ಮನುಷ್ಯನ ನೈತಿಕ ವ್ಯವಸ್ಥೆಯೇ ಕುಸಿದು ಹೋದ ಊರಿನಲ್ಲಿ , ಬಹುಸಂಕೀರ್ಣವಾದ ಅನಿಶ್ಚಿತ ಕಾಲವೊಂದರಲ್ಲಿ ಬದುಕುವ ಮನುಷ್ಯನ ಊರೆಂಬೋ ಊರಿನ ಶರೀರ ಗಾಯಗೊಂಡಿದೆ ಎಂದು ಹೇಳಿಬಿಟ್ಟರೆ ಸಾಕೆ?.
ನಾಗರಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆ
ಇಂಥಾ ಊರುಗಳಲ್ಲಿ ಈಗ್ಗೆ ಹತ್ತು ವರುಷಗಳ ಹಿಂದೆ ಮನುಷ್ಯರನ್ನು ಯಾವುದೋ ಜಗತ್ತಿನ ಪ್ರಾಣಿಯೆಂಬಂತೆ, ಇಲ್ಲವೇ ಪ್ರದರ್ಶನಕ್ಕಿಟ್ಟ ವಸ್ತುವೆಂಬಂತೆ, ಮತ್ತೊಮ್ಮೆ ಯಂತ್ರಗಳ ಸ್ಪೇರ್ ಪಾರ್ಟ್ಸ್ ಗಳಂತೆ ಕಂಡಿದ್ದು ಇಡೀ ನಾಗರಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆಯೂ ಹೌದು.
ಮನುಷ್ಯರ ಬದುಕಿಗೆ ಅರ್ಥವೇ ಇಲ್ಲ
ಹಿಂಸೆ ನಡೆಯದಂತೆ ನೋಡಿಕೊಳ್ಳಬೇಕಾದ್ದು ಆಯಾ ಪ್ರಭುತ್ವಗಳ ಜವಾಬ್ದಾರಿ.ಕಣ್ಣಿಗೆ ಕಾಣದ ಹಿಂಸೆಗಳು ಸಹ ನಡೆಯದಂತೆ ನೋಡಿಕೊಳ್ಳುವ ಜವಾಬು ದಾರಿಯೂ ಅಧಿಕಾರ ಹಿಡಿದ ಸರ್ಕಾರಗಳದ್ದೆ ಆಗಿರುತ್ತದೆ. ಆದರೆ,ಸಂವೇದನಾಶೀಲ ಸಮಾಜವೊಂದನ್ನು ರೂಪಿಸುವ ನಿಟ್ಟಿನಲ್ಲಿ ಭಾಗಿಯಾಗುವ ಸರ್ಕಾರಗಳಿಗೆ ಸೂಕ್ಷ್ಮತೆ, ಸಂವೇದನೆಗಳಿಲ್ಲದೇ ಹೋದರೆ ಅಥವಾ ಅಕ್ರಮ, ಅನೈತಿಕ ಗಣಿಗಾರಿಕೆಯಲ್ಲಿ ಪ್ರಭುತ್ವಗಳೇ ಭಾಗಿಯಾದ ಹೊತ್ತಲ್ಲಿ ಮನುಷ್ಯರ ಬದುಕಿಗೆ ಅರ್ಥವೇ ಇರುವುದಿಲ್ಲ. ಬೆಟ್ಟದ ತುದಿಗಳಲ್ಲಿ ಬಹುತೇಕ ಗಣಿಗಳ ಪ್ಲಾಂಟ್ ಗಳಿರುತ್ತವೆ. ಯಾಕೆಂದರೆ ಹೈಗ್ರೇಡ್ ಅದಿರಿನ ನಿಕ್ಷೇಪಗಳು ಅಲ್ಲಿಂದಲೇ ಪ್ರಾರಂಭ. ಅಲ್ಲಿಯವರೆಗೂ ಹಾವು ಸುತ್ತು ಹಾಕುವ ರೀತಿಯಲ್ಲಿರುವ ಮಣ್ಣಿನ ದಾರಿಯಲ್ಲಿ ತನ್ನದೇ ಯಮ ಭಾರದ ಜೊತೆಗೆ ಟನ್ನುಗಟ್ಟಲೇ ಭಾರ ಹೊತ್ತ ಟಿಪ್ಪರುಗಳು ಹಲವಾರು ಬಾರಿ ಹತ್ತಿ ಇಳಿಯುತ್ತವೆ.
ಹಗಲು -ರಾತ್ರಿಗಳ ವ್ಯತ್ಯಾಸಗಳಿಲ್ಲ
ಕೂಲಿ ಕಾರ್ಮಿಕರು ಗಂಡು-ಹೆಣ್ಣು ಗಳೆಂಬ ಬೇಧಗಳಿಲ್ಲದೇ ತಿಂಗಳುಗಟ್ಟಲೆ ಅಲ್ಲಿಯೆ ಉಳಿದುಕೊಳ್ಳಬೇಕಾಗುತ್ತದೆ. ಕಬ್ಬಿಣದ ದೊಡ್ಡ ತೆರೆದ ಕಂಟೇನರುಗಳಲ್ಲಿಯೆ ಅವರ ವಾಸ. ಹೀಗೆ ಬದುಕುವ ಅವರಿಗೆ ಹಗಲು ರಾತ್ರಿಗಳ ವ್ಯತ್ಯಾಸಗಳಿರುವುದಿಲ್ಲ.
ಎತ್ತ ನೋಡಿದರೂ ಕೆಂಧೂಳು!
ಎತ್ತ ನೋಡಿದರೂ ಕೆಂಧೂಳು!, ಕಲ್ಲು,ಮಣ್ಣು. ಮೇಲೆ ನೋಡಿದರೆಷ್ಟೆ ಖಾಲಿ ಆಕಾಶ.ನಿದಿರೆ,ಊಟದಷ್ಟೆ ಮೈಥುನಗಳೂ ಕೂಡ ಇಲ್ಲಿ ಸಹಜ ಸಾಮಾನ್ಯ ವಿಷಯವಾಗಿದೆ. ಹೊರಜಗತ್ತಿನ ಸಂಪರ್ಕವೇ ತಪ್ಪಿಹೋದ ಇಂಥಾ ತುತ್ತತುದಿಯಲ್ಲಿ ವಾಸಿಸುವ ಗಂಡು-ಹೆಣ್ಣುಗಳ ಸುರತ ಕ್ರಿಯೆಗಳೂ ಸಾಮಾನ್ಯವಾಗಿದೆ. ಪ್ರೀತಿಯೂ ಅಲ್ಲದ,ಲೈಂಗಿಕ ಆಕರ್ಷಣೆಯೂ ಇಲ್ಲದೆ,ನಿರ್ಭಾವುಕ ಪ್ರಪಂಚದಲ್ಲಿ ಗಂಡು ಹೆಣ್ಣುಗಳಿಬ್ಬರಿಗೂ “ಯಾರು ನೋಡಿದರೇನು?”ಎಂಬ ಭಾವದಲ್ಲಿ ಯಾಂತ್ರಿಕ ಸಂಭೋಗ ಕ್ರಿಯೆ ಮುಂದುವರೆಸುತ್ತಾರೆ.! ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದವರಂತೆ ವರ್ತಿಸುವರು!
ಕ್ರಿಯೆ ನಡೆದಿದೆ.
ಸುರತ ಸಾಗಿದೆ.
ಇನ್ನೇನು ಸ್ಖಲಿಸಬೇಕಷ್ಟೆ!.
ನಂತರದ ಶಿಪ್ಟಿಗೆಂದು ಕೆಲಸಕ್ಕೆ ಬಂದವರ ಕಣ್ಣ ಎದುರಿಗೇ ನಡೆಯುತ್ತಿದ್ದರೂ ಏನೂ ಪ್ರತಿಕ್ರಿಯಿಸದ ಭಾವ!
ಅಬ್ಬಾ…ಎಂಥಾ ಸ್ಥಿತಿ!
ಈ
ಬದಿಯಲ್ಲಿ
ಅಪ್ಪನ ಹುಡುಕುತ್ತಾ ನಿಂತ ಹುಡುಗ
ಆ
ಬದಿಯಲ್ಲಿ
ಗಿರಾಕಿ ಹುಡುಕುತ್ತಾ ನಿಂತ ಅವ್ವ
ಇದು ಸದ್ಯದ ರಕ್ತಸಿಕ್ತ ಸೊಂಡೂರಿನ ಮುಸ್ಸಂಜೆಯ ಒಂದು ಚಿತ್ರ
ಹೌದು,
ಊರು ಗಾಯಗೊಂಡಿದೆ.
ಸಾಂಸ್ಕೃತಿಕ ಶರೀರ ಗಾಯಗೊಂಡಿದೆ.
ಇಷ್ಟು ಹೇಳಿದರೆ ಸಾಕೆ?
ಮನುಷ್ಯನ ನರನಾಡಿಗಳ ಸೂಕ್ಷ್ಮ ಭಾವತಂತುಗಳನ್ನೂ ಕಸಿದ ಗಣಿಗಾರಿಕೆಯ ಆಧುನಿಕತೆಗೆ ಏನೆಂದು ಕರೆಯುವುದು? ಹೇಳಿ, ರೋಗಪೀಡಿತ ಜೀವನಕ್ರಮಕ್ಕೆ ಏನಂತ ಕರೆಯಲಿ?
ಬಿ.ಶ್ರೀನಿವಾಸ