ಶಿವಮೊಗ್ಗ :
ಮಾಜಿ ಡಿಸಿಎಂ ಈಶ್ವರಪ್ಪ ಅವರ ಮನವೊಲಿಸುವ ಬಿಜೆಪಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆಸಿದ ಯತ್ನವೂ ಭಾನುವಾರ ವಿಫಲವಾಯಿತು.
ಪುತ್ರ ಕಾಂತೇಶ್ ಅವರಿಗೆ ಹಾವೇರಿ ಕ್ಷೇತ್ರದ ಲೋಕಸಭಾ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬೇಸರ ಗೊಂಡಿರುವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಬಂಡಾಯ ಎದ್ದಿದ್ದು, ಪಕ್ಷೇತರ ಸ್ಪರ್ಧೆ ಹಿನ್ನಲೆಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಈಶ್ವರಪ್ಪ ಮನವೊಲಿಸಲು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ಭಾನುವಾರ ಬೆಳಗ್ಗೆ ಮನೆಗೆ ಆಗಮಿಸಿದ್ದರು. ಅದರೆ, ಮಾತುಕತೆ ನಡುವೆಯೇ ಮನೆಯಿಂದ ಹೊರಗೆ ಹೋಗಿ ರಾಷ್ಟ್ರೀಯ ನಾಯಕರನ್ನೇ ಗಂಟೆಗಟ್ಟಲೇ ಕಾಯಿಸಿದರು. ಹೆಚ್ಚು ಕಾಲಕಾದರೂ ಬಾರದಿದ್ದರಿಂದ ರಾಷ್ಟ್ರೀಯ ನಾಯಕರು ಬರಿಗೈಯಲ್ಲಿ ವಾಪಾಸ್ಸು ಹೋದರು.
ಚುನಾವಣೆಯಿಂದ ಹಿಂದೆ ಸರಿಯಲ್ಲ
ಶಿವಮೊಗ್ಗ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಕಪಿಮುಷ್ಟಿಯಲ್ಲಿ ರಾಜ್ಯ ಬಿಜೆಪಿ ಇದೆ. ಅದನ್ನು ಮುಕ್ತಗೊಳಿಸಲು ನಾನು ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನಿಷ್ಠೆಯಿಂದ ಹಲವಾರು ವರ್ಷಗಳಿಂದ ಇದ್ದೇನೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರರದ್ದೇ ಕಾರುಬಾರು ಆಗಿದೆ.
ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ. ರಾಜ್ಯದಲ್ಲಿ ನೊಂದ ಕಾರ್ಯಕರ್ತರು ನನಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ನನಗೆ ವಿವಿಧ ಮಠಾಧೀಶರ ಆಶೀರ್ವಾದ ಸಹ ಇದೆ ಎಂದು ಹೇಳಿದರು.