ಊರಿನ ರಮ್ಯ , ಆಹ್ಲಾದಕರ ನಿಸರ್ಗವನ್ನು ಕಂಡು “ಸುಂದರಪುರ”ಎಂದು ವರ್ಣಿಸಿದ್ದಕ್ಕೆ ಸೊಂಡೂರು ಎಂದು ಹೆಸರಾಯಿತೆಂದು ಹೇಳುವವರು ಇದ್ದಾರೆ. ರಾಜಮಹಾರಾಜರನ್ನು ಮೆಚ್ಚಿಸಲಿಕ್ಕೆ ಆಸ್ಥಾನ ವಿದ್ವಾಂಸರು ಹಾಗೆ ಹೇಳಿರಬಹುದು. ನಂತರದಲ್ಲಿ ಗಾಂಧೀಜಿಯವರ ಭೇಟಿಯಿಂದಾಗಿ ಅವರು ಹೇಳಿದ್ದಾರೆನ್ನಲಾದ ಸೊಂಡೂರು ಕುರಿತಂತೆ “ಸೀ ಇನ್ ಸೆಪ್ಟೆಂಬರ್ “ಹೇಳಿಕೆಯನ್ನು ಕೂಡ ನಾರಿಹಳ್ಳದ ಎತ್ತರದ ಬೆಟ್ಟಗಳ ಮೇಲೆ ಕೆತ್ತಲಾಗಿದೆ.
ಆಗಿನ ಸುಂದರಪುರ,ಈಗಿನ ಸೊಂಡೂರನ್ನು ಗುರುತಿಸುವುದು ಬಹು ಸುಲಭ.ಕೆಂಪು ಧೂಳುಗಟ್ಟಿದ ಮುರುಕು ಮನೆಗಳು,ಕೆಂಪಾಗಿ ಹೋದ ಬಸ್ಸುಗಳು,ಕೆಂಪು ಸೈನಿಕರ ಹಾಗೆ ಕಾಣುವ ಕಾರ್ಮಿಕರು,ಆಸ್ಪತ್ರೆಯ ಮುಂದೆ ಕೆಮ್ಮುತ್ತಲೆ ನಿಂತವರ ಕ್ಯೂ,ಡಾಕ್ಟರಿಗಾಗಿ ಕಾಯುವ ಟೀಬಿ ಪೇಷಂಟುಗಳು…ಹೀಗೆ ಅನೇಕ ದೃಶ್ಯಾವಳಿಗಳನ್ನು ಕಾಣಬಹುದು.
ಸದಾ ಬಿಜಿಯಾಗಿದ್ದ ಊರು,ಈಗ ಬಿಕೋ ಎನ್ನುವ ಮೌನಕ್ಕೆ ಶರಣಾಗಿದೆ.ಅಪಮಾನ,ಸಾಮಾಜಿಕ ,ಪ್ರಾಕೃತಿಕ ದೌರ್ಜನ್ಯಗಳ ದಾಳಿಗಳಿಗೆ ತತ್ತರಿಸಿದ ಏಕಾಂಗಿತನದ ಭಾವ ಊರಿಗೆ ಆವರಿಸಿದಂತಿದೆ.ಸದಾ ಗಿಜಿಗಿಜಿಗುಡುತ್ತಿದ್ದ,ಕೈಯ್ಯಿಂದ ಕೈಯ್ಯಿಗೆ ವಿನಿಮಯವಾಗುತ್ತಿದ್ದ ನೂರು,ಐನೂರು,ಸಾವಿರದ ಗಾಂಧಿ ನೋಟುಗಳು …ಕೈಯ್ಯೊಳಗಿನ ಉರಿವ ಸಿಗರೇಟು,ವಿದೇಶಿ ಮದ್ಯದ ಖಾಲಿ ಬಾಟಲಿಗಳು ಸಂದಿಗೊಂದಿಗಳು ಯಾವುವೂ ಕಾಣಿಸುತ್ತಿಲ್ಲ.
ಸೊಂಡೂರಿನ ಬೀದಿಯಲ್ಲೀಗ ಅಕ್ಷರಶಃ ಬಣ್ಣಬಣ್ಣದ ಚಿತ್ರ ತೋರಿಸಿ ,ಸಿನಿಮಾ ಮುಗಿಯಿತೆಂದು ಪ್ರೊಜೆಕ್ಟರ್ ರೂಮಿನಿಂದ ಹೊರಬಂದು ನಿಂತವನ ಮ್ಲಾನವದನದಂತೆ ತೋರುತ್ತಿದೆ.
ಸಂಜೆ ಸೂರ್ಯನ ಬಿಸಿಲಿಗೆ
ಪ್ರತಿಫಲಿಸುತಿವೆ ಫಳಫಳನೆ
ಬೆಟ್ಟಗುಡ್ಡಗಳ ಬೋಳುತಲೆಗಳ ಸಾಲುಸಾಲು
ಬುಲ್ಡೋಜುರುಗಳುಂಟು ಮಾಡಿದ ರಣಗಾಯ
ಒಸರುವ ಕೀವು
ಕೂಗಿದರೂ ಕೇಳಿಸದ ನೋವು
ಕ್ಷಯದಿ ಸತ್ತ ಅಪ್ಪ ಅವ್ವನ
ಮಣ್ಣ ಮಾಡಿ ಅಳುತ ಕುಂತ
ಅನಾಥ ಹುಡುಗನ ಬೋಳು ತಲೆ ಪ್ರತಿಫಲಿಸುತಿದೆ ಫಳಫಳನೆ.
ಊರ ಮಸಣಕೊಂದು ಭದ್ರಕೋಟೆ
ಹೆಸರು ಕೆತ್ತಿಸಿದ ಭೂಪರು
ಮಣ್ಣು ಕದ್ದ ಅವರು
ಸರಳು ಹಿಂದೆ ಸರಳ ನಿಂತರು
ಚಿಂದಿಯಾದ ನನ್ನ ಜನರು
ಅರ್ಧ ಮಸಣ ಸೇರಿ
ಇನ್ನರ್ಧ ಬದುಕನರಸಿ
ಎಲ್ಲಿಗೋ ಹೋದರು….
ಸದಾ ಹಚ್ಚಹಸುರಿನ ಗಿರಿಸಾಲುಗಳನ್ನೆ ನೋಡುತ್ತಾ ,ಆಡುತ್ತಾ ಬೆಳೆದ ಮಕ್ಕಳು:ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುತ್ತಿದ್ದ ತಂದೆ-ತಾಯಿ;ಹಬ್ಬಗಳು, ಜಾತ್ರೆಗಳು ಆ ಸಂಭ್ರಮವನೆಲ್ಲವನ್ನೂ ಗಣಿಗಾರಿಕೆಯೆಂಬ ರಕ್ಕಸ ಕಿತ್ತುಕೊಂಡಿತು. ” ಹೋಗುವಿಯಂತೆ ಬಾ ತಮ್ಮೋ…” ಎಂದು ಕೂಗಿ ಕರೆದರೂ ಟೇಮಿಲ್ಲವೋ ಎಂದು ಟಿಪ್ಪರಗಳನೇರಿ ಹೋದ ಹುಡುಗರ ಕೈಗಳಿಗೂ ಈಗ ಕೆಲಸವಿಲ್ಲ.
ಒಂದು ಕಾಲದಲ್ಲಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದರೆ ಸೊಂಡೂರು
ಮಳೆಯನ್ನೆ ನೆಚ್ಚಿಕೊಂಡಿದ್ದ ರೈತಾಪಿವರ್ಗ,ಜೋಳ, ಮೆಕ್ಕೆಜೋಳ,ಸಜ್ಜೆ,ನವಣಿ, ಸೂರ್ಯಕಾಂತಿ, ನೆಲಗಡಲೆ ಮತ್ತು ಅಲ್ಪಪ್ರಮಾಣದಲ್ಲಿ ರಾಗಿಯನ್ನೂ ಬೆಳೆಯುತ್ತಿದ್ದರು.ಈಗ ಮಳೆ ಬಹಳ ಕಡಿಮೆಯಾಗಿದೆ.ಅಸಲಿಗೆ ಯಾರದೋ ಮಾತು ಕೇಳಿ ಗಣಿಗಾರಿಕೆಗೆ ಕೊಟ್ಟ ಹೊಲಗಳೂ ಕೆಲಸಕ್ಕೆ ಬಾರದಂತಾಗಿವೆ.ಸಂಪದ್ಭರಿತ ಕಾಡು ಬೋಳಾಗಿದೆ.ಹಸಿರಿನ ಸೊಂಡೂರು ಕೆಂಪಾಗಿದೆ.
ಇದ್ದಕ್ಕಿದ್ದಂತೆಯೇ ನಿಂತುಹೋದ ಗಣಿಗಾರಿಕೆಯಿಂದಾಗಿ ಮುಂದೇನು ಮಾಡಬೇಕೆನ್ನುವುದೇ ಗೊತ್ತಾಗುತ್ತಿಲ್ಲ ಸರ್…ನಾಕು ಮಕ್ಕಳಿದ್ದಾರೆ. ಬೆಳೆಯಂಗಿಲ್ಲ ಏನೂ ಮಾಡಂಗಿಲ್ಲ .. ಏನು ಮಾಡಬೇಕೋ..ನಾಳೆ ಹೇಗೋ ಏನೋ…ಎಂದು ಆತಂಕ ಹೊರಹಾಕುತ್ತಾರೆ ಕಲ್ಲಹಳ್ಳಿಯ ಕೃಷ್ಣನಾಯ್ಕ.
ಯುದ್ಧ ನಿಂತು ಹೋಗಿದೆ ಎಂಬುದೇನೋ ನಿಜ !
ಆದರೆ…ಗಣಿಗಾರಿಕೆಗೆ ಬಿದ್ದ ಬ್ರೇಕ್ ನಿಂದಾಗಿ ಪ್ರತಿದಿನ,ಪ್ರತಿಕ್ಷಣವೂ ಹಿಂಸೆಗೆ ಬಲಿಯಾಗುತ್ತಿರುವ ದೊಡ್ಡ ಸಂಖ್ಯೆಯ ಜನರ ಪೈಕಿ ಬಹುತೇಕರು ಪಾರ್ಶ್ವ ವಾಯುವಿಗೆ ತುತ್ತಾದವರು,ಅಸ್ತಮಾ,ಟೀಬಿ ರೋಗದಿಂದ ನರಳುತ್ತಿರುವವರೇ ಹೆಚ್ಚು.ಅಕ್ರಮ ಗಣಿಗಾರಿಕೆಯ ಅಕಾಲ ಸ್ತಬ್ದತೆ,ಏಕಕಾಲಕ್ಕೆ ಜನರನ್ನು ಗಣಿಗಾರಿಕೆಯ ಹಿಂಸೆಯಿಂದ ಬಿಡುಗಡೆಗೊಳಿಸುವ ಮತ್ತು ಶಾಪಗ್ರಸ್ಥರನ್ನಾಗಿಸಿದ್ದು ಸೊಂಡೂರು ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಕಾಣಸಿಗುತ್ತದೆ.
ಅಕ್ರಮ ಗಣಿಗಾರಿಕೆಯ ಹೆಸರಿನಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಲಾಯಿತು. ಕಾನೂನು ವಿಚಾರಣೆ ನಡೆಯುತ್ತಿದೆ. ಶಿಕ್ಷೆಯಾದ ಮತ್ತು ಶಿಕ್ಷೆಗೊಳಪಡುವವರೆನ್ನಲಾದವರು ಜಿಲ್ಲೆಗೆ ಕಾಲಿಡಬಾರದೆಂದೂ ಸುಪ್ರೀಂಕೋರ್ಟು ಆದೇಶ ನೀಡಿದೆ. ಗಣಿಧಣಿಗಳು,ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕಾರಣಿಗಳು,ಅಧಿಕಾರಿಗಳು ತಪ್ಪಿತಸ್ಥರಾಗಬೇಕಿತ್ತು. ಆದರೆ ದಿನನಿತ್ಯವೂ ಹಸಿವಿನಿಂದ ,ಅಪೌಷ್ಟಿಕತೆಯಿಂದ ,ಕ್ಷಯರೋಗದಿಂದ ನರಳುವ ಜನರು ಮಾಡಿರುವ ತಪ್ಪಾದರೂ ಏನು? ಪ್ರಶ್ನೆ …ನಮ್ಮನ್ನು ಕಾಡದೆ ಬಿಡುವುದಿಲ್ಲ.
ಸೊಂಡೂರಿನಲ್ಲೀಗ ಭಾರೀ ಮಳೆಯಂತೆ
ಬಹುಶಃ ಮುಚ್ಚಿದ ಬಾಗಿಲುಗಳಿಂದ ಯಾವ ಹುಡುಗರೂ ಹರಿವ ನೀರಿನಲ್ಲಿ ಕಾಗದದ ದೋಣಿ ಬಿಡುತ್ತಿಲ್ಲ.ಎಷ್ಟೋ ಮನೆಗಳ ಬದುಕಿನ ದೋಣಿಗಳು ಮುಳುಗಿ ಹೋಗಿರುವಾಗ ಇದ್ಯಾವ ಲೆಕ್ಕ?
ಇಡೀ ಊರು ಇಷ್ಟೇಕೆ ಮೌನ?
……ಬೇಕಾದರೆ ಯಾರನ್ನಾದರೂ ಕೇಳಿ ನೋಡಿ.
ಸ್ಮಶಾನದಲ್ಲಿ ನಿಂತು ಯಾರೂ ಅಳಬಾರದಂತೆ.!
ಕಾಡು…
ಬೆಟ್ಟ-ಗುಡ್ಡ ಸವೆದರೂ
ಸುರಿಯುತ್ತಿದೆ…
ಮಳೆಯಲ್ಲವದು
ಬಹುಶಃ
ಯಾರೋ
ರೋದಿಸುತ್ತಿರಬೇಕು
ಮತ್ತೆ ಮತ್ತೆ ಸೊಂಡೂರಿನಂತಹ ಊರುಗಳು ನಮ್ಮೆದೆಯೊಳಗೆ ಇಳಿಯುತ್ತಲೇ ಇರುತ್ತವೆ….
ಬಿ.ಶ್ರೀನಿವಾಸ