ದಾವಣಗೆರೆ (DAVANAGERE) : ತಾಲೂಕಿನ ಕಾಟೆಹಳ್ಳಿ ಗ್ರಾಮದಲ್ಲಿ ಗುರುವಾರ ವಿದ್ಯುತ್ ಅವಘಡದಿಂದ ದಂಪತಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಸಂಭವಿಸಿದ ಘಟನೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಒಂದೂವರೆ ಎಕರೆ ನೀರಾವರಿ ಜಮೀನಿನಲ್ಲಿ ಟೊಮೊಟೊ, ಕೋಸ್ ಬೆಳೆದಿದ್ದರು. ಲತಾ(೩೦), ನಾಗರಾಜ್(೩೫) ಗುರುವಾರ ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದ್ದರು. ಕಳೆದ ರಾತ್ರಿ ಧಾರಾಕಾರವಾಗಿ ಮಳೆ ಸುರಿದು, ಜಮೀನಿನಲ್ಲಿ ನೀರು ನಿಂತಿತ್ತು. ಟಿಸಿ ಹಾಕಿದ್ದ ವಿದ್ಯುತ್ ಕಂಬಗಳ ಗೈ ತಂತಿ ಬಳಿ ಹೋಗಿ ಮುಟ್ಟಿದ್ದರಿಂದ ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತ ದಂಪತಿಗೆ ೩ನೇ ತರಗತಿ ಓದುತ್ತಿರುವ ಸಾನ್ವಿ, ಯುಕೆಜಿ ಓದುತ್ತಿರುವ ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ಬೆಸ್ಕಾಂ ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ನೆರವಾದರು.
ಇದೇ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳಿಗೆ ಮೃತದಂಪತಿಯ ಮಕ್ಕಳಿಗೆ ಪರಿಹಾರ ನೀಡಲು ಸೂಚನೆ ನೀಡಿದರು.