Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನ ಹೆಮ್ಮೆ : ಚಳುವಳಿಗಳ ಮಳೆಗಾಲದಲ್ಲಿ ಉದಯಿಸಿದ ಕವಿ – ಹುಲಿಕಟ್ಟಿ ಚನ್ನಬಸಪ್ಪ
Blog

ದಿನಮಾನ ಹೆಮ್ಮೆ : ಚಳುವಳಿಗಳ ಮಳೆಗಾಲದಲ್ಲಿ ಉದಯಿಸಿದ ಕವಿ – ಹುಲಿಕಟ್ಟಿ ಚನ್ನಬಸಪ್ಪ

Dinamaana Kannada News
Last updated: July 8, 2024 5:20 am
Dinamaana Kannada News
Share
dinamaana
ಹುಲಿಕಟ್ಟಿ ಚನ್ನಬಸಪ್ಪ
SHARE

Kannada News | Dinamaanada Hemme  | Dinamaana.com | 08-07-2024

ಬದಲಾದ ಭಾರತದ ರಾಜಕೀಯ, ಸಾಮಾಜಿಕ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷವೊಂದು ಇದುವರೆಗೆ ವೈಜ್ಞಾನಿಕವಾಗಿ , ವೈಚಾರಿಕ ಸಂಶೋಧನೆಯ ಫಲವಾಗಿ ಬೆಳೆದುಕೊಂಡು ಬಂದ , ವಿಶ್ಲೇಷಣೆಗಳನ್ನೆ ತಿರುಚಿ , ಭಾರತದ ಚರಿತ್ರೆಯನ್ನೆ ವಿಕೃತೀಕರಿಸುತ್ತಿದೆ.ಇದಕ್ಕೆ ಪ್ರತಿಭಟನೆಯೋ ಎಂಬಂತೆ ಕಾವ್ಯದ ಮೂಲಕ ಕವಿ ಚನ್ನಬಸಪ್ಪನವರು ತಮ್ಮ ಪ್ರತಿರೋಧವನ್ನು ದಾಖಲಿಸಿರುವುದು.

ಈ ರೀತಿ –
ನನಗೊಂದು ಪೆನ್ನು ಕೊಡಿ
ನಾನು ಬರೆಯಬೇಕಾಗಿದೆ
ತಾಜ್ ಮಹಲ್ ನ ಗೋಡೆಯಲ್ಲಿ
ಹುದುಗಿರುವ ನನ್ನ ಜನರ ಮೂಳೆಗಳ ಬಗ್ಗೆ
ಬುನಾದಿಯಲ್ಲಡಗಿರುವ
ತಲೆಬುರುಡೆಗಳ ಬಗ್ಗೆ
ಬರೆಯಬೇಕಿದೆ ನಾನು,
ನನಗೊಂದು ಪೆನ್ನು ಕೊಡಿ

ಬದುಕನ್ನೆ ಚಳುವಳಿಗಳಿಗೆ ಮುಡಿಪಾಗಿಟ್ಟವರು.. (Hulicatti Channabasappa)

ದಿನಬಳಕೆಯ ಭಾಷೆಯೊಂದು ಚನ್ನಬಸಪ್ಪನವರ ಪ್ರತಿಭಾ ಸ್ಪರ್ಶದಿಂದ ಕಾವ್ಯವಾಗುವುದು ಹೀಗೆ. ಚಳುವಳಿಗಳ ಮಳೆಗಾಲದಲ್ಲಿ ಉದಯಿಸಿದಂತೆ ಕಾಣುವ ಕವಿ ಹುಲಿಕಟ್ಟಿ ಚನ್ನಬಸಪ್ಪ ತನ್ನ ಇಡೀ ಬದುಕನ್ನೆ ಚಳುವಳಿಗಳಿಗೆ ಮುಡಿಪಾಗಿಟ್ಟವರು.ಅವರ ಆಲೋಚನೆಯಂತೆಯೇ ಬರೆಹ ಮತ್ತು ಬದುಕು ಕೂಡ ಒಂದಕ್ಕೊAದು ಮಿಸಳಭಾಜಿಯಂತೆ ಬೆರೆತು ಕೊಂಡಿವೆ.

ಸದಾ ಹೋರಾಟ , ಸಂಘರ್ಷಗಳ ಬದುಕನ್ನೆ ಉಂಡು ಬದುಕಿದ ಕವಿ, ತನ್ನ ಬರೆಹದಲ್ಲಿ ಅದನ್ನೇ ಪ್ರತಿಪಾದಿಸಿದ್ದಾನೆ. ಭಾಷೆಗೆ, ಶಬ್ದಗಳಿಗೆ ತನ್ನ ಸಹಚರ್ಯೆಯಿಂದ ಅರ್ಥ, ಧ್ವನಿ , ಭಾವಕೋಶವೊಂದು ಪ್ರಾಪ್ತಿಯಾಗುವ ವಿಶಿಷ್ಟಲೋಕದ ತಲ್ಲಣಗಳನ್ನು ಓದುಗನ ಎದೆಗೆ ದಾಟಿಸುತ್ತಾರೆ. ಹೀಗೆಂದ ಮಾತ್ರಕ್ಕೆ “ನನಗೊಂದು ಪೆನ್ನು ಕೊಡಿ “ಸರಳವಾಗಿ ಓದಿಸಿಕೊಂಡು ಹೋಗುವ ಪದ್ಯವಾದರೂ ಅದರ ಆಳದಲ್ಲಿ ಚರಿತ್ರೆ ಮತ್ತು ವರ್ತಮಾನಗಳ ಬಿಕ್ಕುಗಳಿವೆ.

ಗೋಲ್ ಗುಂಬಜ್ ನಲ್ಲಿ
ಪ್ರತಿಧ್ವನಿಸುವ ನನ್ನ ಜನರ
ನೋವಿನ ಬಗ್ಗೆ
ಹಂಪೆಯ ಸೂಳೆಯ ಬಜಾರಿನ ಬಗ್ಗೆ
ಮುತ್ತು ರತ್ನದ ಹೊಳೆ
ಹರಿಯುವಾಗ
ಕೂಳಿಲ್ಲದೆ ಸತ್ತವರ ಬಗ್ಗೆ
ಬರೆಯಬೇಕಿದೆ ನಾನು
ನನಗೊಂದು ಪೆನ್ನು ಕೊಡಿ

ಇವರು ಪದ್ಯ ಅರ್ಥ- ಪರಂಪರೆಯಲ್ಲಿ ಬಿಚ್ಚುತ್ತಾ ಹೋಗುತ್ತದೆ. ಚರಿತ್ರೆಯಲ್ಲಿ ನಿರ್ಲಕ್ಷ್ಯಕ್ಕೊಳಗಾದವರು, ತುಳಿತಕ್ಕೊಳಗಾದವರ ಬಗ್ಗೆ ಬರೆಯಬೇಕು, ನನಗೊಂದು ಪೆನ್ನು ಕೊಡಿ ಎನ್ನುವ ಕವಿಯ ಮಾತೇ ಬಹುದೊಡ್ಡ ರೂಪಕದಂತಿದೆ.

ಸಂಕೀರ್ಣ  ಸಮಸ್ಯೆಗಳಿಗೆ “ಪೆನ್ನು” ಅಸ್ತ್ರ  (Hulicatti Channabasappa)

ಚರಿತ್ರೆಯ ಅನ್ಯಾಯ , ಶೋಷಣೆ, ಕ್ರೌರ್ಯಗಳತ್ತ ಬೊಟ್ಟು ಮಾಡಿ ತೋರಿಸುತ್ತಲೇ ಜಾತ್ಯತೀತ ಭಾರತದ ಕನಸು ಕಾಣುವ ಕವಿಗೆ ದೇಶ ಕಟ್ಟಲು ಮೊದಲು ಕೈಗೆ ಪೆನ್ನು ಬೇಕಿದೆ. ಭಾರತದಂತಹ ಸುವಿಶಾಲ ದೇಶದಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ “ಪೆನ್ನು”ಎಂಬ ಅಭಿವ್ಯಕ್ತಿಯು ಬಹುದೊಡ್ಡ ಅಸ್ತ್ರದಂತೆ ತೋರುತ್ತದೆ.

ಸಂವಿಧಾನದಲ್ಲಿ ಸೂಚಿಸಿರುವ ಮೌಲ್ಯಗಳಿಗೆ ಇರುವ ಅಪಾಯಗಳೇನು ಎನ್ನುವುದು ಈ ಹೊತ್ತು ಎಲ್ಲ ಭಾರತೀಯನೂ ಯೋಚನೆ ಮಾಡಬೇಕಾದ ವಿಷಯ.ಅದಕ್ಕಾಗಿ ಸಂವೇದನಾಶೀಲ ಕವಿ ಹುಲಿಕಟ್ಟಿ ಚನ್ನಬಸಪ್ಪನವರು ತಮ್ಮ ಕಾವ್ಯದ ಮೂಲಕ ದೇಶಕ್ಕೆ ಹಬ್ಬುತಿರುವ ನಂಜು ತೆಗೆಯುವ ಕೆಲಸ ಮಾಡುತ್ತಿದ್ದಾರೆ.

 

ಕ್ರೌರ್ಯಕ್ಕೆ ಸಾಕ್ಷಿಯಾಗಿ
ನಿಂತಿರುವ ಮಾಸ್ತಿಕಲ್ಲು
ವೀರಗಲ್ಲುಗಳ ಬಗ್ಗೆ
ರಾಜರ ಕ್ರೂರ ಮುಖಗಳ ಬಗ್ಗೆ
ಬರೆಯಬೇಕಿದೆ ನಾನು
ನನಗೊಂದು ಪೆನ್ನು ಕೊಡಿ

ಕವಿತೆಯ ಸಾಲುಗಳಿಗೆ ವಾಸ್ತವದ ರಕ್ತದಾನ   (Hulicatti Channabasappa)

ಈ ಜಗತ್ತನ್ನು ಬಿಟ್ಟು ಯಾವ ಕಾವ್ಯ , ಸಾಹಿತ್ಯವೂ ಇಲ್ಲ ಮತ್ತು ಇದ್ದರೂ ಅದು ಬದುಕಲಾರದು ಎಂದೇ ಚನ್ನಬಸಪ್ಪನವರು ತಮ್ಮ ಪ್ರೀತಿಯ ಕವಿತೆಯ ಸಾಲುಗಳಿಗೆ ವಾಸ್ತವದ ರಕ್ತದಾನ ಮಾಡಿದ್ದಾರೆ. ಒಂದು ಕಾಲಕ್ಕೆ ನವ್ಯದ ಭಾರದಿಂದಾಗಿ ಕಾವ್ಯ ಬಸವಳಿದು ಹೋದಾಗ ಎಂಭತ್ತರ ದಶಕದಲ್ಲಿ ರೈತ ಚಳುವಳಿಯ ಎಂ.ಡಿ.ನಂಜುಂಡಸ್ವಾಮಿ, ಕಾರ್ಮಿಕ ಚಳುವಳಿಯ ಸುಂದರೇಶ್ ಮತ್ತು ದಲಿತ ಬಂಡಾಯ ಸಾಹಿತ್ಯದ ಭೋರ್ಗರೆತದಲ್ಲಿ ಮಿಂದೆದ್ದು ಬರೆದವರಲ್ಲಿ ಕೆಲವರು ಕೊಚ್ಚಿಹೋದರೆ ಹುಲಿಕಟ್ಟಿ ಚನ್ನಬಸಪ್ಪನವರು ಈ ಚಳುವಳಿಗಳನ್ನು ಆಸರೆಯನ್ನಾಗಿಸಿಕೊಂಡು ಚಳುವಳಿ ಮತ್ತು ಸಾಹಿತ್ಯಗಳ ಎರಡನ್ನೂ ಸಮಾನವಾಗಿ ಕಾಣುತ್ತ ತೇಲಿ ಬಂದವರು.

ಈ ಕಾಲದ ಬುದ್ಧಿಗೇಡಿ ಭಾವನೆಗಳ ಸೆಳೆತಕ್ಕೆ ಬಲಿಯಾದ ದೇಶದ ಯುವಸಮೂಹಕ್ಕೆ ಹುಲಿಕಟ್ಟಿಯವರು ತಮ್ಮ ಆತ್ಮಸಾಕ್ಷಿಯಾದ ಗಾಂಧಿ ಮೂಲಕ ಹೀಗೆ ಪಿಸುಗುಟ್ಟುತ್ತಾರೆ.

 

ದೇಶದ ತುಂಬೆಲ್ಲಾ
ದ್ವೇಷ ಹರಡಿ
ಕಲ್ಲು ಮಣ್ಣಿನ
ಗುಡಿ ಕಟ್ಟಲು
ಹೃದಯ ಮಂದಿರಗಳ ಒಡೆದು
ಕೂಗಿದರು ಅವರು
ಜೈ ಶ್ರೀರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್
ಕೂಗು…ಅಬ್ಬರಿಸದಿದ್ದರೂ ಎದೆಗೆ ತಾಕಬಲ್ಲುದು.ವರ್ತಮಾನದ ತಲ್ಲಣಗಳಿಗೆ ಪ್ರತೀಕವಾಗಿ,

ದನಗಳಿಗಾಗಿ
ಜನಗಳ ಕೊಂದು
ರಕ್ತ ಸಿಕ್ತ ಕೈಗಳ ಮೇಲೆತ್ತಿ
ಕೂಗಿದರು ಅವರು
ಜೈ ಶ್ರೀ ರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

ಹಂತಕನಿಗೊಂದು
ಗುಡಿಕಟ್ಟಿ
ಗಂಟೆ ಬಾರಿಸುತ್ತ
ಕೂಗಿದರು ಅವರು
ಜೈ ಶ್ರೀರಾಮ
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

ಚರಿತ್ರೆ ಮತ್ತು ರಾಜಕೀಯದ ಮಿಸಳಭಾಜಿಯ ಹಿಂಸೆಯನ್ನು ನಿರಾಕರಿಸುವ ಕವಿ , ಹಿಂಸೆಯನ್ನು ಮಣಿಸಿ ಅಹಿಂಸೆಯ ಹಾಜರಾತಿಗಾಗಿ ಹಾತೊರೆಯುತ್ತಾನೆ.
ಚರಿತ್ರೆ ಮತ್ತು ವರ್ತಮಾನಗಳ ಆಳವಾದ ಜ್ಞಾನದ ಅರಿವಿರುವ ಕವಿ , ತನ್ನ ನಿರಂತರ ಹುಡುಕಾಟ ಮತ್ತು ಹಳೆಯದರ ಜೊತೆಯ ಅನು ಸಂಧಾನದಿಂದಾಗಿ  ಉತ್ತಮ ಕವಿಯಾಗಿದ್ದಾರೆ. ಅಷ್ಟೇ ಅಲ್ಲ ಕವಿತೆಯ ಶಬ್ದಗಳಿಗೆ ಬೆಚ್ಚುವ , ನೈತಿಕ ಎಚ್ಚರವನ್ನು ಇಟ್ಟುಕೊಂಡು, ಕವಿ-ಕವಿತೆಗೂ ಇರುವ ಹೊಕ್ಕುಳ ಬಳ್ಳಿಯ ಸಂಬಂಧ ಅಳಿಸಿ ಹೋಗದೆ ಇರುವ ಹಾಗೆ ಬದುಕುತ್ತಿದ್ದಾರೆ.

ಖಾವಿಯೊಳಗೆ
ಕಾಮ ಹರಿದಾಡಿದಾಗ
ಬಡ ಸೀತೆಯರ
ಮಾನಭಂಗ
ಆಗಲೂ
ಕೂಗಿದರು ಅವರು
ಜೈ ಶ್ರೀರಾಮ್
ಅಲ್ಲಿ
ಗಾಂಧಿಯ ಆತ್ಮ
ಪಿಸುಗುಟ್ಟಿತು
ಹೇ ರಾಮ್

ಓದುಗನ ಎದೆಗೆ ಇಳಿಸುವಾಗ  (Hulicatti Channabasappa)

ಇಡೀ ಕವಿತೆಯಲ್ಲಿ ಜೈ ಶ್ರೀರಾಮ್ ಎಂಬ ಪದಕ್ಕೆ ಹೇ ರಾಮ್ ಎಂಬ ಪದವು ಮೂಡಿಸುವ ವಿಶಿಷ್ಟತೆಯು ಅನನ್ಯವಾದುದು.
ಕವಿತೆಯ ಮನೋಧರ್ಮಕ್ಕನುಗುಣವಾಗಿ , ಕವಿಯ ಅನುಭವ ವಿಚಾರಗಳು , ಸ್ಪಷ್ಟನೆ ತಳೆಯುತ್ತ , ಸೂಚ್ಯವಾಗುತ್ತ ತನ್ನ ಸಂವೇದನೆಗಳನ್ನು ದೇಶದ , ಓದುಗನ ಎದೆಗೆ ಇಳಿಸುವಾಗ ….ಎಲ್ಲೋ ಒಂದು ಕಡೆ, ಇವರ ಕವಿತೆಗಳು , ಮಾತಿನಂತೆ,
ಗದ್ಯವಾಯಿತೆಂದು ತೋರಿದರೂ , ಪಾಬ್ಲೋ ನೆರೂಡ ನ ಗಾಢ ಪ್ರಭಾವ ಇರುವುದನ್ನು ಅಲ್ಲಗಳೆಯುವಂತಿಲ್ಲ. ಹುಲಿಕಟ್ಟಿ ಚನ್ನಬಸಪ್ಪನವರಿಗೆ ದಂತಗೋಪುರದ ಕಾವ್ಯದ ಕೊರಳಪಟ್ಟಿ ಹಿಡಿದು ಬೀದಿಗೆ ಬಗ್ಗಿಸುವ ಹಾತೊರೆತವೂ ಇದೆ. ಕಾವ್ಯ ಬೀದಿಗೆ ಬರಬೇಕು ಎಂಬುದು ಇವರ ಆಶಯ.

ಕಾವ್ಯ ಬೀದಿಗೆ ಬಂದ ಮೇಲೆ ಕವಿಯದೇನು ಕೆಲಸ?

ಕವಿತೆ-ಮಾತನಾಡುತ್ತದೆ.
ಹುಲಿಕಟ್ಟಿ ಚನ್ನಬಸಪ್ಪನವರ ಕವಿತೆಗಳು ಅಬ್ಬರಿಸುವುದು ಹೀಗೆ.
ಅಂದು ಹಾಗೆ,ಈಗ ನನಗೂ ಒಂದು ಪೆನ್ನು ಕೊಡಿ, ನಾನೂ ಬರೆಯಬೇಕಿದೆ.

ಚನ್ನಬಸಪ್ಪನವರ ಒಡಲಲ್ಲಿ ಕಷ್ಟ ಕಾರ್ಪಣ್ಯಗಳ ಕಡಲೇ ಇದೆ  (Hulicatti Channabasappa)

ಚಳುವಳಿಗಳ ಸಾಂಗತ್ಯ ಚನ್ನಬಸಪ್ಪನವರಿಗೆ ಅಪಾರ ಜೀವನಾನುಭವ ಕೊಟ್ಟರೆ , ಪದ ಕಟ್ಟಿ ಹಾಡುವ ಹಾಡು ಪಾಡುಗಳನ್ನು ಬರೆಯಬಲ್ಲರೆಂಬAತೆಯೂ ಮಾಡಿದೆ. ಇದು ಬಹುಶಃ ಸ್ವತಃ ಲಾವಣಿಕಾರರು ಆಗಿದ್ದ ಅವರು ತಂದೆಯಿAದ ಬಂದ ಲಯ ಇರಬೇಕು. ಚಿಕ್ಕ ವಯಸ್ಸಿನಲ್ಲಿ ತಾಯಿಯಿಲ್ಲದೆ ಬೆಳೆದ ಚನ್ನಬಸಪ್ಪನವರ ಒಡಲಲ್ಲಿ ಕಷ್ಟ ಕಾರ್ಪಣ್ಯಗಳ ಕಡಲೇ ಇದೆ.

ವೈಯಕ್ತಿಕ ಬದುಕು ಸಾಮಾಜಿಕವಾಗಿ ಹೌದೆಂದು , ನೋವನ್ನು ಮತ್ತು ಬಂಡಾಯವನ್ನೆ ಉಸಿರಾಡುವ ಇವರ ಕವಿತೆಗಳು ಬಹು ಸುಲಭವಾಗಿ ಅರ್ಥವಾಗಬಲ್ಲುವು. ಬಹುತೇಕ ಕಡೆ ಚನ್ನಬಸಪ್ಪನವರು ಕವಿಯ ಸಂಯಮ ಮರೆತು ಚಳುವಳಿಗಾರನೂ ಆಗಿ ಆಕ್ರೋಶದ ಮಾತಿಗೆ ಇಳಿದು ಬಿಡುತ್ತಾರೆ. ಇದು ಎಲ್ಲಾ ಎಡವಾದಿಗಳ ಸಮಸ್ಯೆ. ಸದಾ ಕಾಲ ಕೂಲಿಕಾರರ, ರೈತರ ಸಂಘಟನೆಗಳಲ್ಲಿ ಜವಾಬ್ದಾರಿ ಹೊತ್ತ ಕವಿಗೆ ಕುಶಲತೆಯ ಕುಸುರಿತನಕ್ಕೆ ಸಮಯ ಕಡಿಮೆಯಾಗಿ ಕಾವ್ಯ ಸೊರಗಿದರೂ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪಿದರೆ ಸಾಕು ಎಂಬ ಭಾವದಲ್ಲಿ ಅವರು,

 

ಬರೆಯುತ್ತಿರುತ್ತೇನೆ ನಾನು
ನೆತ್ತರಿನ ಬಗ್ಗೆ
ನೆತ್ತರು ಚೆಲ್ಲಿದ ಆ ಮಣ್ಣಿನಲ್ಲಿ
ಗುಲಾಬಿ ಹೂಗಳು
ಅರಳುವವರೆಗೆ
ಎಂದು ನೆರೂಡನ ನೆರಳಿನಂತೆ ಬರೆಯುತ್ತಾರೆ.

ಏಯ್, ಹಲ್ಕಾ
ಮತ್ತ್ಯಾಕೆ ತೋರಿಸ್ತೀಯೋ
ಆ ನಿನ್ನ ಹೊಲಸು ಮುಖ
ನೀ ಭ್ರಷ್ಟ ಅನ್ನೋದ್ನ
ಇಡೀ ದೇಶಕ್ಕೆ ತೋರಿಸೈತೆ ತೆಹಲ್ಕಾ!
ಎಂದೂ ಬರೆಯಬಲ್ಲರು.ಹಾಗೆಯೇ ಸದಾ ಶಾಂತಿಯನ್ನು ಬಯಸುವ ಮನಸ್ಸೊಂದು
ನೀವು
ಬಂದೂಕು  ಹಿಡಿದು ಹೆದರಿಸಿದರೆ
ಬಾಂಬುಗಳನ್ನಿಟ್ಟು ಸಿಡಿಸಿದರೆ
ಸಾಯುವುದಿಲ್ಲ ಪ್ರೀತಿ
ಸಿಡಿದ ಬಾಂಬಿನ ಹೊಗೆಯಲ್ಲೂ
ಹೊರಹೊಮ್ಮುತ್ತದೆ ಪ್ರೀತಿ
ಯಾಕೆನ್ನುತ್ತೀರಾ
ನೋಡಿ,ಬುದ್ಧ ಇದ್ದಾನೆ ಇಲ್ಲಿ

ನೀವು ಬಿತ್ತಿದ
ಜಾತಿ,ಮತ,ಮತ್ಸರದ
ವಿಷಯ ಬೀಜದಲ್ಲಿ
ಮೊಳಕೆಯೊಡೆಯುತ್ತದೆ ಪ್ರೀತಿ
ಯಾಕೆಂದರೆ
ನೆಲದ ಗರ್ಭದ ತುಂಬ
ತುಂಬಿಕೊಂಡಿದೆ  ಪ್ರೀತಿ

 ಯುದ್ಧದ ಭೀಕರತೆಯ ಕುರಿತು ಬರೆದವರು ಕನ್ನಡದಲ್ಲಿ ವಿರಳ   (Hulicatti Channabasappa)

ಎಂದು ಅಪ್ಪಟ ದೇಶಪ್ರೇಮಿಯಾಗಿ , ಈ ನೆಲದಲ್ಲಿ ಪ್ರೀತಿ ಎಂದಿಗೂ ಸಾಯುವುದಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಯಾಕೆಂದರೆ ಕವಿ ಚನ್ನಬಸಪ್ಪನವರಷ್ಟು ಯುದ್ಧದ ಭೀಕರತೆಯ ಕುರಿತು ಬರೆದವರು ಕನ್ನಡದಲ್ಲಿ ವಿರಳ. ಸಮುದಾಯ ಜಾಥಾದಲ್ಲಿ “ತಲೆಗಳು ಉರುಳ್ಯಾವೋ ” ಹಾಡು ಹಾಡುತ್ತಿದ್ದರೆ ಯುದ್ಧದ ಭೀಕರ, ಭೀಭತ್ಸ ಗುಣ, ಭಯಾನಕತೆಯನ್ನು ಕಣ್ಣಿಗೆ ಕಟ್ಟಿದ ರೀತಿಯಿತ್ತಲ್ಲ, ಅದು ಹುಲಿಕಟ್ಟಿಯವರನ್ನು ಜನಮನದ ಹೆಸರಾಂತ ಕವಿಯನ್ನಾಗಿಸಿತು.

ತಲೆಗಳು ಉರುಳ್ಯಾವೋ ರಕ್ತದ ಕೋಡಿ ಹರಿದಾವೋ
ರಾಜಾಧಿರಾಜರ ಅಮಲಿನ ದಾಹಕೆ
ಹೆಣ್ಣು,ಹೊನ್ನು ಮಣ್ಣಿನ ಮೋಹಕೆ
ಜನಗಳ ಬಲಿಯಲ್ಲೋ ರಕ್ತದಕೋಡಿ ಹರಿದಾವೋ
ಚರಿತ್ರೆಯ ದಾರಿಗಳನ್ನು ಹಾದು,

ವರ್ತಮಾನಕ್ಕೆ ಮುಖಾಮುಖಿಯಾಗುವ ಚನ್ನಬಸಪ್ಪನವರು,

ಉದಾರೀಕರಣ ಮತ್ತು ಜಾಗತೀಕರಣ ತಂದೊಡ್ಡಿದ ಸವಾಲುಗಳನ್ನು ಮೀರುವ ಎಚ್ಚರಿಕೆಗಳನ್ನು ಕೊಡುತ್ತಾರೆ.
ಡಾಲರ್ ಕಣ್ಣಿನ ಗಿಡುಗನ ಕೊಂದು
ಕಾಪಾಡಬೇಕೆಂದು ಜಗವನು
ಇಂದು
ಪಾರಿವಾಳಗಳೇ ಎದ್ದೇಳಿ ನೀವು
ಒಂದಾಗಿ ನಿಲ್ಲಿ ಮನುಕುಲಕ್ಕಾಗಿ

ಎಂಬ ಮಹತ್ತರ ಆಶಯವನ್ನು ವ್ಯಕ್ತಪಡಿಸುತ್ತಾರೆ.ಆ ಕಾಲದಲ್ಲಿ ಈ ಕವಿತೆ ಜಾನಪದೀಯಗೊಂಡು ಎಲ್ಲರ ನಾಲಿಗೆಯ ಮೇಲೆಯೆ ಲಾಸ್ಯವಾಡುತ್ತಿತ್ತು ಎಂದು ಹೇಳುವವರಿದ್ದಾರೆ. ಅಮೆರಿಕಾದ ಬಂಡವಾಳಶಾಹಿಯನ್ನೂ ಕೇವಲ ಒಂದು ಡಾಲರ್ ಕಣ್ಣಿನ ಗಿಡುಗನ ರೂಪಕದ ಮೂಲಕ ಏನೆಲ್ಲವನ್ನೂ ಹೇಳಿಬಿಡುತ್ತಾರಲ್ಲವೆ?. ಈ ತೆರನಾದ ಕವಿತೆ ಬರೆಯಲು ಚಳುವಳಿಗಾರನಿಂದಲ್ಲದೆ ಮತ್ಯಾರಿಗೆ ಸಾಧ್ಯ?

ಪ್ರೇಮಚಂದ್ರರ ಒಂದು ಕತೆ “ಹೆಣದ ಬಟ್ಟೆ”ಯಲ್ಲಿ ದಲಿತರಾದ ಅಪ್ಪ-ಮಗ, ಎಷ್ಟು ಬಡವರೆಂದರೆ ಆ ಮುದುಕನಿಗೆ ಸತ್ತುಹೋದ ಸೊಸೆಯನ್ನು ಹೂಳಬೇಕು. ಅದಕ್ಕೊಂದು ಬಟ್ಟೆ ಬೇಕು. ಇಬ್ಬರೂ ಒಡೆಯರ ಮನೆಗೆ ಹೋಗಿ ಅಂಗಲಾಚುತ್ತಾರೆ. ಭಿಕ್ಷೆ ಬೇಡಿ, ಬಟ್ಟೆಗೆಂದು ಕೇಳಿ ಪಡೆದ ಹಣದಲ್ಲಿ ಹೆಂಡ ಖರೀದಿಸಿ ಇಬ್ಬರೂ ಗಡದ್ದಾಗಿ ಕುಡಿದು ಮಲಗಿಬಿಡುತ್ತಾರೆ.

ಒಂದಿಡೀ ಸಮಾಜ, ಒಂದು ಸಮುದಾಯವನ್ನು ಅತ್ಯಂತ ಕೀಳು ಎಂದು ಭಾವಿಸುತ್ತಾ ಹೋದರೆ, ಆ ಸಮುದಾಯ ತಾನೇ ಕೀಳೆಂದುಕೊAಡು ಬಿಡುವುದು. ತಮ್ಮನ್ನು ಸಮಾಜ ಹೇಗೆ ನೋಡುತ್ತಿದೆಯೋ ಹಾಗೆ ಆಗಿಬಿಡುವುದು.ಇಂತಹ ಅಪಾಯಗಳನ್ನು ಲೇಖಕ ಗ್ರಹಿಸಬೇಕು ಎನ್ನುವುದು.
ಅದಕ್ಕಾಗಿಯೇ ಏನೋ ಚನ್ನಬಸಪ್ಪನವರು

ಅವರು ಹಚ್ಚಿದ
ಬೆಂಕಿಯ ದಳ್ಳುರಿಯಲ್ಲೂ
ಅಲ್ಲೊಂದು ಕಡೆ
ಮಿನುಗುತಿದೆ ದೀಪ
ಪ್ರೀತಿಯ ಕಣ್ಗಳಲ್ಲಿ
ಅವ್ವ ಹಚ್ಚಿದ ದೀಪ
ಎಂದು ಬರೆಯುತ್ತಾರೆ.
ಮನುಷ್ಯ ಬೆಳೆಯುವುದು ಬುದ್ದಿಯಲ್ಲಿ, ವೈಚಾರಿಕತೆಯಲ್ಲಿ.ಮಾಗುತ್ತಾ ಹೋಗುವ ಶಕ್ತಿ ಇರೋದು ಇವುಗಳಿಗೆ ಮಾತ್ರ.
ಹೀಗೊಂದು ಕ್ರೌರ್ಯ ಎಂದು ಗೊತ್ತಾದ ಕೂಡಲೇ ನಮ್ಮ ಮನಸ್ಸು ಬೌದ್ಧ ಮನಸ್ಸಾಗಿದ್ದರೆ ಅದು ಅತ್ಯಂತ ಗಂಭೀರವಾದ ಆಲೋಚನಾ ಪ್ರವಾಹವನ್ನು ಉಂಟುಮಾಡುತ್ತದೆ.

ಪ್ರಭುತ್ವಕ್ಕೆ ಹಿಂಸಿಸುವ ಗುಣ ಇರಬಾರದು.
ಭಾರತದಲ್ಲಿ ಹಿಂಸೆಯ ಮೀಮಾಂಸೆ…ಬಹಳ ಉದ್ದ..
ಜಾತೀಯ ಹಿಂಸೆ
ಪ್ರಭುತ್ವದ ಹಿಂಸೆ
ಅಧಿಕಾರದ ಹಿಂಸೆ

ಗಾಂಧಿಯನ್ನು ಎಷ್ಟೇ ಬೈದಾಡಿದರೂ ಸಹ…
ಈ ಹೊತ್ತು ಮೇಲ್ವರ್ಗ ಮತ್ತು ಕೆಳವರ್ಗಗಳು ಕುಳಿತು ಮಾತನಾಡುವುದಕ್ಕೆ ಸಾಧ್ಯ ಮಾಡಿದ್ದೇ ಗಾಂಧಿ.

ಗಾಂಧಿಯ ಪಾಪಪ್ರಜ್ಞೆ
ಅಂಬೇಡ್ಕರರ ಕಿಚ್ಚು
ಎರಡನ್ನೂ ಒಳಗೊಂಡ ಭಾರತಕ್ಕೀಗ ಹಿಂಸೆಯ ಕಾಟ.
ಸ್ವತಃ ಕವಿಯೇ ಗಾಂಧಿಯಾಗಿ ಕೇಳುತ್ತಾನೆ,

ಗಾಂಧೀಜಿಯ ಕಣ್ಗಳಲ್ಲಿ ಪ್ರಶ್ನೆಗಳಿವೆ ಹಲವು,
ಎದೆಗೆ ಗುಂಡಿಟ್ಟು
ಕೊಂದವರು ಯಾರು?
ಜಾಗತೀಕರಣದ ಆಪೋಶನಕ್ಕೆ ಬಲಿಯಾದ ಪ್ರತಿ ದೇಶಗಳಲ್ಲಿ ನಿರುದ್ಯೋಗ,ಬಡತನಗಳ ಬವಣೆ. ಅದಕ್ಕಾಗಿಯೇ…
ಗಲ್ಲಿಗಲ್ಲಿಗಳಲ್ಲಿ
ಬಯಲು ಸೀಮೆಯ
ವಿಶಾಲ ಬಯಲಿನಲ್ಲಿ
ಬೆತ್ತಲಾಗಿ ನಿಂತಿದೆ
ಸೋಮಾಲಿಯಾ….
ಎನ್ನುತ್ತಾರೆ.
ಹುಲಿಕಟ್ಟಿ ಚನ್ನಬಸಪ್ಪನವರ ಕಾವ್ಯ, ಕಥೆ,

ಆತ್ಮಕಥೆಗಳೇನೆನ್ನೇ ಬರೆದರೂ ಕೂಡ ಅದರ

ತಳಪಾಯದಲ್ಲಿ ಚಳುವಳಿಗಾರನ ಗಟ್ಟಿ ಬದ್ಧತೆಯನ್ನು ಮರೆಯುವಂತಿಲ್ಲ.
ಬಂದೂಕು ಬೇಕಿಲ್ಲ ನಮಗೆ
ಬುದ್ಧನ ತುಟಿಗಳಲ್ಲಿರುವ
ಪ್ರೀತಿಯ ನಗೆಯೊಂದೆ ಸಾಕು
ಎಂದು ಶಾಂತಿಯನ್ನು ಹಾರೈಸುವ ಹುಲಿಕಟ್ಟಿ ಚನ್ನಬಸಪ್ಪನವರ ಬದುಕು ಕೂಡ ಹಸನಾಗಲಿ.

 

ಚನ್ನಬಸಪ್ಪನವರೀಗ ಆತ್ಮಕಥೆ ಬರೆಯುವವರಿದ್ದಾರೆ… (Hulicatti Channabasappa)

ಇಷ್ಟು ದೊಡ್ಡ ಕಾವ್ಯ, ಕಥೆಗಳನ್ನು ಬರೆದ ಚನ್ನಬಸಪ್ಪನವರೀಗ ಆತ್ಮಕಥೆ ಬರೆಯುವವರಿದ್ದಾರೆಂದು ತಿಳಿಯಿತು.ಅವರ ಆತ್ಮಕಥೆಯೆಂದರೆ ಅದೊಂದು ಕಾಲಕಥನ. ೧೯೮೦ ರ ದಶಕದ ಚಳುವಳಿಗಳ ಕಾವು, ನೋವು , ನಲಿವುಗಳನ್ನು ದಾಖಲಿಸುವಂತಾಗಲಿ. ೨೦೦೮ ರಲ್ಲಿ ಸಿಐಟಿಯುನ , ಆಲ್ ಇಂಡಿಯಾ ಕಾನ್ಫರೆನ್ಸಲ್ಲಿ ಬಿಡುಗಡೆಯಾದ ಹಾಡುಗಳ ಇಡೀ ಸಿ.ಡಿ.ಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಹುಲಿಕಟ್ಟಿ ಚನ್ನಬಸಪ್ಪನವರ ಹಾಡುಗಳೇ ತುಂಬಿದ್ದವು. ಇಂಥಾ ಹುಲಿಯಂಥ ಹುಲಿಕಟ್ಟಿ ಚನ್ನಬಸಪ್ಪನವರು ವೈಯಕ್ತಿಕ ಬದುಕಿನಲ್ಲಿ ಅನೇಕ ಬೀಳುಗಳನ್ನು ಕಂಡರು.
ಸರ್ಕಾರಿ ವ್ಯವಸ್ಥೆಯಲ್ಲಿದ್ದುಕೊಂಡೆ ಚಳುವಳಿಗಳನ್ನು ಕಟ್ಟಿದರು.ಇವರೇ ಬೆಳೆಸಿದ ಚಳುವಳಿಕಾರರು ಮೇಲಕ್ಕೇರಿದ್ದನ್ನು ನೋಡಿ ಸಂತೋಷಪಟ್ಟರು. ಅವಕಾಶವಾದಿಗಳಾಗಿ ಸೈದ್ಧಾಂತಿಕ ಬದ್ಧತೆಗಳಿಗೆ ತಿಲಾಂಜಲಿಯಿಟ್ಟವರನ್ನೂ ವಿಷಾದದಿಂದಲೇ ನೋಡಿದರು.

ಗುಡಿಸಲೊಂದರಲ್ಲಿ ಎಷ್ಟೋ ಕಾಲ ವಾಸವಿದ್ದರೂ … (Hulicatti Channabasappa)

ಆ ಕಾಲಕ್ಕೆ ಪ್ರೇಮವಿವಾಹವಾಗಿ ಸಂಘರ್ಷಗಳನ್ನು ಎದುರಿಸಿದ ಕವಿ, ಮೇಷ್ಟ್ರುಮನೆಯ ಡಬರಿಗಳು ಎಷ್ಟೋ ಬಾರಿ ಖಾಲಿಬಿದ್ದು , ಉಪವಾಸ ಮಲಗಿದ್ದುಂಟು. ಮೇಷ್ಟ್ರಾಗಿಯೂ ಚನ್ನಬಸಪ್ಪನವರಿಗೆ ಬದುಕುವ ದಾರಿ ಗೊತ್ತಿಲ್ಲ ಎಂದು ಸಹಮಿತ್ರರೇ ದೂರವಾದರು. ಆದರೂ ಧೃತಿಗೆಡದ ಜೀವಕಾರುಣ್ಯದ ಕವಿ,ಸರ್ಕಾರಿ ಮೇಷ್ಟ್ರು,ಆಗಿಯೂ ಸಿರುಗುಪ್ಪದ ಸರ್ಕಾರಿ ಕಚೇರಿಯ ಕಂಪೌAಡೊAದಕ್ಕೆ ಆಸರೆಯಾಗಿ ತೆಂಗಿನ ಗರಿ ಕಟ್ಟಿಕೊಂಡು ಗುಡಿಸಲೊಂದರಲ್ಲಿ ಎಷ್ಟೋ ಕಾಲ ವಾಸಕ್ಕೆ ಇದ್ದರು!.

ಇದು ಕೇವಲ ಚಳುವಳಿಗಾರನ ಸ್ಥಿತಿಗತಿ ಮಾತ್ರವಾಗಿರದೆ , ಭಾರತದ ಚಳುವಳಿಗಳ ರೂಪಕದಂತೆಯೂ ಕಾಡಿದೆ. ಮಲಯಾಳಂ ಕತೆಗಾರ ಬಡಕಲು ಮೈಯ್ಯಿನ ಅರೆಬೆತ್ತಲೆಯ ಫಕೀರನಂತಿದ್ದ ವೈಕಂಪಾಡಿ ಬಷೀರ್ ಮತ್ತವರ ಸ್ಥಿತಪ್ರಜ್ಞತೆ ನೆನಪಾಗುತ್ತದೆ. ಕವಿ,ಮೇಷ್ಟ್ರು ಅತ್ಯಂತ ಸ್ಥಿತಪ್ರಜ್ಞನಂತೆ ಕಂಡರೂ ಆಳದ ಅಂತರಂಗದಲ್ಲಿ ಒಬ್ಬ ಮುಗ್ಧ ಬಾಲಕನೂ ಇದ್ದ.

ನಟ ಡಾ.ರಾಜಕುಮಾರರ ಪಕ್ಕಾ ಅಭಿಮಾನಿಯಾಗಿದ್ದು, ಅವರನ್ನು ನೋಡಲೇಬೇಕೆಂಬ ಹಂಬಲದೊAದಿಗೆ , ಹೇಗೋ ಏನೋ ಮಾಡಿ ಅಂದಿನ ಮದರಾಸು ತಲುಪಿ, ರಾಜಕುಮಾರನನ್ನು ಭೇಟಿಯಾದರೂ ಪಾರ್ವತಮ್ಮರ ಕಡೆ ಕೈದೋರಿ ಕಾರು ಹತ್ತಿ ಹೊರಟಾಗ, ಪಾರ್ವತಮ್ಮನವರು “ದಿನಾ…ನಿನ್ನಂತಹ ಸಾವಿರ ಜನ ಬರ್ತಾರೆ ಹೋಗಪ್ಪ “ಎಂದಾಗ, ತನ್ನ ಕನಸಿನ ರಾಜಕುಮಾರನನ್ನು ನೋಡಲಾಗಲಿಲ್ಲವಲ್ಲ ಎಂದು ನಿರಾಶೆಯಿಂದ ವಾಪಸು ಬರಲು ಕಾಸಿಲ್ಲದೆ, ಕಾಲ್ನಡಿಗೆಯಲ್ಲಿ ಊರಿಗೆ ಬಂದವರು! ಅಷ್ಟೇ ಅಲ್ಲ, ನಟನ ಕುರಿತಿದ್ದ ಅಭಿಮಾನವೂ ದಾರಿಯುದ್ದಕ್ಕೂ ಸೋರಿಹೋಗಿತ್ತು. ಅಷ್ಟೇ ಅಲ್ಲ, “ವಾಪಸು ಬರಲು ಬಸ್ಚಾರ್ಜು ಇಲ್ಲದಂಗ ಹೋಗಿದ್ದಿರಾ?”ಎಂದು ಈಗ ಕೇಳಿದರೂ ಸಹ “ಇಲ್ಲ..ಡಾ.ರಾಜಕುಮಾರ್ ಕೊಟ್ಟು ಕಳಿಸ್ತಾರೆ ಅಂತ ತಿಳ್ಕಂಡಿದ್ದೆ” ಎಂದು ಇಂದಿಗೂ ಅದೇ ಮುಗ್ಧತೆಯಲ್ಲಿ ಉತ್ತರಿಸುತ್ತಾರೆ.  ಎಂದಿಗೂ ಬದಲಾಗದ, ಬತ್ತಲಾರದ ಜೀವ ಹುಲಿಕಟ್ಟಿ ಚನ್ನಭಸಪ್ಪನವರದು.ನನ್ನಂತಹ ಸಾಮಾನ್ಯ ಓದುಗನ ಮನದಲ್ಲಿ ಉಳಿದ ಕವಿಗೆ ಶುಭವಾಗಲಿ.

ಬಿ.ಶ್ರೀನಿವಾಸ

TAGGED:Davangere NewsDinamaana hemmedinamaana.comKannada Newsಕನ್ನಡ ಸುದ್ದಿಕಾಂದಾವಣಗೆರೆ ಜಿಲ್ಲೆ .ದಿನಮಾನದಿನಮಾನ ಹೆಮ್ಮೆ
Share This Article
Twitter Email Copy Link Print
Previous Article Davanagere ಡಾ.ರಾಘವನ್‌ ಜಿ.ಡಿ.ಅವರಿಗೆ ಅಭಿಮಾನಿ ಬಳಗದಿಂದ ಸನ್ಮಾನ
Next Article BJP - karnataka ದಿನಮಾನ : ಸೀಕ್ರೆಟ್ ಟಾಸ್ಕ್ ಆಫ್ ಅಗರ್ವಾಲ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Crime news | ಆಟೋದಲ್ಲಿ ಲ್ಯಾಪ್‍ಟ್ಯಾಪ್ ಬಿಟ್ಟು ಹೋದ ಮಹಿಳೆ : 24 ಗಂಟೆಯಲ್ಲಿ ಪತ್ತೆ ಹಚ್ಚಿದ ಪೊಲೀಸ್

ದಾವಣಗೆರೆ (Davanagere): ಆಟೋದಲ್ಲಿ ಬಿಟ್ಟು ಹೋಗಿದ್ದ 70 ಸಾವಿರ ಮೌಲ್ಯದ ಲ್ಯಾಪ್‍ಟಾಪ್ ಅನ್ನು ವಾರಸ್ಸುದಾರರಿಗೆ ಅಜಾದನಗರ ಪೊಲೀಸರು ಹಸ್ತಾಂತರ ಮಾಡಿದ್ದಾರೆ.…

By Dinamaana Kannada News

Davanagere | ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಸೆ.25 (Davanagere) :  ಪ್ರಸಕ್ತ ಸಾಲಿನ ಕೈಮಗ್ಗ, ವಿದ್ಯುತ್ ಮಗ್ಗ, ಹಾಗೂ ಮಗ್ಗ ಪೂರ್ವ ಚಟುವಟಿಕೆಯಲ್ಲಿ ನೋಂದಣಿಯಾಗಿರುವ ನೇಕಾರರಿಗೆ…

By Dinamaana Kannada News

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

ಪ್ರಥಮ PUC ತರಗತಿಗಳ ಪ್ರವೇಶಕ್ಕೆ ದಾಖಲಾತಿ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು ಆದೇಶಿಸಿದೆ. ಈ ತರಗತಿಗಳ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?