ದಾವಣಗೆರೆ: ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್..ಎಸ್.ಮಲ್ಲಿಕಾರ್ಜುನ್ ಅಕ್ರಮ ಮರಳು ದಂಧೆ ನಡೆಸುತ್ತಾ ನದಿ ಪಾತ್ರದ ಮರಳನ್ನು ಎತ್ತಿ ನದಿಯ ಒಡಲನ್ನು ಬರಿದು ಮಾಡುವ ಮೂಲಕ ಮರಳು ದಂಧೆ ಮಾಡುತ್ತಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಿದಕೆರೆ ಜಮೀನುವೊಂದರಲ್ಲಿ ನೂರಾರು ಲೋಡು ಮರಳು ಸಂಗ್ರಹಿಸಿರುವ ಸ್ಥಳಕ್ಕೆ ಮಾಧ್ಯಮವರನ್ನು ಕರೆದುಕೊಂಡು ಹೋಗಿ ತೋರಿಸಿದ ಬಳಿಕ ಮಾತನಾಡಿದ ಅವರು, ನದಿ ಪಾತ್ರದ ಮರಳನ್ನು ಅಕ್ರಮವಾಗಿ ತೆಗೆದು ಇಲ್ಲಿ ಸಂಗ್ರಹಿಸಿ ಸಾವಿರಾರು ಲೋಡನ್ನು ಮರಳನ್ನು ಬೇರೆ ಕಡೆ ಸಾಗಿಸಿ ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರು ಎ.ಬಿ.ವಿಜಯ್ ಕುಮಾರ್ ಎಂಬುವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಅವರ ಮೂಲಕ ಮರಳು ದಂಧೆ ನಡೆಸುತ್ತಿದ್ದಾರೆ. ಅಲ್ಲದೆ ಇಲ್ಲಿರುವ ಗುಡ್ಡದಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇಲ್ಲಿರುವ ಸರ್ಕಾರಿ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಇದ್ದ ಹಳ್ಳವನ್ನು ಮುಚ್ಚಿದ್ದಾರೆ. ಬೆಂಗಳೂರಿನಲ್ಲಿರುವ ರಾಜ ಕಾಲುವೆಗಳನ್ನು ಮುಚ್ಚಿ ಮಳೆ ಬಂದಾಗ ಹೇಗೆ ಅವಾಂತರ ಆಗುತ್ತಿದೆಯೋ ಅದೇ ರೀತಿ ಇಲ್ಲಿರುವ ಹಳ್ಳವನ್ನು ಮುಚ್ಚಿ ಮಳೆ ಬಂದಾಗ ರೈತರು ಬೆಳೆದ ಬೆಳೆಗಳು ಹಾಳುಗುವಂತಾಗಿ ರೈತರು ನಷ್ಟ ಹೊಂದುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಇಷ್ಟೆಲ್ಲ ಕಣ್ಣೆದುರಿಗೆ ನಡೆಯುತ್ತಿದ್ದರೂ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಕ್ರಮ ಮರಳ ದಂಧೆ ತೆಡೆಯುವುದಾಗಲೀ, ಕಬಳಿಸುತ್ತಿರುವ ಸರ್ಕಾರಿ ಜಮೀನು ಉಳಿಸುವುದಾಗಲೀ ಮಾಡುತ್ತಿಲ್ಲ. ಈ ಭಾಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರೇ ಅಕ್ರಮ ಮರಳು ದಂಧೆ ಮಾಡುತ್ತಿದ್ದಾರೆ ಮತ್ತು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಹಾಗೂ ಸರ್ಕಾರಿ ಜಮೀನು ಕಬಳಿಸುತ್ತಿದ್ದಾರೆ ಎಂದು ಕಳೆದ ಮೂರು ತಿಂಗಳಿನಿಂದ ರಾಜ್ಯದ ಸಂಬಂಧಪಟ್ಟ ಮೇಲಾಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಹೇಳಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಒಬ್ಬ ಬಡವ ಮನೆ ಕಟ್ಟಿಕೊಳ್ಳಲು ಒಂದು ಟ್ರ್ಯಾಕ್ಟರ್ ಲೋಡು ಮರಳನ್ನು ಎತ್ತಿ ತೆಗೆದುಕೊಂಡು ಹೋದರೆ ಆತನ ವಿರುದ್ಧ ಎಫ್ ಐಆರ್ ದಾಖಲು ಮಾಡಿ, ಪೊಲೀಸ್ ಮತ್ತು ಕೋಟ್೯ಗೆ ಅಲೆದಾಡಿಸುತ್ತಾರೆ. ಅದೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರೇ ಅಕ್ರಮವಾಗಿ ಸಾವಿರಾರು ಲೋಡು ಮರಳು ಸಂಗ್ರಹಿಸಿ ಮಾರಾಟ ಮಾಡುತ್ರಿದ್ದರೆ, ಸಚಿವರ ವಿರುದ್ಧ ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಒಂದು ಕಾಲದಲ್ಲಿ ಬಳ್ಳಾರಿ ಗಣಿಗಾರಿಕೆ ಸದ್ದು ಹೇಗೆ ಮೆರೆಯುತ್ತಿತ್ತೋ, ಅದೇ ರೀತಿ ಹರಪನಹಳ್ಳಿ ತಾಲೂಕಿನಲ್ಲಿ ಗಣಿಗಾರಿಕೆ ಸದ್ದು ಮೆರೆಯುತ್ತಿದ್ದೆ. ನಾವು ಇನ್ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಚಿವರ ಒಡೆತನದ ಬೇರೆಯವರ ಹೆಸರಿನಲ್ಲಿರುವ ಜಮೀನಿನಲ್ಲಿ ಅಕ್ರಮ ಮರಳು ಸಂಗ್ರಹಿಸಿ ಮರಳು ದಂಧೆ ನಡೆಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿ ಸಂಗ್ರಹಿಸಿರುವ ಅಕ್ರಮ ಮರಳನ್ನು ವಶಪಡಿಸಿಕೊಂಡು ಅವರ ವಿರುದ್ದ ಎಫ್ ಐಆರ್ ದಾಖಲಿಸಿಕೊಂಡು ಐದು ಪಟ್ಟು ದಂಡ ವಸೂಲಿ ಮಾಡಬೇಕು. ಸಚಿವರೇ ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ. ಕೂಡಲೇ ನೀವು ನೈತಿಕವಾಗಿ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಈ ಭಾಗದ ರೈತರೊಂದಿಗೆ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.