Kannada News | Sanduru Stories | Dinamaana.com | 11-06-2024
“ಮಣ್ಣು ತೂರುವ ಆಟ” (Sanduru Stories)
ಇಲ್ಲಿ ಮಣ್ಣೆಂಬುದು ಮಾಯೆಯೋ..ಮೋಹವೋ ಒಂದೂ ಅರ್ಥವಾಗದ ಸ್ಥಿತಿಯಲ್ಲಿ ಊರ ಜನರಿದ್ದಾರೆ. ಮಣ್ಣೆಂಬುದು ಹೊನ್ನಾಗಿ ಕೆಲವರಿಗೆ ಕಂಡರೆ,ಇನ್ನು ಕೆಲವರಿಗೆ ಮಣ್ಣು ಬೈಗುಳದ ವಸ್ತುವಾಗಿ ಹೋಗಿದೆ.
ತುಂಬಿದ ಮನೆಯ ಸದಸ್ಯರನ್ನು ಕಳೆದುಕೊಂಡ ಹೆಂಗಸೊಬ್ಬಳು ಮಣ್ಣನ್ನು ಆಕಾಶಕ್ಕೆ ತೂರಿ ಅದ್ಯಾರನ್ನು ಬೈಯ್ಯುತ್ತಿದ್ದಾಳೋ..?.ಆದರೆ ಹುಡುಗರು ಮಾತ್ರ ಇದಾವುದರ ಪರಿವೆಯೂ ಇಲ್ಲದೆ ಮೈಮೇಲೆ ಕೆಂಪುಧೂಳು ತೂರಿಕೊಂಡು “ಮಣ್ಣು ತೂರುವ ಆಟ” ಆಡಿಕೊಂಡಿದ್ದಾರೆ.
ಬದುಕು ‘ನಾರ್ಮಲ್’ ಬಂದಿಲ್ಲ (Sanduru Stories)
ಹೌದು,ಆಡುವ ಆಟಿಕೆಗಳನ್ನು ಕೊಡಿಸುವರಾರು?ಕೊಡಿಸೋಣವೆಂದರೂ ಬಣ್ಣ ಬಣ್ಣದ ಜಾತ್ರೆಗಳು ಮಾಯವಾಗಿವೆ. ಬದುಕು ‘ನಾರ್ಮಲ್’ ಎನ್ನುವ ಸ್ಥಿತಿಗೆ ಬಂದಿಲ್ಲವಾದರೂ ಜನರು ಬದುಕಿನ ದಾರಿಗಳನ್ನು ಹುಡುಕಿ ಎಲ್ಲಿಗೋ ಹೊರಟಿರುವಂತಿದೆ.
ಚುಮು ಚುಮು ನಸುಕಿನಲ್ಲಿ ಎದುರು ಸಿಕ್ಕವರು ಕೇಳುತ್ತಿದ್ದ “ಬದುಕೀಗೆ ಹೊಂಟೇನವ್ವಾ..?” “ಹ್ಞೂ..ಮಾವ” “ಏನವ್ವಾ ನಿನ ಗಂಡ ಆಗಲೇ ಹೊಲಕ್ಕೋದ್ನನು?” “ಹ್ಞೂ ಸಣಪಾ” ಸಂಭಾಷಣೆಗಳ ನುಂಗಿದ ಗಾಳಿ ಕೆಂಧೂಳು ಹೊತ್ತು ಎಲ್ಲಿಯೋ ತಾಣ ಹುಡುಕುತ್ತ ಸಾಗಿದೆ.
Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 37: ಮಣ್ಣು ಸೇರಿದ ಜೀವ
ಎಲ್ಲವೂ ಮಾಯ! (Sanduru Stories)
ಎತ್ತು, ಆಕಳು, ಎಮ್ಮೆ, ಕುರಿ , ಮೇಕೆ,ಕೋಳಿ,ಹಾಕಿದ ಸಗಣಿ ಗಂಜಲದ ರಸ್ತೆಗಳು.ಕೋಣ ಹ್ಞೂಂಕರಿಸಿದ್ದಕ್ಕೆ ಮಲಗಿದ್ದ ಕೂಸು ಮೆಟ್ಟಿಬಿದ್ದ ರಸ್ತೆಗಳು. ಅಷ್ಟೇ ಅಲ್ಲ,ಮಾವ,ಸಣ್ಣಪ್ಪ,ದೊಡ್ಡಪ್ಪ,ಅಜ್ಜ,ಅಜ್ಜಿ,ಅಣ್ಣ,ತಂಗಿ,ಅಕ್ಕ,ಅಳಿಯ….ನಾನು,ಎಲ್ಲವೂ ಮಾಯ!
ಓ ಕೆಂಧೂಳಿಯೇ ಎಲ್ಲಿಗೆ ಕರೆದುಕೊಂಡು ಹೋದಿ? ಯಾರದೋ ಜೇಬಿನಲ್ಲಿ ರೊಕ್ಕ ತುಂಬಲು ನನ್ನವರ ಬದುಕನ್ನು ಯಾಕೆ ಬಲಿತೆಗೆದುಕೊಂಡೆ?ಕೊರಳಪಟ್ಟಿ ಹಿಡಿದು ಕೇಳಬೇಕೆನಿಸುತ್ತದೆ.
ಸುಡುಗಾಡು ಮೌನದ ಊರಿನಲ್ಲಿ ಬದುಕುವುದಾದರೂ ಹೇಗೆ? (Sanduru Stories)
ಇಂಥದೊಂದು ಊರಿನಲ್ಲಿ ಹೀಗೀಗೆ ಆಯ್ತು, ಕೆಂಧೂಳಿನಲ್ಲಿ ಎಲ್ಲಾ ಹರಕೊಂಡು ಹೋಯಿತು. ಈಗ ಸದ್ದಿಲ್ಲ ಪದ್ದಿಲ್ಲ, ಸುಡುಗಾಡು ಮೌನದ ಊರಿನಲ್ಲಿ ಬದುಕುವುದಾದರೂ ಹೇಗೆ? ಧೂಳು ಮೆತ್ತಿ ನಿಂತ ನೆರಿಕೆಯಲ್ಲಿ ಅಂಗಾತ ಮಲಗಿದಾತನ ತಲೆಯ ಬದಿ ಉರಿವ ದೀಪದ ಬೆಳಕಿನಲ್ಲಿ ಆಕೆ ಅಳುತ್ತಿರುವಾಗ, ಸಂತೆ ಮುಗಿಯಿತೆಂದು ಸಾಮಾನುಗಳನ್ನು ಲಗುಬಗೆಯಿಂದ ಕಟ್ಟುತ್ತಿರುವ ಜನರನ್ನು ಊರು ಯಾಕೆ ಬಿಟ್ಟು ಹೋಗುತ್ತಿದ್ದೀರಿ?ಎಂದು ಅವರನ್ನು ಕೇಳುವುದಾದರೂ ಹೇಗೆ ?
ಬಿ.ಶ್ರೀನಿವಾಸ
Pathetic. Please publish them. They are eye openner.