ದಾವಣಗೆರೆ: ಸ್ಮಾರಕಗಳು ಒಂದು ನಾಡಿನ ಐತಿಹಾಸಿಕ ಕನ್ನಡಿಯಿದ್ದಂತೆ. ಹಿಂದಿನ ಅರಸರು ಏನು ಮಾಡಿದ್ದಾರೋ ಅದನ್ನೇ ಆಯಾ ಭಾಗದ ಸ್ಮಾರಕಗಳು ನಮಗೆ ಇತಿಹಾಸ ತಿಳಿಸಿಕೊಡುತ್ತವೆ. ಆದ್ದರಿಂದ ಸ್ಮಾರಕಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮಂಜಣ್ಣ ಅಭಿಪ್ರಾಯಪಟ್ಟರು.
ನಗರದ ಎ.ವಿ.ಕಮಲಮ್ಮ ಕಾಲೇಜಿನಲ್ಲಿ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಸ್ಮಾರಕಗಳ ಮಾದರಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಕಲೆ, ಸಾಹಿತ್ಯ, ಸಂಗೀತ, ಸ್ಮಾರಕಗಳು ಮತ್ತು ವಾಸ್ತುಶಿಲ್ಪಗಳು ಹೆಜ್ಜೆ ಹೆಜ್ಜೆಗೂ ನಾಡಿನ ಚರಿತ್ರೆಯನ್ನು ಎತ್ತಿ ತೋರಿಸುತ್ತವೆ. ವಿದ್ಯಾರ್ಥಿಗಳು ಇತಿಹಾಸ ಅಧ್ಯಯನ ಮಾಡಬೇಕು. ಇತಿಹಾಸ ಕುರಿತು ಮಕ್ಕಳು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸದಾ ಪರಸ್ಪರ ಚರ್ಚಿಸುತ್ತಾ ಜ್ಞಾನಾರ್ಜನೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಕಮಲ ಸೊಪ್ಪಿನ ಮಾತನಾಡಿ, ಕಲಾ ವಿಭಾಗ ನಮಗೆ ಜಗತ್ತಿನ ಜ್ಞಾನ ನೀಡುತ್ತದೆ. ಈ ವಿಶೇಷ ಸ್ಮಾರಕಗಳ ಮಾದರಿ ಪ್ರದರ್ಶನ ಕಾರ್ಯಕ್ರಮದ ಪ್ರಯೋಜನ ಪಡೆಯುವ ವಿದ್ಯಾರ್ಥಿಗಳು ಜೀವನದಲ್ಲಿ ಉಪನ್ಯಾಸದ ಅನುಭವ ಅಳವಡಿಸಿಕೊಂಡು ಭವಿಷ್ಯದ ಉತ್ತಮ ನಾಯಕರಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು.
ಬಾಪೂಜಿ ವಿದ್ಯಾಸಂಸ್ಥೆಯ ಜಯದೇವಪ್ಪ, ಐಕ್ಯೂಎಸಿ ಸಂಚಾಲಕರಾದ ಆರ್.ಆರ್.ಶಿವಕುಮಾರ್ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎನ್.ವೀಣಾ, ಡಾ.ಪಿ. ವಿಶ್ವನಾಥ, ಎಲ್.ಎನ್.ಪರಶುರಾಮ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.