ದಾವಣಗೆರೆ : ದಲಿತ ಯುವಕನ ಮದುವೆಯಾದ ಕಾರಣದಿಂದ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಪೋಷಕರಿಂದಲೇ ಮಗಳ (ಮಾನ್ಯ)ಹತ್ಯೆ ಹಾಗೂ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ ವೃತ್ತದಿಂದ ಮೆರವಣೆಗೆ ನಡೆಸಿದ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಸದಸ್ಯರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹತ್ಯೆಯ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಹಿರಿಯ ಮುಖಂಡ ಬಿ.ಎಂ.ಹನುಮಂತಪ್ಪ ಮಾತನಾಡಿ, ನಾಗರೀಕ ಸಮಾಜದಲ್ಲಿ ಜಾತಿ ಆಧಾರಿತ ಕ್ರೌರ್ಯ, ಮತೀಯವಾದಿ ಹಿಂಸೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಪ್ರಕಾಶ್ ಗೌಡ ಪಾಟೀಲ್ ಅವರ ಮಗಳು ಮಾನ್ಯ ಪ. ಜಾತಿ ಯುವಕ ವಿವೇಕಾನಂದ ನನ್ನ ಪ್ರೀತಿಸಿ ವಿವಾಹವಾಗಿದ್ದರಿಂದ ಮಾರಕಾಯುದಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಗಳ ವಿರುದ್ದ ರಾಜ್ಯಾದ್ಯಂತ ಆಂದೋಲನ ನಡೆಯಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಅಧ್ಯಕ್ಷ ಹೆಚ್. ಮಲ್ಲೇಶ್ ಮಾತನಾಡಿ, ಭಾರತೀಯ ಸಂವಿಧಾನ ಸರ್ವ ಸಮಾನತೆಯನ್ನು ಸಾರಿದ್ದರೂ ಹಿಂದುತ್ವ ಮತ್ತು ಕೋಮುವಾದ ನೀತಿ ಪ್ರತಿಪಾದಿಸುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಸೂರ್ಯ ಪೂರ್ವದಲ್ಲಿ ಉದಯಿಸುವುದು ಎಷ್ಟು ಸತ್ಯವೋ ಭಾರತ ಹಿಂದೂ ರಾಷ್ಟ್ರ ಎಂಬುದೂ ಸತ್ಯ ಎಂಬ ಆಘಾತಕಾರಿ ಹೇಳಿಕೆ ಜಾತಿ ಮತೀಯವಾದ ಬಿಂಬಿಸುತ್ತದೆ. ಹುಬ್ಬಳ್ಳಿಯಲ್ಲಿ ತಂದೆ ಯಿಂದಲೇ ವಿವಾಹಿತ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಪರಿವಾರದ ಮೇಲೆ ಅಮಾನುಷವಾಗಿ ಕಗ್ಗೋಲೆ ನಡೆಸಿರುವ ರಾಕ್ಷಸರ ನರಮೇಧವನ್ನು ಅತ್ಯಂತ ಉಗ್ರವಾಗಿ ಖಂಡಿಸಿ ಇಂತಹಾ ಮಾನವ ವಿರೋಧಿ ಜೀವಜಂತುಗಳನ್ನ ಸಮಾಜದಿಂದ ಬೇರ್ಪಡಿಸಲು ಜೀವಾವಧಿ – ಮರಣ ದಂಡನೆಯಂತಹ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಮಂಜುನಾಥ ಕುಂದವಾಡ ಮಾತನಾಡಿ, ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ಪೋಷಕರಿಂದಲೇ ಮಗಳ (ಮಾನ್ಯ) ಹತ್ಯೆ ಹಾಗೂ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ತೀವ್ರವಾಗಿ ಖಂಡಿಸುತ್ತೇವೆ. ಇದು ಮಾನವ ಸಮಾಜದಲ್ಲಿ ಹೇಯ ಕೃತ್ಯವಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ನೇಣು ಶಿಕ್ಷೆ ವಿಧಿಸಬೇಕು.ಕೊಲೆಗಡುಕರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಮೃತಳ ಗಂಡ ಸಂಬಂಧಿಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಜಾತಿ ಮತೀಯವಾದಿ ಸಮಾಜಘಾತುರಿಂದ ಜೀವ ರಕ್ಷಣೆ ಒದಗಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ತೆರೆಯಬೇಕು ಎಂದು ಒತ್ತಾಯಿಸಿದರು.
Read also : ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ : ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧನ
ಪ್ರಧಾನ ಕಾರ್ಯದರ್ಶಿ ಲಿಂಗರಾಜ ಎಂ. ಗಾಂಧಿನಗರ, ರಾಕೇಶ್ ಗಾಂಧಿನಗರ, ಕರಿಬಸಪ್ಪ, ಮೈಲಾರಪ್ಪ, ಲಕ್ಷ್ಮಣ್ ಕೊಡಗನೂರು, ಸತೀಶ ಅರವಿಂದ, ಅಜ್ಜೇಶ್, ರಾಮಪ್ಪ, ಹೆಚ್.ನಿಂಗಪ್ಪ, ಸದಾನಂದ ಚಿಕ್ಕನಳ್ಳಿ, ಅಭಿನಂದನ, ನಾಗರಾಜ್ ಚಿತ್ತಾನಹಳ್ಳಿ, ಸಮಾದೆಪ್ಪ ಶಾಮನೂರು , ಪರಶುರಾಮ್ ಮೆಳ್ಳೆಕಟ್ಟೆ, ಮಾಲತೇಶ್, ರಾಮಪ್ಪ, ನಾಗರಾಜ ಎನ್.ಎಂ, ಸಿದ್ದರಾಮಪ್ಪ ಇತರರು ಇದ್ದರು.
