ಹರಿಹರ: ದುಡುಕು, ದುರಾಸೆ ಮತ್ತು ದ್ವೇಷದ ಕಾರಣದಿಂದ ದಾಖಲಾಗಿರುವ ದಾವೆಗಳನ್ನು ಮುಕ್ತಾಯಗೊಳಿಸಲು ಪಕ್ಷಗಾರರು ಕೂಡಲೇ ಮುಂದಾಗಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಆಯೋಜಿಸಿದ್ದ ವಿಶೇಷ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೋ ಸಲ ನಾವು ಹೂಡಿರುವ ವ್ಯಾಜ್ಯ ದುಡುಕಿನಿಂದ ತೆಗೆದುಕೊಂಡ ನಿರ್ಧಾರವಾಗಿರುತ್ತದೆ, ದುರಾಸೆ, ದಾಯಾದಿ ಮತ್ಸರ ಅಥವಾ ದ್ವೇಷದಿಂದ ವ್ಯಾಜ್ಯಗಳನ್ನು ಮುಂದುವರಿಸುವುದರಿಂದ ನೆಮ್ಮದಿ ಭಂಗವೆ ಹೊರತು ಮತ್ತೇನು ಪ್ರಯೋಜನವಿಲ್ಲ ಎಂದರು.
ಜನರು ಸಕಾರಾತ್ಮಕವಾಗಿ ಆಲೋಚಿಸಬೇಕು, ಸಣ್ಣಪುಟ್ಟ ಸಮಸ್ಯೆಗಳಿಗೂ ಕೋರ್ಟ್ ಮೆಟ್ಟಿಲು ಹತ್ತಬಾರದು. ಕೋರ್ಟ್, ಕಚೇರಿ, ಪೊಲೀಸ್ ಠಾಣೆ ಅಲೆದಾಟದಿಂದ ಯಾವುದೇ ಪ್ರಯೋಜನವಿಲ್ಲ. ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಉಭಯ ಪಕ್ಷಗಾರರು ಉದಾರತೆಯಿಂದ ರಾಜಿ ಮಾಡಿಕೊಂಡು ಅನ್ಯೋನ್ಯತೆಯಿಂದಿರಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾದ ನ್ಯಾಯಾಧೀಶ ಮಹಾವೀರ ಮಾತನಾಡಿ, ದೇಶದಲ್ಲಿ ಪ್ರತಿದಿನ ಲಕ್ಷ್ಯಾಂತರ ಪ್ರಕರಣಗಳ ವಿಚಾರಣೆ ನಡೆದು, ಸಾವಿರಾರು ಪ್ರಕರಣಗಳು ಇತ್ಯರ್ಥವಾಗುತ್ತಿವೆ, ಆದರೆ ಕಕ್ಷಿಗಾರರಲ್ಲಿ ಆತ್ಮತೃಪ್ತಿ, ನೆಮ್ಮದಿ ಕಾಣುತ್ತಿಲ್ಲ. ಆದ್ದರಿಂದ ರಾಜಿ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳುವುದೇ ಜಾಣತನ ಎಂದರು.
ಜೂ.13 ರಂದು ಹಮ್ಮಿಕೊಂಡಿರುವ ಬೃಹತ್ ಲೋಕ್ ಅದಾಲತ್‍ವರೆಗೆ ಪ್ರತಿದಿನ ಪ್ರತಿಯೊಂದು ನ್ಯಾಯಾಲಯದಲ್ಲೂ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಖರ್ಚಿಲ್ಲದೆ, ಶೀಘ್ರವಾಗಿ ನ್ಯಾಯ ನಿರ್ಣಯ ಮಾಡುವ ಮಹತ್ವದ ಲೋಕ್ ಅದಾಲತ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ನ್ಯಾಯಾಧೀಶರಾದ ಪದ್ಮಶ್ರೀ ಮುನುವಳ್ಳಿ, ಪಕ್ಕೀರಮ್ಮ ಕೆಳಗೇರಿ, ಜ್ಯೋತಿ ಅಶೋಕ್ ಪತ್ತಾರ್, ವೀಣಾ ಕೋಳೇಕರ, ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್ ಕುಮಾರ್, ಉಪಾಧ್ಯಕ್ಷೆ ಕೆ.ಎಸ್.ಶುಭಾ, ಎಪಿಪಿಗಳಾದ ಪುರುಶೋತ್ತಮ, ಹೇಮಲತಾ, ಎಜಿಪಿ ನವೀನ್ ಕುಮಾರ್, ಹಿರಿಯ ವಕೀಲರು, ಕಕ್ಷಿದಾರರಿದ್ದರು.