ದಾವಣಗೆರೆ: ಪಂ. ಪುಟ್ಟರಾಜ ಗವಾಯಿಗಳ ‘ಸಾವಿರದ ಸಾಹಿತ್ಯ’ ಪುಸ್ತಕಗಳನ್ನು ಸಾವಿರಾರು ಮನೆಗಳಿಗೆ ತಲುಪಿಸುವ ಅಭಿಯಾನವನ್ನು ಸಮಿತಿಯಿಂದ ನಡೆಸಲಾಗುತ್ತಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳ ಅಭಿಮಾನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಪುಟ್ಟರಾಜ ಗವಾಯಿಗಳ ಕೀರ್ತಿ ಮತ್ತಷ್ಟು ಬೆಳಗಿಸಲು ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಈ ಸಮಿತಿಯು ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ರಚನೆಯಾಗಿದ್ದು, ಮಹಿಳಾ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ. ಎಲ್ಲಾ ಪದಾಧಿಕಾರಿಗಳು ಗವಾಯಿಗಳ ಮಹಿಮೆಯನ್ನು ಮತ್ತಷ್ಟು ಜನಗಳಿಗೆ ಮುಟ್ಟಿಸುವ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಕಿರುವಾಡಿ ಗಿರಿಜಮ್ಮ ಮಾತನಾಡಿ, ಪುಟ್ಟರಾಜ ಗವಾಯಿಗಳನ್ನು ನಾನು ಹತ್ತಿರದಿಂದ ನೋಡಿದ್ದು, ನಮ್ಮದು ಕಿರುವಾಡಿ ಮನೆತನವಾಗಿದ್ದರಿಂದ ಅವರು ನಮ್ಮ ಮನೆಗೆ ಪೂಜೆಗೆ ಬರುತ್ತಿದ್ದರು. ಅವರು ಮಾಡುವ ಪೂಜೆ ನೋಡುತ್ತಿದ್ದರೆ ದೈವಾಂಶ ಸಂಭೂತರೆ ಬಂದು ಪೂಜೆ ಮಾಡುತ್ತಿದ್ದಂತೆ ನಮಗೆ ಭಾಸವಾಗುತ್ತಿತ್ತು. ಇಂದು ಈ ಕಾರ್ಯಕ್ರಮಕ್ಕೆ ಬಂದಿರುವುದು ನನ್ನ ಪುಣ್ಯ ಎನ್ನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಂ. ಪುಟ್ಟರಾಜ ಗವಾಯಿಗಳಿಗೆ ಸಂಗೀತದ ಜತೆಗೆ ಅಗಾಧವಾದ ಜ್ಞಾನಸಂಪತ್ತು ಕೂಡ ಇತ್ತು. ಅವರ ಸಂಗೀತ ಕೇಳುತ್ತಿದ್ದರೆ ಮನಕ್ಕೆ ಮುದ ಕೊಡುತ್ತಿತ್ತು. ಅವರ ಮಾತುಗಳು ಶಾಂತಿ, ನೆಮ್ಮದಿಯುತ ಬದುಕಿಗೆ ಮಾರ್ಗದರ್ಶನ ನೀಡುತ್ತಿದ್ದವು. ವಚನ ಸಾಹಿತ್ಯ ಮತ್ಯು ಶರಣ ಸಾಹಿತ್ಯ ಮತ್ತಷ್ಟು ಬೆಳೆಯಬೇಕು ಎಂದು ಆಶಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ ಮಾತನಾಡಿ, ಗವಾಯಿಗಳ ಕುರಿತು ಹೆಚ್ಚು ಪ್ರಚುರ ಕಾರ್ಯ ಮಾಡಲು ಇಂತಹ ಕಾರ್ಯಕ್ರಮಗಳು ನಡೆಯಬೇಕು. ಆರ್ಥಿಕ ಬೆಂಬಲಕ್ಕಿಂಕಿತ ಮಾನಸಿಕ ಬೆಂಬಲ ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಅಣಬೇರು ಮಂಜಣ್ಣ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಕೆ. ಪರಮೇಶಪ್ಪ, ಶಿವಬಸಯ್ಯ ಚರಂತಿಮಠ ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಪಿ.ಎಂ ಕೊಟ್ರಯ್ಯ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.