1993ರ ಬೇಸಿಗೆಯ ಒಂದು ಮಧ್ಯಾಹ್ನ, ಯುನಿವರ್ಸಿಟಿಯ ವಿಶಾಲ ಜಾಗಗಳ ತುಂಬಾ ಮುಳ್ಳು ಬೋರೆಹಣ್ಣಿನ ಗಿಡಗಳಲಿ ತುಂಬಿನಿಂತ ಹಣ್ಣುಗಳು. ಬಿರುಬಿಸಿಲಿನಲೂ ಆಗೊಮ್ಮೆ ಈಗೊಮ್ಮೆ ತೂಕಡಿಸುವ ಗಾಳಿಗೆ ಪುಳಕ್ಕನೆ ಉದುರುವ ಸದ್ದು ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಪರೀಕ್ಷಾ ಸಮಯವಾದ್ದರಿಂದ ಓಡಾಟವೂ ಹೆಚ್ಚೇನಿರಲಿಲ್ಲ.
ಅಲ್ಲಿಂದ ನಡಕೊಂಡು ಹೊರಟಿದ್ದ ಹಿರಿಯ ಜೀವವೊಂದು ಪಟಕ್ಕನೆ ನೆಲದ ಮೇಲೆ ಬಿದ್ದ ಆ ಹಣ್ಣಿಗೆ ಮೆತ್ತಿದ್ದ ಮಣ್ಣ ಜೊತೆಗೇ ಬಾಯಿಗೆ ಹಾಕ್ಕೊಂಡು ,ಅಷ್ಟೇ ರಭಸದಲ್ಲಿ ಬೀಜವನ್ನು ಪುಳಕ್ಕನೆ ಉಗುಳಿ ಹೋದರು. ಇಷ್ಟೆಲ್ಲಾ ನೋಡೋದಕ್ಕೆ ಸಾಧ್ಯವಾದದ್ದು ಅವರು ತೊಟ್ಟ ಮುದುರು ಮುದುರಾದ ಕೆಂಪಂಗಿಯಿಂದ. ನಮ್ಮ ಬಾಲ್ಯವನ್ನು ನೆನಪಿಸಿದ ಆ ಮನುಷ್ಯನೆಡೆಗೆ ವಿಚಿತ್ರ ಆಕರ್ಷಣೆ ಮೂಡಿತು.
ಮತ್ತೊಂದು ದಿನ, ಗುಲಬರ್ಗಾದ ಬಡೇಪುರ ಕಾಲೊನಿಯ ಸ್ಟುಡೆಂಟ್ ಮೆಸ್ಸಿನಲಿ, ಬಿಸಿ ಬಿಸಿ ಬಕರಿ, ಬ್ಯಾಳಿಯನ್ನು ಸದ್ದು ಮಾಡುತ್ತ, ಮಧ್ಯೆ ಮಧ್ಯೆ ಸೊರ್…ಸೊರ್ರೆಂದು ಮೊಸರು ಕುಡಿಯುತ್ತ ಬಾಯಿಗೆ, ಮೂಗಿಗೆ ಹತ್ತಿದ್ದನ್ನೂ ಒರೆಸಿಕೊಳ್ಳದೆ ಉಂಡ ಸಂತೃಪ್ತಿಯಲಿ ಎದ್ದು ಹೋದ, ಅದೇ ಕೆಂಪಂಗಿಯ ಮನುಷ್ಯನನ್ನು ಆ ದಿನವೂ ನೋಡಿದೆ.
ದಲಿತ ಪ್ಯಾಂಥರ್ ಪದ್ಯಗಳ ಚನ್ನಣ್ಣ ವಾಲೀಕಾರ ಇವರೇ
ಹೀಗೆ, ಮೊದಲ ಮತ್ತು ನಂತರದ ಎರಡ್ಮೂರು ಒನ್ ವೇ ಭೇಟಿಗಳಲಿ ,ದಲಿತ ಪ್ಯಾಂಥರ್ ಪದ್ಯಗಳ ಚನ್ನಣ್ಣ ವಾಲೀಕಾರ ಇವರೇ ಎಂಬುದು ತಿಳಿಯಿತು.
ನಮ್ಮ ಫಿಜಿಕ್ಸ್ ವಿಭಾಗದ ರಸ್ತೆಯ ಮುಂದೆ ಸ್ವಲ್ಪ ಕೂಗಳತೆಯ ದೂರದಲ್ಲಿಯೇ ಕನ್ನಡ ವಿಭಾಗವಿತ್ತು. ಹೈಸ್ಕೂಲಿನಿಂದಲೂ ಕನ್ನಡ ಸಾಹಿತ್ಯದ ಗೀಳಿಗೆ ಬಿದ್ದಿದ್ದ ನಾನು, ಕೂಡ್ಲಿಗಿಯ ಸರ್ಕಾರಿ ಲೈಬ್ರರಿಯಲಿ ಓದಿದ ಪುಸ್ತಕಗಳ ಹಲವು ಲೇಖಕರ ಪೈಕಿ ಮಲ್ಲಿಕಾ ಘಂಟಿ, ಸಬರದ….ಚನ್ನಣ್ಣ ವಾಲೀಕಾರರು ಹೀಗೆ ಹಲವರು ಅಲ್ಲಿದ್ದರು.
ಅವರೆಲ್ಲರ ಪೈಕಿ, ವಾಲೀಕಾರರು ಬಳಸುತ್ತಿದ್ದ, ಅಲ್ಲೋ ತಮ್ಮಾ, ಅಕ್ಕಾ, ತಂಗಿ, ತಾಯಿ…ಅಣ್ಣಾ..ಎಂಬ ಸಂಬೋಧನೆಗಳು ಆ ಕಾಲದ ಹುಡುಗ ಹುಡುಗಿಯರಿಗೆ ತಮಾಷೆಯಂತೆ ತೋರಿದ್ದೂ ಉಂಟು.
ಆಗ ತಾನೆ ವಯಸ್ಕರ ಶಿಕ್ಷಣದಿಂದ ಶಾಲೆಯಲಿ ಅಕ್ಷರ ಕಲಿತವರ ಹಾಗೆ ದಪ್ಪ ದಪ್ಪನೆಯ ಅಕ್ಷರಗಳನು ಬರೆಯುತ್ತಿದ್ದರು.
ದಾರೀಲಿ ಹೋಕ್ತಾ ಬರ್ತಾ ಹಾಡು ಗುನುಗುತ್ತಾ ಸಾಗುತ್ತಿದ್ದರು. ಗುಲಬರ್ಗಾದ ಜಗತ್ ಸರ್ಕಲ್ಲಿನಿಂದ ಯುನಿವರ್ಸಿಟಿಯವರೆಗೂ ಸಿಟಿ ಬಸ್ಸಿನಲಿ ಕುಂತ ವಿದ್ಯಾರ್ಥಿಗಳ ಎದುರು ಜೋತಾಡುತ್ತ ನಿಂತುಕೊಂಡೇ ಪಯಣಿಸುತ್ತಿದ್ದರು.
ಸುಕ್ಕು ಸುಕ್ಕಾದ ಕೆಂಪು ಅಂಗಿ, ದೊಗಳೆ ಪ್ಯಾಂಟು
ಯುನಿವರ್ಸಿಟಿಯಲಿದ್ದೂ, ಪ್ರೊಫೆಸರಂತಾಡದೆ ಸುಕ್ಕು ಸುಕ್ಕಾದ ಕೆಂಪು ಅಂಗಿ, ದೊಗಳೆ ಪ್ಯಾಂಟು, ಮೆತ್ತಿದ ಧೂಳಿನ ಹಳೆಯ ಚಪ್ಪಲಿ, ಬಾಚಲಾರದ ಕೂದಲ , ಉರುಟು ಉರುಟಾದ ಮುಖದ ತುಂಬಾ ….ಮಗುವಿನ ಮುಗ್ಧ ನಗೆ ಹೊತ್ತವರಿಗೆ ಎಷ್ಟೊಂದು ಹೊರನೋಟ!!
ಒಳಗೆ ಅವ್ವನಂತಿದ್ದ, ಚನ್ನಣ್ಣರು ಬಂದೋರ್ನ ಸ್ವಾಗತಿಸಿ ಅಪ್ಪಿಕೊಳ್ಳುವುದ ನೋಡೋದೆ ಒಂದ್ ಖುಷಿ.
ಸಾಫ್ ಸೀದಾ ಮನುಷ್ಯನೊಬ್ಬನನ್ನು, ಸಮಾಜ ಗುರುತಿಸದೇ ಹೋದರೂ, ತನ್ನ ವಿಶಿಷ್ಟ ಸಾಹಿತ್ಯ ಕೃತಿಗಳಿಂದ ಮತ್ತು ತಾಯಿ ಹೃದಯದಿಂದ ಚನ್ನಣ್ಣ ಅಜರಾಮರರಾಗಿ ಹೋದರು.
ನೀ ಹೋದ ಮರುದಿನ ಮೊದಲಾಂಗ ನಮ ಬದುಕು ಆಗ್ಯದ ಬಾಬಾಸಾಹೇಬ….ಎಂದು ಹೇಳುವ ನೋವಿನಲ್ಲಿಯೇ ಚನ್ನಣ್ಣ ವಿರಮಿಸಿದ್ದಾರೆ.
ಇಷ್ಟಾದರೂ ಚನ್ನಣ್ಣನ ಕುರಿತ
“ಚನ್ನಣ್ಣನಿಗೆ ಉಣ್ಣು ಎಂದರೆ ಸಾಕು,
ತೀರಿಸಿಕೊಂಡುಬಿಡುತ್ತಾನೆ ಶತಮಾನಗಳ ಸೇಡು”
ಚಂಪಾ ಕೊಟ್ಟ ರೂಪಕ ಮರೆಯಲಾರದಂತೆ ಮನದಲಿ ಅಚ್ಚೊತ್ತಿದಂತೆ ನಿಂತಿದೆ.
ಈ ದಿನ ನೀವಿಲ್ಲ ಎಂಬ ಸುದ್ದಿಯ ಜೊತೆಗೆ ನಾ ಬರೆವ ಅಕ್ಷರಗಳೂ…ದಪ್ಪಗಾಗಿ ನಿಮ್ಮ ನೆನಪು ತಂದಿತು.
ಬರೆಯಲು ಕಾಗದ ಸಾಲುತ್ತಿರಲಿಲ್ಲ
ಹಾಡಲು ಶುರುಮಾಡಿದ,
ಹಲಗೆಯಲಿ ಬಾರಿಸಿದ, ಕುಣಿದೇ ಕುಣಿದ,
ದಣಿದ
ಆಕಾಶವನ್ನೆ ಸಿಲೇಟಿನಂತೆ ಬಳಸಿದ
ಕಾಣದಾದಾಗ
ಕ್ರಾಂತಿ ಮೆಟ್ಟಿದ ಕೆಂಪಂಗಿ ಧರಿಸಿದ
ಒಮ್ಮೆ
ಮಗುವಂತೆ
ಮಗದೊಮ್ಮೆ
ಶತಮಾನಗಳ ಕಾಲ ಹಸಿದವರು ಉಂಬಂತೆ
ಹೋಗುವ ಮುನ್ನ ಉಣ್ಣುವುದ ಮತ್ತೊಮ್ಮೆ ನೋಡಬೇಕಿತ್ತು,
ಉಂಡ ಮ್ಯಾಲೆ ಹಾಡುವುದು ಕೇಳಬೇಕಿತ್ತು
ಅವಸರದಿ
ಹೋಗಿಬಿಟ್ಟಿರಿ ನೀವು
ಊರೂರಿಗೆ ಕೆಂಪಂಗಿ ತೊಟ್ಟ ಹುಡುಗರ ಕಾಣುವ ಕನಸು ಕಾಣುತ್ತಲೆ ಹೋಗಿಬಿಟ್ಟಿರಿ
ಹೋಗಿಬಿಟ್ಟಿರಿ ನೀವು ಪ್ಯಾಂಥರ್ ಹಾಡುಗಳ ಗುನುಗುತ್ತಾ…
ಬಿ.ಶ್ರೀನಿವಾಸ