ದಾವಣಗೆರೆ : ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಸಿದ್ಧತೆಗಳು ಚುರುಕಿನಿಂದ ಸಾಗಿವೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದ್ದಾರೆ.
ಜಾತ್ರೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಹಳೆ ಭಾಗದ ವೃತ್ತಗಳು, ದೇವಸ್ಥಾನಗಳಿಗೆ ಸುಣ್ಣ, ಬಣ್ಣ ಬಳಿಯದೇ ಇರುವು ಕುರಿತು ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ಸೇರಿದಂತೆ ಹಳೆ ದಾವಣಗೆರೆ ಭಾಗದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ನಗರದ ವಿವಿಧ ದೇವಸ್ಥಾನಗಳಿಗೆ ಸುಣ್ಣ-ಬಣ್ಣ ಬಳಿಯುವುದು, ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವುದು ಹಾಗೂ ದಾರಿದೀಪ ಸೇರಿದಂತೆ ಬೆಳಕಿನ ವ್ಯವಸ್ಥೆ ಮಾಡುವ ಕಾಮಗಾರಿಗಳಿಗೆ ಮಹಾನಗರ ಪಾಲಿಕೆಯಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ.
ಜಾತ್ರೆಗೆ ಸಂಬಂಧಿಸಿದಂತೆ ಕೆಲವು ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ಇನ್ನುಳಿದ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿವೆ. ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಯ ಹಿನ್ನೆಲೆಯಲ್ಲಿ ನಗರವನ್ನು ಸುಂದರಗೊಳಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಾಲಿಕೆ ಆಡಳಿತವು ಆದ್ಯತೆ ನೀಡಿದೆ ಎಂದು ಅವರು ಹೇಳಿದ್ದಾರೆ.
