ಬಳ್ಳಾರಿ ಜಿಲ್ಲೆಯ ವರಮಾನವು ರಾಜ್ಯಕ್ಕೆ ಐದನೇಯ ಸ್ಥಾನದಲ್ಲಿದೆ. ಉಳಿದೆಲ್ಲ ವಿಚಾರಗಳಲ್ಲಿ ಹದಿನೆಂಟೋ ಇಪ್ಪತ್ತನೆಯ ಸ್ಥಾನದಲ್ಲಿದೆ. ಲೋಕಾಯುಕ್ತರ ವರದಿ ಜನರ ಪಾಲಿಗೆ ವರದಾನವಾಗಬೇಕಿತ್ತು. ಸುಪ್ರೀಮ್ ಕೋರ್ಟಿನ ಹಸಿರು ಪೀಠದ ತೀರ್ಪು ಜನರ ಮೊಗದಲ್ಲಿ ಕಿರುನಗೆಯನ್ನಾದರೂ ಮೂಡಿಸಲು ಸಾಧ್ಯವಿದೆ. ಆದರೆ ನಮ್ಮ ನಾಯಕರುಗಳಿಗೆ ಜೈಲಿನಿಂದ ಹೊರಗೆ ಬರುವ ಮತ್ತು ಹೊರಗಿರುವ ವರಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಗಳಷ್ಟೆ. ಜನ ನಿರೀಕ್ಷೆ ಇಟ್ಟುಕೊಳ್ಳುವುದಾದರೂ ಹೇಗೆ?
ರೋದಿಸುತ್ತಿರುವ ಸುಬ್ರಾಯನಹಳ್ಳಿ
ಸೊಂಡೂರು ತಾಲೂಕಿನ ಬೆಟ್ಟದ ಮೇಲೆ ಸುಬ್ರಾಯನಹಳ್ಳಿ ಎಂಬೊಂದು ಪುಟ್ಟ ಹಳ್ಳಿ.ಒಂದು ಕಾಲದಲ್ಲಿ ಹಚ್ಚು ಹಸುರಿನ ಗುಡ್ಡದ ಮೇಲಿರುವ ಹಳ್ಳಿಯಾಗಿತ್ತು.ಅದೀಗ ಮರುಭೂಮಿಯಲ್ಲಿ ಯಾರೋ ತನ್ನನ್ನು ದೋಚಿ ಹೋಗಿದ್ದಾರೆ ಎಂದು ರೋದಿಸುತ್ತ ಕುಳಿತಂತೆ ತೋರುವ ಹಳ್ಳಿ.
ಆ ಹಳ್ಳಿಯ ಹೊರವಲಯದಲ್ಲಿ ವಿಚಿತ್ರವಾದ ಜಾತ್ರೆ ನಡೆಯುತ್ತದೆ. ಅದಕ್ಕೆ “ಉಗುಳಮ್ಮನ ಜಾತ್ರೆ” ಎಂದು ಹೆಸರು. ತಿಂಗಳಿಡೀ ಮೈನ್ಸ್ ಗಳಲ್ಲಿ ಮೈ ಮುರಿದು ದುಡಿದ ಕಾರ್ಮಿಕರಿಗೆ ರೇಷನ್ ಮತ್ತು ಸಂಬಳ ಕೊಡುವ ಆ ದಿನ ಕಾರ್ಮಿಕರು ಹೆಂಡ, ಹುಂಜ , ಕೋಳಿ ಎಂದು ಬಿಜಿಯಾಗಿರುತ್ತಾರೆ.
ಯಾರಿಗೆ ಬೇಕಾದರೂ ಮನಸಾರೆ ಬೈಯ್ಯಬಹುದು!
ಆ ಹೊತ್ತಿನಲ್ಲಿ ಊರ ಹೊರಗಿನ ಬೇವಿನಮರದ ಉಗುಳಮ್ಮನಿಗೆ ಪೂಜೆಗೈದ ನಂತರ,ತಾನು ಬಯಸಿದ ಯಾರಿಗೆ ಬೇಕಾದರೂ ಮನಸಾರೆ ಬೈಯ್ಯಬಹುದು! ಅದೊಂದು ದಿನ ಮಾತ್ರ ಈ ರಿಯಾಯಿತಿ.ಗಣಿ ಮಾಲೀಕನ ಕಿರುಕುಳ, ಸಾಲದ ಸಂಬಳ, ಹೀಗೆ ನಾನಾ ತರಹದ ಸಮಸ್ಯೆಗಳನ್ನು , ಸಮಸ್ಯೆ ತಂದಿಟ್ಟವರನ್ನೂ ಉಗುಳಮ್ಮ ದೇವಿಯ ಮುಂದೆ ಹೇಳಿಕೊಂಡು ಮನಸಾರೆ ಬಯ್ಯಬಹುದಿತ್ತು.ಇದಕ್ಕೆ ಯಾರೂ ತಕರಾರು ತೆಗೆಯುವಂತಿರಲಿಲ್ಲ,ಇದು ದೇವಿಯ ಬೈಲಾ!.ಬೈದು ಬೈದು ನಿರಾಳರಾಗಿ ಆ ದಿನದ ಮಟ್ಟಿಗಾದರೂ ಹೆಂಡದ ಅಮಲಿನಲ್ಲಿ ನಿದ್ದೆಗೆ ಜಾರಿಬಿಡುತ್ತಿದ್ದರು.ತಾವು ಕೆಲಸ ಮಾಡುವ ಮಾಲೀಕರಿಗೆ ಬೈದರೂ ಪುನಃ ಮುಂಜಾನೆ ಅದೇ ಧಣಿಗಳ ಮುಂದೆ ಕೆಲಸಕ್ಕೆ ಹೋಗುತ್ತಿದ್ದರು.
ಉಗುಳಮ್ಮ ದೇವಿಗೆ ಕರುಣೆಯಿಲ್ಲ
ಆದರೂ ಉಗುಳಮ್ಮ ದೇವಿಗೆ ಕರುಣೆಯಿಲ್ಲ.ಒಂದೇ ಒಂದು ದಿನವೂ ಮಿಸುಕಾಡಿಲ್ಲ. ಜನ ಮಾತ್ರ ಆ ದೇವತೆಗೆ ಬೈಯ್ಯುವ ಸಲಿಗೆ ಬೆಳೆಸಿಕೊಂಡಿದ್ದಾರೆ. ಕಾಲ ಮಾತ್ರ ತಣ್ಣಗೆ ಸರಿದು ಹೋಗುತ್ತಿದೆ. ಈಗಲಾದರೂ ನನ್ನ ಓಡಾಟದ ಈ ಬರೆಹಗಳನ್ನು,ತಣ್ಣನೆಯ ಕ್ರೌರ್ಯವನ್ನು ತಿಳಿದ ನಂತರವೂ ಸಹೃದಯಿಗಳಾದ ಓದುಗರು ಉಗುಳಮ್ಮನ ಜಾತ್ರೆಗೆ ಬಂದು ನೀವೂ ಉಗಿಯುತ್ತೀರಲ್ಲವೆ? ಗುಮ್ಮನ ಜಾತ್ರೆ ಈ ಕಾಲದ ಬಹುದೊಡ್ಡ ರೂಪಕವಾಗಿ ನನಗಂತೂ ಇಂದಿಗೂ ಕಾಡುತ್ತಿದೆ.
ಬಿ.ಶ್ರೀನಿವಾಸ