Kannada News | Dinamaanada Hemme | Dinamaana.com | 14-07-2024
ಪಿಂಜಾರ ಬೀದಿಯ ಪೀರ್ ಬಾಷಾ ಮತ್ತು ಬಿಚ್ಚುಗತ್ತಿ ಬೀದಿಯ ಲಪಾಟಿ ಖಾದರ್ ಬಾಷಾ ಈರ್ವರೂ ಏಕಕಾಲಕ್ಕೆ ಕವಿತೆ ಬರೆಯಲು ಸುರುಮಾಡಿದವರು.
1990 ರ ದಶಕದಿಂದ ಇಲ್ಲಿಯವರೆಗಿನ ಮೂರೂ ಮೂರೂವರೆ ದಶಕಗಳ ಅವಧಿಯಲ್ಲಿ ಹೀಗೆ ಸಾಗುವಾಗ ಯಾರು ಗೆದ್ದರು , ಯಾರು ಸೋತರು ಎಂಬುದು ಇಲ್ಲಿ ಮುಖ್ಯವಲ್ಲ.ಇಬ್ಬರ ಗುರುಮನೆಯೂ ಶೇಷಗಿರಿ ಎಂಬ ಸಂಗಾತಿಯೊಬ್ಬನ ಮನೆಯಾಗಿತ್ತು ಎಂಬುದಂತೂ ಸತ್ಯ.
ಶೇಷಗಿರಿ-ಈ ಹುಡುಗರ ಭಾವಕ್ಕೆ ಒದಗಿದ ಚೈತನ್ಯ (Khader Basha)
ಶೇಷಗಿರಿ-ಈ ಹುಡುಗರ ಭಾವಕ್ಕೆ ಒದಗಿದ ಚೈತನ್ಯವೇ ಆಗಿದ್ದರು.ಈ ಜಗತ್ತನ್ನು ಬಿಟ್ಟು ಕಾವ್ಯ ಬದುಕಲಾರದು ಎಂಬ ಅದಮ್ಯ ನಂಬಿಕೆಯಲ್ಲಿಯೇ ತಮ್ಮದೇ ಆದ ಅಭಿವ್ಯಕ್ತಿಯ ಭಾಷಾ ಕ್ರಮವನ್ನು ಹೊಂದಿ ನಿರಂತರ ಬರೆದರು.
ಭಾವೈಕ್ಯ ಕವನ ಸಂಕಲನ (Khader Basha)
ಪ್ರತಿಭಾವಂತರಾದ ಕವಿ ಖಾದರ್ ಬಾಷರಿಗೆ ಸಮಕಾಲೀನ ಆಸಕ್ತಿಗಳು ಬಹಳ ಎಂದೆನಿಸುತ್ತದೆ. ರಾಷ್ಟ್ರೀಯ ಭಾವೈಕ್ಯತೆಯ ಆಕಾಂಕ್ಷೆಯೊಂದಿಗೆ ಬೀದಿಗಿಳಿದು ಇಲ್ಲವಾದ ಸಫ್ದರ್ ಹಷ್ಮಿಅವರ ನೆನಪಿಗೆ “ಭಾವೈಕ್ಯ”ಎಂಬ ಕವನ ಸಂಕಲನವನ್ನು ನಾಡಿನ ಹಲವಾರು ಹೆಸರಾಂತ ಕವಿಗಳಿಂದ ಕವಿತೆಗಳನ್ನು ಆಯ್ದು ಸಂಪಾದಿಸುತ್ತಾರೆ. (ಮಲ್ಲಿಗೆ ಪ್ರಕಾಶನ: 1993)
ವಚನಗಳು ಚೌಪದಿಗಳ “ಭಾವೈಕ್ಯ ದೀಪ್ತಿ”(Khader Basha)
ಮಲ್ಲಿಗೆ ಪ್ರಕಾಶನ,ಬೀಚಿ ಗ್ರಂಥಾಲಯ ಬಳಗ , ಜಾನಪದ ಪರಿಷತ್ತು, ಸಾಹಿತ್ಯ, ಶಿಕ್ಷಣ ಎಂದೆಲ್ಲಾ ಸದಾ ಒಂದಿಲ್ಲೊಂದು ಕಾರ್ಯಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಎಲ್.ಖಾದರ್ ಬಾಷಾ ಅಪ್ಪಟ ಜಾತ್ಯತೀತವಾದಿ. ಭಾವೈಕ್ಯದ ಗಟ್ಟಿಸಂಬಂಧಗಳ ಬೇರುಗಳು ತಾನು ಉಂಡು,ಆಡಿ ಬೆಳೆದ ನೆಲದಲ್ಲಿ ಸಡಿಲವಾಗುತ್ತಿರುವುದನ್ನು ನೋಡಿ, ಖಾದರಲಿಂಗನನ್ನು ಧೇನಿಸುತ್ತಾರೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೌತಾಳಂ ನ ಭಾವೈಕ್ಯ ತಾಣ ಹಜರತ್ ಖಾದರಲಿಂಗ ಸ್ವಾಮಿಗಳಿಂದ ಪ್ರೇರಿತರಾಗಿ ಆಧುನಿಕ ವಚನಗಳು ಚೌಪದಿಗಳ “ಭಾವೈಕ್ಯ ದೀಪ್ತಿ”ಪ್ರಕಟಿಸುತ್ತಾರೆ.
ಪ್ರೀತಿ ಹಂಚಿಕೊಳ್ಳದ ಬಂಧುಗಳಿದ್ದೊಡೆ
ಬದುಕು ಬೇಸತ್ತು ತೃಣವಾಗುವುದು ನೋಡಾ!
ನೋವು ಹಂಚಿಕೊಳ್ಳದ ಬಂಧುಗಳಿದ್ದೊಡೆ
ಬದುಕೇ ಸತ್ತು ಒಂಟಿ ಪ್ರೇತ ವಾಗುವುದು ನೋಡ ಖಾದರಲಿಂಗ!!
ಹೂವಿನಹಡಗಲಿಯ ಬೀದಿಗಳಲ್ಲಿ ಹೋಳಿಹಬ್ಬದಂದು ಪ್ರಕಾಶರ ಮಗ ರವೀಂದ್ರ, ಸೋಮಣ್ಣರ ಮಗ ಶಶಿ, ಅಟವಾಳಿಗಿ ಡಾಕ್ಟರ್ ಮಗ ಕೊಟ್ರೇಶ್, ಸಾಬರ ಹುಡುಗರು, ಜೈನರ ಹುಡುಗರು, ಮಾರ್ವಾಡಿಗಳು, ಮಾದರ, ಬೆಸ್ತರ, ಕುರುಬರ ಹುಡುಗರೆಲ್ಲ ಸೇರಿ ಮೈಗೆ ಬಣ್ಣ ಸುರಿದುಕೊಂಡು ಹಲಗೆಬಾರಿಸುತ್ತ ಸಾಗುವ ದೃಶ್ಯ ನೆನಪಾಗುತ್ತದೆ. ಬದಲಾದ ಭಾರತದ ಪರಿಸ್ಥಿತಿಯಂತೆ ಹಡಗಲಿಯೂ ಬದಲಾಗಿದೆ.ಈ ಸ್ಥಿತ್ಯಂತರಗಳನ್ನು ಬಹುದುಖಿಯಾಗಿ ದಾಖಲಿಸುವ ಖಾದರಬಾಷನ ಒಳಗೆ ಭಾರತವನ್ನು ಕಳೆದುಕೊಳ್ಳುತ್ತಿರುವ ಗಾಢ ನೋವು ಇದೆ.
ವ್ಯಕ್ತಿಗತ ಏಕಾಂಗಿತನವನ್ನಪ್ಪಿದೊಡೆ
ವಿಕಲ್ಪಿತ ಬದುಕು ಬರಡು ಆಗುವುದು ನೋಡ!
ಮೌನದ ಬಂಗಲೆಯೊಳಗೆ ನೋವು ಮಡುಗಟ್ಟಿದೊಡೆ
ಬಂಗಾರದ ಬದುಕು ಬೆಂದು ಕಪ್ಪಿಟ್ಟೀತು ನೋಡ ಖಾದರಲಿಂಗ!
ಸೌಹಾರ್ದ ಭಾರತ “(Khader Basha)
ಕಳೆದ ಮೂರೂವರೆ ದಶಕಗಳಿಂದ ನಿರಂತರವಾಗಿ ಹೂವಿನಹಡಗಲಿಯ ಸೌಹಾರ್ದ ಪರಂಪರೆಯ ಶ್ರೀ ಗವಿಮಠ, ಕೊಂಬಳಿಯ ಗಾಡಿತಾತಾ ಮಠ, ದರ್ಗಾ, ಉರುಸು, ಜಾತ್ರೆಗಳನ್ನು ನೋಡುತ್ತಲೇ ಬೆಳೆದ ಖಾದರ್ ಗೆ ಇವೆಲ್ಲವೂ ಸೌಹಾರ್ದ ಭಾರತದ ಮಂಟಪಗಳಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.
Read also : ದಿನಮಾನ ಹೆಮ್ಮೆ : ಬೆಳಕ ಹೆಜ್ಜೆಯನ್ನರಸುವ ಕವಿ-ಊರಮುಂದಲ ಹರಿನಾಥ ಬಾಬು
ಪ್ರಸ್ತುತ ಹೂವಿನಹಡಗಲಿಯ ಬಡಾವಣೆಯೊಂದರಲ್ಲಿ ವಾಸಿಸುವ ಈ ಶಿಕ್ಷಕ ಮಿತ್ರ, ಮೊನ್ನೆ ದಿನ, ದೂರವಾಣಿಯಲ್ಲಿ ಮಾತನಾಡುತ್ತಾ…”ಶೇಷಗಿರಿ ಸರ್ ಹೋದ ಮ್ಯಾಲೆ ನಿಶ್ಯಕ್ತರಾಗೀವಿ , ಇದು ಕೇವಲ ಬರೆಹಕ್ಕ ಮಾತ್ರವೇ ಅಲ್ಲ….ಇಡೀ ದೇಶ,ಇಡೀ ರಾಜ್ಯ ನನ್ನದು, ಅಂತಿದ್ದವನ ಮನಸ್ಸಿನ ಮೇಲೆ ಅನಾಥಪ್ರಜ್ಞಿ ಮೂಡಿಸುತ್ತಿದೆ”.
ಬಿ.ಶ್ರೀನಿವಾಸ ದಾವಣಗೆರೆ