ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿಯುತ್ತಿದೆ. ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಬೀಜ, ಗೊಬ್ಬರ ರೈತರಿಗೆ ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂಬ ರೈತರ ಆರೋಪದ ಹಿನ್ನೆಲೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಗೊಬ್ಬರ, ಬೀಜ ನಿಗಮದ ಗೋದಾಮುಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ. ರೈತರು ಬಿತ್ತನೆ ಮಾಡಲು ಭೂಮಿ ಹದ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಬೀಜ, ಗೊಬ್ಬರ ವಿತರಿಸದೆ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಿದ್ದ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಬೀಜ, ಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡದೆ ರೈತರಿಗೆ ಸಮರ್ಪಕವಾಗಿ ಬೀಜ, ಗೊಬ್ಬರ ಪೂರೈಸಬೇಕೆಂದು ಅಧಿಕಾರಿಗಳು ತಾಕೀತು ಮಾಡಿದರು.
ಮೆಕ್ಕೆಜೋಳ ಬಿತ್ತನೆಗೆ ಡಿಎಪಿ ಗೊಬ್ಬರ ಬೇಕು. ಆದರೆ ಸೊಸೈಟಿಗಳಲ್ಲಿ ಡಿಎಪಿ ಗೊಬ್ಬರ ಇಲ್ಲ. ೨೫-೨೫-೨೫ ಗೊಬ್ಬರ ಇದೆ, ತೆಗೆದುಕೊಂಡು ಹೋಗಿ ಎನ್ನುತ್ತಾರೆ ಎಂದು ಕೊಗ್ಗನೂರು ಗ್ರಾಮಕ್ಕೆ ಭೇಟಿ ನೀಡಿದಾಗ ರೈತರು ಸಮಸ್ಯೆ ಹೇಳಿಕೊಂಡಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ೪೫೦೦ ಸಾವಿರ ಮೆಟ್ರಿಕ್ ಟನ್ ಗೊಬ್ಬರ ಇದೆ ಎಂದು ಹೇಳುತ್ತಾರೆ. ಅದಕ್ಕೆ ತಾವು ಕೃಷಿ ಅಧಿಕಾರಿಗಳೊಂದಿಗೆ ಖುದ್ದು ದಾಸ್ತಾನು ಮಾಡಿರುವ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗೊಬ್ಬರ ಸಾಕಷ್ಟು ಇದೆ. ಯಾವುದೇ ಕಾರಣಕ್ಕೆ ಕೃತಕ ಅಭಾವ ಸೃಷ್ಟಿ ಮಾಡದೆ, ರೈತರಿಗೆ ಬೇಕಾದ ಗೊಬ್ಬರ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ಬ್ಯಾಗ್ ಗೊಬ್ಬರಕ್ಕೆ ೧೩೫೦ ರೂ. ಎಂಆರ್‌ಪಿ ದರ ಇದೆ. ಬೀಜ, ಗೊಬ್ಬರ ನಿಗಮದಲ್ಲಿ ತೆಗೆದುಕೊಂಡರೆ ೧೧೫೦ ರೂ. ದರವಿದೆ. ನೀವು ಡೀಲರ್‌ಗಳು, ಸೊಸೈಟಿಗಳಿಗೆ ಸಮರ್ಪಕವಾಗಿ ಗೊಬ್ಬರ, ಬೀಜ ಪೂರೈಸಿ ಎಂಆರ್‌ಪಿ ದರದಲ್ಲಿ ಮಾರಾಟ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಎಂಆರ್‌ಪಿ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದರೆ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.