂ ನನ್ನಂತಹ ಎಷ್ಟೋ ಜನರು ಜಾತ್ಯತೀತತೆಯ ಮನುಷ್ಯರಾಗಲು ಸಾಧ್ಯವಾಯಿತು ಎನ್ನಬಹುದು.
ಶೇಷಗಿರಿ ಎಂಬ ಸಾಮಾನ್ಯ ವ್ಯಕ್ತಿ,ಕಮ್ಯುನಿಸ್ಟನೂ,ಸಮಾಜವಾದಿಯೂ ಆಗಿ ಬದುಕುವುದು ಎಷ್ಟು ಮುಖ್ಯವೋ ಆ ತಾತ್ವಿಕತೆಯನ್ನು ತನ್ನ ಸುತ್ತಲಿನ ಪರಿಸರಕ್ಕೆ ದಾಟಿಸುವುದೂ ಅಷ್ಟೇ ಸವಾಲಿನ ಕೆಲಸ.ಆ ಕೆಲಸದಲ್ಲಿ ಶೇಷಗಿರಿ ಹವಾಲ್ದಾರರು ಸಕ್ಸಸ್ ಆದರು ಎಂಬುದು ನನ್ನ ಭಾವನೆ.
ಈ ಹೊತ್ತು,ಭಾರತೀಯ ಸಮಾಜದ ಯಾವೊಂದು ರಾಜಕೀಯ ಪಕ್ಷಗಳೂ ತಮ್ಮದೇ ಪಕ್ಷಗಳ ಸಿದ್ಧಾಂತಗಳಿಗೆ ಬದ್ಧರಾಗುಳಿದಿಲ್ಲ.ಯಾವುದನ್ನು ಮುಟ್ಟಕೂಡದು.ಯಾವುದನ್ನು ಮೃದುವಾಗಿ ಮುಟ್ಟಬೇಕು,ಯಾವುದನ್ನು ಹೇಗೆ ಮುಟ್ಟಬೇಕು ಎಂಬ ವಿವೇಕ ಇಂದಿನ ಭಾರತದ ರಾಜಕಾರಣಕ್ಕಿಲ್ಲ.ಬದಲಾಗಿ, ತಮ್ಮದೇ “ಅಜೆಂಡಾ”ಗಳಿಗೆ ಬದ್ಧರಾಗುಳಿಯುವ ಅಪಾಯಕಾರಿ ಸ್ಥಿತಿಗೆ ಬಂದಿದ್ದಾರೆ.ನೇತಾರರಿಗೆ ಸೈದ್ಧಾಂತಿಕ,ತಾತ್ವಿಕ ಸಂಘರ್ಷಗಳೆಲ್ಲಮರೆತು ಹೋದದ್ದರ ಫಲವಿದು.
ನಮ್ಮ ನೇತಾರರಿಗೆ ,ಜ್ಞಾನಗಳು ಬೀಜದ ಸುತ್ತ,ಹಸು,ಎತ್ತು, ಎಮ್ಮೆ,ಆಕಳು ಕರುಗಳ ಸುತ್ತ,ಊರ ಬವಣೆಗಳ ಸುತ್ತ ಬೆಳೆಯಬೇಕಿತ್ತು.ಇವೆಲ್ಲ ನಮ್ಮ ಬದುಕಿನ ರೂಪಕಗಳು ಎಂಬ ಅರಿವಾಗಬೇಕಿತ್ತು.ಇವುಗಳೊಂದೂ ಅರ್ಥವಾಗದ ವಿಚಿತ್ರವಾದ ತಿರುವುಗಳಿಗೆ ಭಾರತದ ರಾಜಕಾರಣ ಸಾಕ್ಷಿಯಾಯಿತು.
ಇಂಥದ್ದೇ ಸಂದರ್ಭದಲ್ಲಿ ಭಾರತದ ಒಂದು ಮೂಲೆಯಲ್ಲಿರುವ ಪೂವಿನಪೊಸವಡಂಗಿಲೆ ಎಂಬ ಶಾಸನದ ಹೆಸರಿನ ಹೂವಿನ ಹಡಗಲಿ ಎಂಬ ಹಳ್ಳಿಯ ಸೊಗಡನ್ನೂ ನಗರದ ಸಂಕೋಚವನ್ನೂ ಕಾಪಿಟ್ಟುಕೊಂಡ ಮಲ್ಲಿಗೆ ಪರಿಮಳದ ಊರಿನಲ್ಲಿ,ಒಬ್ಬ ಸಾಮಾನ್ಯ ಕಾರಕೂನನೊಬ್ಬ ತನ್ನ ಅಪಾರ ಓದು,ಸೈದ್ಧಾಂತಿಕ ಬದ್ಧತೆಯಿಂದ ಒದು-ಬರೆಹ,ಚಳುವಳಿ,ಸಂಗೀತ,ನಾಟಕ,ಜಾಥಾಗಳೆಂದು ಊರನ್ನು ಪರಿಭಾವಿಸಿದ ಪರಿ ಅನನ್ಯವಾದುದು.
ಬಡಜೋಗಿಯಂತಿದ್ದ ಶೇಷಗಿರಿ ಯವರು ಬಯಸಿದ್ದರೆ,ಈಗಿನಂತೆ ಸರ್ಕಾರದ ಅಕಾಡೆಮಿಗಳಲ್ಲಿ ಕಳೆದುಹೋಗಬಹುದಿತ್ತು.ಇಲ್ಲವೇ..ಕರ್ನಾಟಕ ಕಂಡ ವರ್ಣರಂಜಿತ ವ್ಯಕ್ತಿತ್ವದ ಎಂ.ಪಿ.ಪ್ರಕಾಶರೆಂಬ ರಾಜನ ಅರಮನೆಯಲ್ಲಿ ರಾಜಪುರೋಹಿತ ಎಂಬ ಕಳಂಕ ಹೊತ್ತುಕೊಳ್ಳುವ ಎಲ್ಲ ಅಪಾಯವೂ ಇದ್ದುವು.ಇವೆಲ್ಲವುಗಳಿಂದ ತುಸು ದೂರವೇ ಉಳಿದು ಚಳುವಳಿಗಳನ್ನೂ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟರು.
ಅದೇನೆ ಹೇಳಿ.ತೊಂಭತ್ತರ ದಶಕಕ್ಕೆ “ಆಟ”ದ ಹುಮ್ಮಸ್ಸಿತ್ತು.ಸಾಂಪ್ರದಾಯಿಕ ಸಂಭ್ರಮದಲ್ಲಿ ಅಧ್ಯಯನ ಶಿಬಿರಗಳು ನಡೆಯುತ್ತಿದ್ದವು.ಹವಾಲ್ದಾರರ ಮನೆ,ಮನೆಯಂಗಳ,ಲೈಬ್ರರಿ ಕಟ್ಟೆ,ಜಿ.ಬಿ.ಆರ್.ಕಾಲೇಜಿನ ರಾಮಭಟ್ಟರ ಹೋಟೆಲುಗಳಲ್ಲಿ ಹಾಫ್ ಕೇಟಿ ಇಟ್ಟುಕೊಂಡು ಗಂಟೆಗಟ್ಟಲೆ ಚರ್ಚೆಗಳು ,ಕಂತೆಪುರಾಣಗಳಾಗಿ,ಮಾತಾಡುವ ಸ್ಥಳಗಳಾಗಿದ್ದವು.ಜ್ಞಾನ ಸ್ವರೂಪದಲ್ಲಿ ಒಂದು ರೀತಿಯ ಮುಕ್ತಸ್ವರೂಪತೆ,ಮುಕ್ತ ಗುಣವಿತ್ತು. ಶೇಷಗಿರಿಯವರ ಮನೆಯಂಗಳದ ಚರ್ಚಾಲೋಕವನ್ನು ಯಾವ ಮಾರುಕಟ್ಟೆ,ವಿಜ್ಞಾನ,ರಾಜಕೀಯವೂ,ಸಿದ್ದಾಂತಿಗಳೂ ಅರಿಯಲಾರರು.
ಅದೇನೋ ಏನೋ…ಹಗರಿಬೊಮ್ಮನಹಳ್ಳಿ,ಹರಪನಹಳ್ಳಿ,ಹೂವಿನ ಹಡಗಲಿ ಗಳಂತಹ ಊರುಗಳು ಹೊರಜಗತ್ತಿಗೆ ತೆರೆದುಕೊಳ್ಳದ ಆಧುನಿಕಗೊಳ್ಳದ,ಮುಗ್ಧ ಯುವಕರಂತೆ ಕಂಡರೂ ಆಳದಲ್ಲಿ ಸದಾ ಜಾಗ್ರತೆ,ವಿವೇಕ ಗಳನ್ನು ಉಳಿಸಿಕೊಂಡ ಊರುಗಳಿವು. ಪರ್ಟಿಕ್ಯುಲರ್ ಆಗಿ ಇವೇ ಮೂರು ಊರುಗಳು ಆಯ್ಕೆ ಮಾಡಿಕೊಳ್ಳುವುದಕ್ಕೂ ಕಾರಣವೇನೆಂದರೆ,ಯಾವ ಊರುಗಳಲ್ಲಿಯೂ ಇಲ್ಲಿ ಇದ್ದಷ್ಟು ದಿನಪತ್ರಿಕೆಗಳು ಇರಲಿಲ್ಲ.
ಬಾಚಿಗೊಂಡನಹಳ್ಳಿಯಿಂದ ಬರೆಯುತ್ತಿರುವ ಹುರಕಡ್ಲಿ ಶಿವಕುಮಾರ್,ಬಸರಕೋಡಿನ ಮೇಟಿ ಕೊಟ್ರಪ್ಪ,ಮತ್ತು ವಟ್ಟಮ್ಮನಹಳ್ಳಿಯ ಕಥೆಗಾರ ಪಂಪಣ್ಣ..ಈ ಮುವ್ವರೂ ಲೇಖಕರು ಸ್ವತಃ ಲೇಖಕರು. ಇವರುಗಳಿಗೆ ತಮ್ಮ ತಮ್ಮ ಊರುಗಳೇ ಪ್ರಪಂಚ.ಈ ಭಾವ ಸೃಷ್ಟಿಸಿದ ಅಟ್ಮಾಸ್ಫಿಯರ್ ಇದೆಯಲ್ಲ ,ಇದಕ್ಕೆ ಮತ್ತೆ ಸಾವಿರ ಸಾವಿರ ಸೃಜನಶೀಲರನ್ನು ಸೃಷ್ಟಿಸುವ ತಾಕತ್ತು ಇರುತ್ತೆ.ಇಂಥದ್ದೇ ಅಟ್ಮಾಸ್ಪಿಯರೊಂದನ್ನು ಶೇಷಗಿರಿ ಸೃಷ್ಟಿಸಿದ್ದರು.
ಶೇಷಗಿರಿಯವರು ಸದಾ ಯಾವುದೋ ಹುಡುಕಾಟದಲ್ಲಿದ್ದವರ ಹಾಗೆ ತೋರುತ್ತಿದ್ದರು.ಆ ಹುಡುಕಾಟದಲ್ಲಿ ಒಂದು ನಿಯತಿಯಿತ್ತು.ಇಂಥ ಮುಕ್ತಗುಣದ ವ್ಯಕ್ತಿ,ಆ ಕಾಲದಲ್ಲಿ ಎಡಪಂಥೀಯತೆಯನ್ನು ಜನಪ್ರಿಯಗೊಳಿಸಲು ಕಾರಣರಾದರು. ಕಮ್ಯೂನಿಸ್ಟ್ ರಿಗೆ ಸಂಗೀತ,ರಂಗ ಪ್ರಯೋಗ,ಪ್ರಕಾಶನಗಳ ಮೂಲಕ,ಕಲಾತ್ಮಕತೆಯ ಕೊಡುಗೆಯನ್ನು ಒಂಚೂರು ಜಾಸ್ತೀನೆ ಕೊಟ್ಟರು.
ಯಾವಾಗ ಅಧಿಕಾರ,ಅಧಿಕಾರದ ಭಾಷೆ-ಪ್ರಭುತ್ವವನ್ನು ಆಕ್ರಮಿಸಿಕೊಳ್ಳುತ್ತ ಹೋಯಿತೋ…ಶೇಷಗಿರಿಯಂತಹ ಅನೇಕರು ನೇಪಥ್ಯಕ್ಕೆ ಸರಿದುಹೋದರು. ಶೇಷಗಿರಿಯವರ ಒಳಗೆ ಒಬ್ಬ ಪತ್ರಕರ್ತನಿದ್ದ,ಕವಿಯಿದ್ದ,ರಾಜಕಾರಣಿಯೂ ಇದ್ದ,ಮನುಷ್ಯನಿದ್ದ….ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬ ಸಲಹುವ ತಾಯಿ,ಮತ್ತು ಮಮತೆಯ ಬಡ ಅಪ್ಪ ನಿದ್ದ.
ಸಂಕೀರ್ಣ ಯಂತ್ರಮಂಡಲದಂತೆ ತೋರುವ ಈ ಹೊತ್ತಿನ ಸೈದ್ಧಾಂತಿಕ ಅತಿರಥರ ಮುಂದೆ ಶೇಷಗಿರಿಯವರು ಕರುಳಬಳ್ಳಿಯ ಸಂಬಂಧ ಇಟ್ಟುಕೊಂಡ ತತ್ವಜ್ಞಾನಿಯ ಹಾಗೆ ಕಾಣಿಸುತ್ತಾರೆ. ಇತಿಹಾಸವು ಶೇಷಗಿರಿಯವರನ್ನು ಹೊಸದಾರಿಯ ಹರಿಕಾರ ಎನ್ನದಿದ್ದರೂ,ದಾರಿಹೋಕ ಎಂದಾದರೂ ನೆನಪಿಸಿಕೊಳ್ಳಲೇಬೇಕು.
ಒಬ್ಬ ಸಣ್ಣ ಕಾರಕೂನನಾಗಿ
ಉಳಿವಷ್ಟೇ ಇಲ್ಲಿ ಮುಖ್ಯವಲ್ಲ,ಉಳಿಯುವುದು ಯಾತಕ್ಕೆ ಮತ್ತು ಉಳಿಯುವುದು ಹೇಗೆ ಎನ್ನುವುದೂ ಇಲ್ಲಿ ಮುಖ್ಯ. ಇಂಥದೊಂದು ಬದುಕಿಗೆ ಮುಖಾಮುಖಿಯಾದ ನಿಜಮಾರ್ಕಿಷ್ಟನಿಗೆ ನನ್ನ ನಮನಗಳು.ತಾನು ಸಾಗಿದ ದಾರಿಯುದ್ದಕೂ ಗೆಣೆಕಾರರನ್ನು ಸೃಷ್ಟಿಸುತ್ತಲೇ ನಡೆದರು. ಪೀರ್…ಪಿ.ಆರ್.ವೆಂಕಟೇಶ್,ಖಾದರ್ ಬಾಷ,ಜೈನ್,ಒಡೆಯರ್,..ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ.
ಸಾತ್ವಿಕ ಸಿಟ್ಟಿನ ಶೇಷಗಿರಿಯವರು ಇಂದಿಗೂ ಹಲವು ಚಳುವಳಿಗಳ ಮೀಟಿಂಗುಗಳಲ್ಲಿ ಪಿ.ಆರ್.ವೆಂಕಟೇಶ,ಪೀರ್ ಬಾಷರನ್ನು ಆವಾಹಿಸಿಕೊಂಡು ಆವಾಜ್ ಹಾಕುವ ಸೀನ್ ಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ.
ಸಾಂದರ್ಭಿಕವಾಗಿ ಇಲ್ಲಿ ಒಂದು ಬಹುಮುಖ್ಯ ಸಂಗತಿಯನ್ನು ತಿಳಿಸಬೇಕು.ಮಾರ್ಕ್ಸವಾದ ಯಾಂತ್ರಿಕವಾಗಲಿಕ್ಕೆ ಕಾರಣಗಳು ಹಲವು.ಆ ವಾದವು ಸಾಕ್ಷಾತ್ಕಾರಗೊಳ್ಳುತ್ತಿದ್ದ ರೀತಿಗಳನ್ನು ಗಮನದಲ್ಲಿಟ್ಟುಕೊಂಡು ಅಂಥ ಚಿಕಿತ್ಸಕ ದೃಷ್ಟಿಯಿಂದ ,ಮಾರ್ಕ್ಸ್ ವಾದವನ್ನು ವಿಮರ್ಶಿಸುವ ಕೆಲಸ ಮಾಡಲೇ ಇಲ್ಲ.ಎಸ್.ಎಸ್.ಹಿರೇಮಠರು ಮತ್ತು ಶೇಷಗಿರಿಯಂಥ ಅನೇಕರು ಈ ಇಸಂನ್ನು ಸ್ವಲ್ಪಮಟ್ಟಿಗಾದರೂ ಚಲಿಸುವಂತೆ ಮಾಡಬಲ್ಲವರಾಗಿದ್ದರು.ಆದರೆ ಅವರುಗಳ ವೈಯಕ್ತಿಕ ಬದುಕಿನ ಕ್ಯಾರವಾನ್ ಗಳು ಅರ್ಧಕ್ಕೆ ನಿಂತುಹೋದುದ್ದು ದುರಂತ.
ನನ್ನ ನೆನಪಿನ ಪ್ರಕಾರ ಆ ಹೊತ್ತು ಕರ್ನಾಟಕದ ಮಟ್ಟಿಗೆ ಹರಪನಹಳ್ಳಿ,ಹಗರಿಬೊಮ್ಮನಹಳ್ಳಿ,ಹೂವಿನ ಹಡಗಲಿ ಮತ್ತು ಹೊಸಪೇಟೆ,ದಾವಣಗೆರೆಗಳಲ್ಲಿ ಕೆಂಬಾವುಟಗಳು ಹಾರಾಡುತ್ತಿದ್ದವು. ಇದನ್ನು ಹೇಳುವ ಹೊತ್ತಿನಲ್ಲಿ ರೂಪಕದಂತೆ ಕಾಡುವ ನಾನು ಓದಿದ ವಿಷಯವೊಂದನ್ನು ಇಲ್ಲಿ ಉಲ್ಲೇಖಿಸುವೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ,ಬಾಂಬು ದಾಳಿಗೆ ತುತ್ತಾಗಿ ಬದುಕುಳಿದ ಜನರಿಗಾಗಿ
“ಅಟಾಮಿಕ್ ಬಾಂಬ್ ಕ್ಯಾಜುಯಾಲಿಟಿ ಕಮಿಷನ್ “ತನ್ನ ಕ್ಲಿನಿಕ್ಕುಗಳಲ್ಲಿ “ರೋಗಿಗಳನ್ನು ಗುದ್ದಿ,ಅವರ ಕಣ್ಣುಗಳಲ್ಲಿ ಬೆಳಕು ಹಾಯಿಸಿ,ಫೋಟೋ ತೆಗೆದು,ದೇಹದೊಳಕ್ಕೆ ಪಂಪ್ ಮಾಡಿ…ರಕ್ತಸಾರವನ್ನು ತುಂಬಿ ಪರೀಕ್ಷಿಸಲಾಗುತ್ತಿತ್ತು.”
ಆದರೆ… ಹಾಗೆ ಮಾಡುವುದು ಯಾಕೆಂದು ಯಾವೊಬ್ಬ ಡಾಕ್ಟರೂ,ತಜ್ಞರು ರೋಗಿಗಳಿಗೆ ಹೇಳುತ್ತಿರಲಿಲ್ಲ. ರೋಗಿ”ನನಗೆ ಏನಾಗಿದೆ? ಏನು ಚಿಕಿತ್ಸೆ ಕೊಡುತ್ತಿದ್ದೀರಿ?ನಾನು ಹುಷಾರಾಗ್ತೀನ ಡಾಕ್ಟರೆ..?”ಎಂದು ಆತಂಕದಿಂದ ಕೇಳಿದರೆ, “ಇದು ರೋಗ ಚಿಕಿತ್ಸೆಯ ಆಸ್ಪತ್ರೆಯಲ್ಲ.ರೋಗ ಸಂಶೋಧನಾ ಕೇಂದ್ರ ಮಾತ್ರ” ಎಂದು ವೈದ್ಯರು ಉತ್ತರಿಸಿದರು.
ಭಾರತದ ಎಡಪಂಥೀಯ ಸಂಘರ್ಷಕ್ಕೆ ಇದೊಂದು ರೂಪಕ ಸಾಕು ಎನಿಸುತ್ತದೆ.ಕೇವಲ ತಾತ್ವಿಕ ಸೈದ್ಧಾಂತಿಕತೆಗಳಲ್ಲಿಯೇ ಕಳೆದುಹೋಗುತ್ತಿರುವ ಚಳುವಳಿಗಳ ಉಳಿವ ರೂಪಕವಾಗಿ ನನ್ನನ್ನು ಬಹುವಾಗಿ ಕಾಡುತ್ತಿದೆ.
ಎಸ್.ಎಸ್.ಹಿರೇಮಠರಂತವರ ಚಳುವಳಿಗಳ ಮಾದರಿಗಳನ್ನೆ ನೋಡಿ,ದಲಿತ ಸಂಘರ್ಷ ಸಮಿತಿಯನ್ನು ಬೆಳೆಸಿದ ರೀತಿ,ದಲಿತರನ್ನು ರಿಡಿಫೈನ್ ಮಾಡಿದ ರೀತಿ,ಚಳುವಳಿಗಳಿಗೊಂದು ಕಾವ್ಯಾತ್ಮಕತೆ,ಕಲಾತ್ಮಕತೆಯೊಂದನ್ನು ಸಮುದಾಯಗಳಂತಹ ಸಾಂಸ್ಕೃತಿಕ ಸಂಘಟನೆಗಳ ಮೂಲಕ ನೀಡ್ತಾರೆ.ಹೂವಿನಹಡಗಲಿಯಂತಹ ಮೇಲ್ವರ್ಗಗಳೇ ಇರುವ ಊರಿನಲ್ಲಿ ಮಾದರ ಕೇರಿಗಳಲ್ಲಿ ಕಸಬರಿಗೆ ಹಿಡಿದು ಕಸಗುಡಿಸ್ತಾರೆ.ಇವರ ಹಿಂದೆ ಸದಾ ಶೇಷಗಿರಿಯವರು,ಅವರ ಸಂಗಾತಿಗಳು ಇರ್ತಾರೆ.ಕೇರಿಯ ಗಾಳೆಮ್ಮನ ಗುಡಿ ಇವರುಗಳ ಚರ್ಚಾತಾಣವೂ ಆಗುತ್ತದೆ. ಇಂತಹ ಕ್ರಿಯೆಗಳೇ ನಮ್ಮನ್ನು ಜೀವಂತ ಇಡಲಿಕ್ಕೆ ಸಾಧ್ಯವಾಗಿದೆ.
ಶೇಷಗಿರಿ ಹವಲ್ದಾರ್ ರಂತು ಸಾವಿನ ನೆರಳನ್ನು ತನ್ನೊಂದಿಗೆ ಹೊತ್ತು ಕೊಂಡೇ ತಿರುಗಿದರು.ಉಳಿವಿನ ಪಾಪಪ್ರಜ್ಞೆ ಮತ್ತು ಸಾವಿನ ನೆನಪುಗಳಿಂದ ಹೊರಬರಲು ಒದ್ದಾಡಿದಂತೆ ಕಾಣಿಸುತ್ತದೆ.ಇವೆರೆಡರಿಂದಲೂ ಬಚಾವಾಗಲು ಸದಾ ಯತ್ನಿಸುತ್ತಿದ್ದ ಮನುಷ್ಯನ ಹಾಗೆ ತೋರುತ್ತಿದ್ದರು.
ಹೀಗೆ ಪಾರಾಗಿ ಉಳಿದಾತ ಒಂದು ಗಾಯವಿದ್ದ ಹಾಗೆ.
ಆದರೆ ಲೋಕವೋ…….
ಗಾಯವೇ ಸ್ವತಃ ಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದು ಲೋಕ ಬಯಸುತ್ತದೆ.ಪಾರಾಗಿ ಉಳಿದಾತ ಕವಿ,ದಾರ್ಶನಿಕ,ಆಗಿ ಗಾಯವನ್ನು ಮಾಯಿಸಿಕೊಳ್ಳಬೇಕೆಂದು ಲೋಕ ಬಯಸುತ್ತದೆ.
ಜಾತಿಗೋಡೆಗೆ
ಅನಕ್ಷರತೆಯ ಕಾಂಕ್ರೀಟ್ ಹಾಕಿ
ಮೂಢತೆಯ ಸಿಮೆಂಟ್ ಬಳಸಿ
ಅಸಮತೆಯ ಕಲ್ಲಿನಿಂದ ಭದ್ರಗೊಳಿಸಿ
ಏರಿಸಿದ್ದೇವೆ ಸ್ವಾಮಿ ಎತ್ತರೆತ್ತರಕ್ಕೆ..
ಹೀಗೆ ಕ್ರಾಂತಿ ಕಾರುತ್ತಲೆ ಇಲ್ಲವಾದ ಹವಲ್ದಾರರು,
…..ಜನ ನನ್ನನ್ನು ಕೇಳಿಸಿಕೊಳ್ಳುತ್ತಾರೆ.ಪ್ರಾಯಶಃ ನಾನು ಸತ್ತ ಮೇಲೆ .ಅಂತೂ ಒಂದು ದಿನ ಅವರು ನನ್ನನ್ನು ಕೇಳಿಸಿಕೊಳ್ಳಲೇಬೇಕು….
ಹೀಗೆ ಹೇಳಿದ್ದು ಲೋಹಿಯಾ.
ಲೋಹಿಯಾರ ಅಂತರಂಗದ ತಳಮಳಗಳ ಪ್ರತಿಬಿಂಬಗಳಂತಿರುವ ಈ ಮಾತುಗಳು ಶೇಷಗಿರಿ ಹವಲ್ದಾರರವೂ ಆಗಿದ್ದವು.
ಬಿ.ಶ್ರೀನಿವಾಸ