ದಾವಣಗೆರೆ.ಡಿ.27: ದೇವಸ್ಥಾನದಿಂದ ಮನೆಗೆ ಮರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 1,80 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ಮತ್ತು ತಾಲೂಕಿನ ಹೊಸರಿತ್ತಿ ಗ್ರಾಮದ ಎಂ.ನಿಯಾಜ್ ಅಹಮದ್ ಮತ್ತು ರಾಜು ಬಂಧಿತ ಆರೋಪಿಗಳು. ಬಂಧಿತರಿAದ 14 ಗ್ರಾಂ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ ದ್ವಿ ಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಚನ್ನಗಿರಿ ತಾಲ್ಲೂಕು ಅರಿಶಿನಘಟ್ಟದ ಸರೋಜಮ್ಮ ಎಂಬುವರು ಡಿ.16ರಂದು ಗಂಡನ ಜೊತೆ ಬಸವಾಪಟ್ಟಣದ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬೈಕಿನಲ್ಲಿ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಸೂಳೆಕೆರೆ ತೂಗು ಸೇತುವೆ ದಾಟಿದ ನಂತರ ಬೈಕ್ ನಲ್ಲಿ ಬಂದ ಇಬ್ಬರು ಸರೋಜಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚನ್ನಗಿರಿ ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಎಂ.ಆರ್.ಚೌಬೆ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದೆ.
