ಇಲ್ಲಿ ದ್ವೇಷವಿಲ್ಲ.ಜಗಳವಿಲ್ಲ.ಹತ್ಯಾಕಾಂಡಗಳೂ ನಡೆದಿಲ್ಲ.ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ ಊರ ಬೆನ್ನು ಬಾಗಿದೆ.
ಹೌದು, ಬದುಕು ಛಿದ್ರಗೊಂಡಿದೆ
ಒಂದೂರಿನಲ್ಲಿ ಒಬ್ಬ ರಾಜನಿದ್ದ.ಅವನೊಂದು ದಿನ ಬೇಟೆಗೆಂದು ಅಗೋ…ಅಲ್ಲಿ ಕಾಣಿಸುತ್ತಲ್ಲ,ಆ ಬೆಟ್ಟಗಳ ಸಾಲು,ಅಲ್ಲಿ ಕುದುರೆ ಮ್ಯಾಲೆ ಹೋಗುತ್ತಿರಬೇಕಾದರೆ ಹಚ್ಚಹಸುರಿನ ಗಿಡಮರಗಳಿಂದ ತಂಗಾಳಿ ಬೀಸುತ್ತಿತ್ತು.ಘಮಘಮಿಸುವ ವನಸುಮಗಳು..ಜೊತೆಗೆ ರಾಜಕುಮಾರೀನೂ ಇದ್ಲಂತೆ !.
ಹೀಗೆ ಶುರುವಾದ ಕಥೆ,ಸೊಂಡೂರಿನ ಬೀದಿ ಹಳ್ಳಕೊಳ್ಳಗಳ ದಾಟಿ,ನದಿಯನ್ನು ಸೇರಿ ಅಲ್ಲಿಂದ ಸಮುದ್ರ ಸೇರುವ ವರೆಗೂ …ನಿಲ್ಲುವ ಹಾಗಿರಲಿಲ್ಲ.
ಬೆಟ್ಟಗಳ ಸಂದುಗೊಂದುಗಳಲ್ಲಿ ಹರಿದು ಬರುವ ಹರಿಶಂಕರದ ನೀರು,ಘೋರ್ಪಡೆ ಮಹಾರಾಜರು ಬೇಟೆಗೆ ಹೊರಡುವ ರೀತಿ ನೀತಿ.ಅದರಲ್ಲು ಬೆಂಕಿ ರಾಜನ ಕಥೆಗಳು ಕೇಳಲು ಬಲು ರೋಚಕವಾಗಿರುತ್ತಿದ್ದವು.ಒಂದರ ಮೇಲೊಂದು ಕುಸ್ತಿಗೆ ಬಿದ್ದವರಂತೆ ಕಾಣುತ್ತಿದ್ದ ದೊಡ್ಡದೊಡ್ಡ ಕಪ್ಪು ಬಂಡೆಗಳು ನಮ್ಮನ್ನು ಏರಬಲ್ಲಿರಾ?ಸವಾಲೆಸೆಯುವಂತೆ ಕರೆಯುತ್ತಿಧ್ಧವು.ಹಸಿರಿನ ನಡುವೆ ಆಡುತ್ತಾ ಬೆಳೆದ ಮಕ್ಕಳು ಅಪ್ಪ ಅವ್ವಂದಿರುಗಳ ಅಜ್ಜಿಯಂದಿರುಗಳು ಪ್ರೀತಿಯಲ್ಲಿ ತೊಯ್ದುಹೋಗುತ್ತಿದ್ಧರು.
ಸಂಭ್ರಮಗಳೆಲ್ಲ ಎಲ್ಲಿ ಹೋದವೋ..?
ಮದುವೆ ಮುಗಿದ ಮನೆಯ ಹಂದರದ ಮೌನ!
ಊರ ತುಂಬಾ ಆವರಿಸಿಬಿಟ್ಟಿದೆ.
ಜೋ…ಜೋ…ಲಾಲೀ ಲಾಲೀ……ಹಾಡುತ್ತಾ ಬೆಳೆಯುತ್ತಾ ಮಕ್ಕಳನ್ನು ಮಲಗಿಸುತ್ತಿದ್ದ ಅವ್ವಂದಿರುಗಳ ಜೋಗುಳದ ಪದಗಳೂ ಈಗ ಬದಲಾಗಿವೆ.
ನಿನ್ನೆಯ ಕಥೆಗಳ ಬದಲು
ರಣ ರಣ ಬಿಸಿಲಿನಲ್ಲಿ
ಅಸ್ಥಿಪಂಜರಗಳು ಸಿಕ್ಕು ಒದ್ದಾಡುವ
ನಾಳಿನ
ಕಥೆಗಳನ್ನು
ಅವ್ವಂದಿರು ಇಂದೇ ಹೇಳಿಬಿಡುತ್ತಾರೆ.
ಸತ್ತ ಕಂದಮ್ಮಗಳ ಪಕ್ಕಾ ಲೆಕ್ಕ ಕೊಡುವ ತಾಯಿ!
ಊರಿನ ಕಥೆಗಳಿಗೆ ಆದಿಯೆಂಬುದು ಇರುವುದಿಲ್ಲ.ಹಾಗೆಯೇ ಅಂತ್ಯವೂ ಕೂಡ.ಮಾತಾಡಿಸಲೋ ಬೇಡವೋ ಎಂದುಕೊಳ್ಳುತ್ತಲೆ ಮೂವತ್ತರ ವಯಸ್ಸಿನ ಯುವಕನನ್ನು ಮಾತಾಡಿಸಿದೆ.
ಸೊಂಡೂರಿನ ಬಸ್ಸ್ಟಾಂಡಿನೆದುರಿನ ಗುರುಪ್ರಸಾದ್ ಹೋಟೆಲಿನ ಬಳಿ ನಿಂತಿದ್ದ.ಹೋಗಿ ಬರೋರಗೆಲ್ಲ ಬಸ್ ಚಾರ್ಜು ಕೇಳುತ್ತಿದ್ದ.ಅದ್ಯಾವುದು ಅಷ್ಟೊಂದು ದೂರದ ಊರೋ…?ಬರೋರ ಹತ್ತಿರ ದಿನಪೂರ್ತಿ ಅವನದು ಅದೊಂದೇ ಬೇಡಿಕೆಯಾಗಿತ್ತು.ಹಾಗೆಂದು ಎಂದೂ ಆ ಜಾಗ ಬಿಟ್ಟು ಕದಲಿದವನಲ್ಲ.ಬಲವಂತವಾಗಿ ಆತನನ್ನು ಮಾತನಾಡಿಸಲು ನಾನು ಹಾಗೂ ನನ್ನ ಮಿತ್ರ ಇಬ್ಬರೂ ಪ್ರಯತ್ನಿಸಿದೆವು.
ಆತ ಬಿಕ್ಕಿ ಬಿಕ್ಕಿ ಅಳತೊಡಗಿದ !
ಕಥೆಗಳು ಕೆಸರಿನ ನೀರಿನಂತೆಯೂ,ಮತ್ತೊಮ್ಮೆ ಬೆಂಕಿಯ ಕೆನ್ನಾಲಿಗೆ ಮುಂಚೆಯೂ ಹರಿಯುತ್ತಿರುತ್ತವೆ.ಇವರು ಅನುಭವಿಸಿದ ನೋವುಗಳನ್ನು ಬರೆಯಲು ಒಂದಿಡೀ ಜೀವಮಾನ ಸಾಕಾಗದು ಎನಿಸುತ್ತಿದೆ.
ಅಂತಹದೊಂದು ಪುಟ್ಟ ಊರಿನಲ್ಲಿ ಎಷ್ಟೊಂದು ಜನಜಂಗುಳಿ ಇರುತ್ತಿತ್ತು.ದಿನಕ್ಕೆರಡು ಮೂರು ಸಾವಿನ ಸುದ್ದಿಗಳನ್ನು ಕೇಳುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿತ್ತು.ರೊಕ್ಕದ ದಾಂಗುಡಿ ಯಲ್ಲಿ ಜನರು ಸಾವಿನ ವಿಷಯವನ್ನೆ ಮರೆತು ಬಿಟ್ಟರು.
ಆದರೆ…..
ಆಕೆ ಮಾತ್ರ ಮರೆತಿರಲಿಲ್ಲ…!
ಹೊಸಳ್ಳಿಯ ಪುಟ್ಟ ಮಣ್ಣಿನ ಮನೆಯ ಗೋಡೆಯ ಮೇಲೆ ಆಕೆ ಬರೆದ ಗೀಟುಗಳು ಕಂಡವು.
ಆಕೆ…
ಸಾಲಿ ಕಲಿತಿಲ್ಲವಾದರೂ
ಟೀಬಿಗೆ
ಗೂರಲು ಕೆಮ್ಮಿಗೆ
ಉಸಿರುಗಟ್ಟಿ
ಟಿಪ್ಪರುಗಳ ಗಾಲಿಗೆ ಸಿಕ್ಕು
ಸತ್ತ ಕಂದಮ್ಮಗಳು ಎಷ್ಟೆಂದು ನಿಖರವಾಗಿ ಹೇಳಬಲ್ಲರು
ಅದೋ ನೋಡಿ
ಗೋಡೆಯ ಮೇಲೆ
ಆಕೆ ಬರೆದ ಗೀಟುಗಳಿವೆ!
ಬಿ.ಶ್ರೀನಿವಾಸ.