ಹರಿಹರ: ಜನಸಂಖ್ಯಾ ಹೆಚ್ಚಳ ಅಭಿವೃದ್ದಿಗೆ ಮಾರಕವಾಗಲಿದೆ, ನಿಯಂತ್ರಣ ಮಾಡದಿದ್ದರೆ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಕಳವಳ ವ್ಯಕ್ತ ಪಡಿಸಿದರು.
ಆರೋಗ್ಯ ಇಲಾಖೆಯಿಂದ ನಗರದ ಹರ್ಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯಾ ಹೆಚ್ಚಳದ ಪರಿಣಾಮ ದೇಶದಲ್ಲಿ ವಸತಿ, ಶಿಕ್ಷಣ ಮತ್ತು ಇತರೆ ಸಂಪನ್ಮೂಲಗಳ ಕೊರತೆ. ವಾಯು. ಜಲ ಮತ್ತು ಶಬ್ದ ಮಾಲಿನ್ಯ. ನಗರಗಳಲ್ಲಿ ಕೊಳಚೆ ಪ್ರದೇಶಗಳ ಉಲ್ಬಣ, ಸಾರಿಗೆ ವ್ಯವಸ್ಥೆಯಲ್ಲಿ ಒತ್ತಡ ಹೆಚ್ಚಾಗುತ್ತದೆ, ಇವುಗಳಿಂದ ಮುಕ್ತಿ ಹೊಂದಲು ಜನಸಂಖ್ಯಾ ನಿಯಂತ್ರಣ ಪರಿಹಾರ ಎಂದರು.
ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಯ ಸಹಯೋಗದೊಂದಿಗೆ ಕುಟುಂಬ ಕಲ್ಯಾಣ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವುದರ ಮೂಲಕ ಜನಸಂಖ್ಯೆಯಲ್ಲಿ ಮಾಡಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಒಂದು ಬಂಡಿಯ ಎರಡು ಗಾಲಿಗಳಿದ್ದಂತೆ. ಒಂದು ಗಾಲಿ ಕುಂಠಿತಗೊಂಡರೆ, ಇನ್ನೊಂದು ಗಾಲಿಯಿಂದ ಬಂಡಿಯು ಸಾಗುವುದು ಆಸಾಧ್ಯ, ಆದ್ದರಿಂದ ಪ್ರತಿಯೊಂದು ಮಗುವಿಗೆ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಪಡೆದರೆ ತನ್ನಷ್ಟಕ್ಕೆ ತಾನೇ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್, ಮಾತನಾಡಿ ಜನಸಂಖ್ಯೆ ನಿಯಂತ್ರಿಸಲು ಮಹಿಳೆಯರಿಗೆ ನುಂಗುವ ಮಾತ್ರೆಗಳು. ವಂಕಿ ಅಳವಡಿಕೆ. ಅಂತರ ಚುಚ್ಚುಮದ್ದು. ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ. ಪುರುಷರಿಗಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾನಕ ಡಾ.ತಿಪ್ಪೇಸ್ವಾಮಿ ಮಾತನಾಡಿ, ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಆಚಾರ ಸಾಂಪ್ರದಾಯಗಳು ಕಾರಣವಾಗಿದೆ. ಶಿಕ್ಷಣ ಆಚಾರ ಸಾಂಪ್ರದಾಯಗಳು ಒಟ್ಟೊಟ್ಟಿಗೆ ಸಾಗಿದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ. ಆದರೆ ಶಿಕ್ಷಣ. ಆಚಾರ ಸಾಂಪ್ರದಾಯಗಳು ವಿರುದ್ಧ ದಿಕ್ಕಿನಲ್ಲಿ ನಡೆದರೆ ತನ್ನಷ್ಟಕ್ಕೆ ತಾನೆ ಜನಸಂಖ್ಯೆ ಹೆಚ್ಚಳಕ್ಕೆ ಕಾರಣೀಭೂತವಾಗುತ್ತದೆ.
ಭಾರತದ ಜನಸಂಖ್ಯೆಯು ಚೀನಾ ದೇಶದ ಜನಸಂಖ್ಯೆಗಿಂತ 16.852.250 ಹೆಚ್ಚಳವಾಗಿದೆ. ಚೀನಾ ದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ನೀಡಿ ಜನಸಂಖ್ಯಾ ನಿಯಂತ್ರಣವನ್ನು ಮಾಡಿದೆ. ಅವರ ಮಾದರಿಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರಗಳು ನಿಯಮವಳಿಯನ್ನು ಮಾಡಿದರೆ ಜನಸಂಖ್ಯೆಯ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನಗರಸಭಾ ಆವರಣ ದಿಂದ ಜನಸಂಖ್ಯಾ ಸ್ಪೋಟ ಜಾಗೃತಿ ಜಾಥಾಕ್ಕೆ ಶಾಸಕರು ಚಾಲನೆ ನೀಡಿದರು. ಜಾಥಾವು ಹಳೇ ಪಿ.ಬಿ. ರಸ್ತೆ, ಗಾಂಧಿ ವೃತ್ತ, ಹರಪನಹಳ್ಳಿ ರಸ್ತೆ ಮೂಲಕ ಸಾಗಿ ಹರ್ಲಾಪುರದ ಪ್ರಾಥಮಿಕ ಆರೋಗ್ಯಕ್ಕೆ ಬಂದು ತಲುಪಿತು.
ಕಾರ್ಯಕ್ರಮದಲ್ಲಿ ತಾಪಂ ಇಒ ರಾಮಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಶೀದಾ ಬಾನು, ಎಸೈ ವಿಜಯ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ನಾಗರಾಜ್, ಡಾ.ಕಲ್ಲೇಶ್, ಶಶಿಕಾಂತ್ ಹಾಗೂ ಇತರರಿದ್ದರು.