Kannada News | Sanduru Stories | Dinamaana.com | 05-06-2024
ಅಗಾಧ ಮೌನ (Sanduru Stories)
ಯುದ್ಧ ಮುಗಿದ ನಂತರ ಎರಡೂ ಪಾಳೆಯದಲ್ಲಿ ಉಳಿಯುವುದು ಅಗಾಧ ಮೌನ ಮತ್ತು ಗಾಯದ ನೋವು.ದೇಹ ಹೊಕ್ಕ ಶಸ್ತ್ರಗಳು ಉಂಟುಮಾಡಿದ ಗಾಯಗಳಿಗೆ ಮುಲಾಮು ಸವರಿಕೊಳ್ಳುತ್ತಿರುವವರ ಸ್ಥಿತಿ ಇಲ್ಲಿನ ಜನರದ್ದು.
ಎದೆಯೊಳಗೆ ನೋವು …(Sanduru Stories)
ಇಂತಹ ಸಂದರ್ಭಗಳಲ್ಲಿ ನಾಡು ಹೋಗೆನ್ನುವ ,ಕಾಡು ಬಾ ಎನ್ನುತ್ತದೆ ಎಂಬ ವಿಷಾದಮಯ ಕಾಲದಲ್ಲಿರುವ ಮುದುಕರು ಅಂತರ್ಮುಖಿಗಳಾಗುವುದುಂಟು.ಆದರೆ ವಿಚಿತ್ರವೆಂದರೆ,ಆಟವಾಡಿಕೊಂಡಿರಬೇಕಿದ್ದ ಮಕ್ಕಳೂ ಅಂತರ್ಮುಖಿಗಳಾಗುವುದು ಎದೆಯೊಳಗೆ ನೋವನ್ನುಂಟು ಮಾಡುತ್ತದೆ.
ಮಟ ಮಟ ಮಧ್ಯಾಹ್ನದೊತ್ತು,ಐಸ್ಗೀರಿ ಮಾರುವ ಶೇಕ್ ಸಾಬುವಿಗಾಗಿ ಕಾದು ನಿಂತು ಮಕ್ಕಳು,ಕೂದಲಿನ, ಪಿನ್ನಾ,ರಬ್ಬರು…ರಿಬ್ಬನ್ನು,ಟಿಕಲೀ ಎಂದು ರಾಗವಾಗಿ ಕೂಗುತ್ತಾ ಬರುವ ಆಕೆ ಮತ್ತು ಬೆನ್ನ ಹಿಂದೆ ಹೊತ್ತು ಆಕೆಯ ಮಗು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-31 ಆಕೆ ಮೊನ್ನೆ ದಿನ ಬಸ್ ಸ್ಟ್ಯಾಂಡಿನಲ್ಲಿ ಸಿಕ್ಕಳು!
ಗಂಗೀ ಬಾರೆ.. ಗೌರಿ ಬಾರೆ……(Sanduru Stories)
ಗಂಗೀ ಬಾರೆ.. ಗೌರಿ ಬಾರೆ… ಎಂದು ಶಿವನ ಪಾಡನು ಮನೆಮನೆಗೆ ಸಾರುವ ಅವರು,ಸೀತೆಯ ಅಳಲು,ದ್ರೌಪದಿಯ ಸಂಕಟ,ಭೀಮನ ನಿಷ್ಟೆ ರಾಮನ ಪ್ರಭುತ್ವ,ಭೀಮ ದುರ್ಯೋಧನರ ಪರಾಕ್ರಮ ಗಳೊಂದಿಗೆ ಕೈಯೊಡ್ಡಿ ನಿಂತ ಹಗಲು ವೇಷಗಾರರು!.
ಕರಡಿ ಕುಣಿಸುತ್ತಾ ಬರುವ ಆತ ಮತ್ತು ಆತನ ಕರಡಿ,ಕರಡಿಯ ಮೇಲೆ ಕುಳ್ಳಿರಿಸಿ ಮಗನ ಭಯ ಓಡಿಸುವ ನಂಬಿಕೆಯಲ್ಲಿ ನಿಂತ ಅವಳು. ಊರೆಂಬೋ ಊರ ಮಸಣದಲ್ಲಿ ಎಲ್ಲೆಂದು ಹುಡುಕಲಿ? ಊರಿಗೂ ಕನಸುಗಳು ಬೀಳುವ ಹಾಗಿದ್ದಿದ್ದರೆ…
ಬಗೆದು ಬಗೆದು
ಬೋಳಾದ ಗುಡ್ಡಗಳಲ್ಲಿ
ಬೆಳೆದು ನಿಂತ ಜ್ವಾಳದ ಜಾರುವ ತೆನಿ
ಒಂದು ಕೈಯ್ಯಲ್ಲಿ ಜಾರುವ ಗರ್ಭವನಿಡಿದು
ಇನ್ನೊಂದು ಕೈಯ್ಯಲ್ಲಿ
ಇರಿದ ಮಕ್ಕಳಿಗೆ
ತುತ್ತನುಣಿಸುವ ತಾಯಿ!
ನೋಡ ನೋಡುತ್ತಲೇ ಚಿತ್ರಗಳೆಲ್ಲ ಪಟಪಟನೆ ಸುರುಳಿ ಸುತ್ತಿ ಕುಳಿತುಬಿಟ್ಟಿವೆ.
ರಾತ್ರಿ ಕಂಡ ಬೆಟ್ಟಗಳು
ಮುಂಜಾನೆ ಇಲ್ಲವಾದವು
ಕುರಿ ಮೇಕೆ ಮೇಯ್ದು
ಹಿಕ್ಕೆ ಹಾಕಿ ಜಿಗಿದಾಡಿದ ಜಾಗ
ರಫ್ತಾದವು….
ಇಲ್ಲಿಂದ ಎಲ್ಲಿಗೋ ರಫ್ತಾದವು
ಸತ್ತವರ ಲೆಕ್ಕವೊಂದನು ಬಿಟ್ಟು!.
ಬಿ.ಶ್ರೀನಿವಾಸ