ದಾವಣಗೆರೆ (Davanagere): ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಕ್ಕೆಯಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಸೆ.12ರಂದು ಏಕಕಾಲಕ್ಕೆ ಬೃಹತ್ ತಮಟೆ ಚಳವಳಿ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ತಮಟೆ ಚಳವಳಿಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆಯೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಸ್ವಾಗತಾರ್ಹವಾಗಿದ್ದು, ಈ ತೀರ್ಪನ್ನು ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನಗೊಳಿಸುವ ಮೂಲಕ ಪ.ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕು ಆಗ್ರಹಿಸಿದರು.
Read also : Political analysis | ಡಿಕೆಶಿಗೆ ಮಾತ್ರ ಸಿಎಂ ಹುದ್ದೆಯ ಛಾನ್ಸು?
ಕಳೆದ ಮೂರು ದಶಕಗಳಿಂದ ಒಳಮೀಸಲಾತಿಗಾಗಿ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿದೆ. ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ ಪ.ಜಾತಿಯ ಶೋಷಿತ ಸಮುದಾಯಗಳಲ್ಲಿ ಭರವಸೆ ಮೂಡಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಸಿಜೆಐ ಡಿ.ವೈ.ಚಂದ್ರಚೂಡರ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿದ್ದಂತಹ ಎಲ್ಲಾ ಗೊಂದಲಗಳನ್ನು ಪರಿಹರಿಸಿದೆ ಎಂದು ತಿಳಿಸಿದರು.
ದಾವಣಗೆರೆ ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಡಿಎಸ್ಸೆಸ್ ನೇತೃತ್ವದಲ್ಲಿ ಸೆ.12ರಂದು ಬೆಳಿಗ್ಗೆ 11 ಗಂಟೆಯಿಂದ ಬೃಹತ್ ತಮಟೆ ಚಳವಳಿ ಕೈಗೊಳ್ಳಲಾಗಿದೆ. ಅಂದು ಡಿಎಸ್ಸೆಸ್ ನೇತೃತ್ವದಲ್ಲಿ ಮಾದಿಗ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಮಟೆ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಒಳ ಮೀಸಲಾತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ದಾವಣಗೆರೆ ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರ ಸಂಚಾಲಕ ಪಿ.ಜೆ.ಮಹಾಂತೇಶ, ಜಿಲ್ಲಾ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಬೇತೂರು,ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಬಿ.ಚಿತ್ತಾನಹಳ್ಳಿ, ಮಹಿಳಾ ಸಂಚಾಲಕರಾದ ಕೆ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.