ಹರಿಹರ (Davanagere): ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಗಳ ಮೂಲಕ ಶಿಕ್ಷಕರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಬೆಳಕಿಗೆ ತರುವ ಕಾರ್ಯ ಮಾಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ನಗರದ ಸೆಂಟ್ ಮೇರಿಸ್ ಕಾನ್ವೆಂಟ್ ಶಾಲಾವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿರಳ ಅವಕಾಶಗಳಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹಂತ ಹಂತವಾಗಿ ನಡೆಯುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ರಾಜ್ಯದ ಮೂಲೆ ಮೂಲೆಗಳಿಂದಲೂ ಪ್ರತಿಭಾವಂತರನ್ನು ಗುರುತಿಸುವ ಕಾರ್ಯಕ್ರಮವಾಗಿದೆ. ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕೆಂದು ಆಶಿಸಿದರು.
ಪಠ್ಯ ಅಧ್ಯಯನದ ಜೊತೆ ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಕ್ರೀಡಾಸಕ್ತಿ, ಕಲಾಸಕ್ತಿಗಳನ್ನು ಪೋಷಿಸಿ ಬೆಳೆಸಲು ಪ್ರತಿಭಾ ಕಾರಂಜಿ ನೆರವಾಗಿದೆ. ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಜಾನಪದ ಕಲೆ, ಗಾಯನ, ಬಯಲಾಟ, ಯಕ್ಷಗಾನ, ಅಭಿನಯ, ನಿರ್ದೇಶನ ಮುಂತಾದ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರು, ಪೋಷಕರ ಜವಾಬ್ದಾರಿ ಎಂದು ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
Read also : Davanagere | ಲಕ್ಷ್ಮಣ್ ಬಿ. ಹೆಚ್. ಅವರಿಗೆ ಡಾಕ್ಟರೇಟ್ ಪದವಿ
ಮಕ್ಕಳಲ್ಲಿ ಅಡಗಿರುವ ಕಲೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ಬಲವರ್ಧನೆ ಕಾರ್ಯಕ್ರಮ ಆಯೋಜಿಸುತ್ತಿದೆ. ಇಂದಿನ ಪ್ರತಿಭಾ ಕಾರಂಜಿಯಲ್ಲಿ ತಾಲೂಕಿನ 10 ಸಮೂಹ ಸಂಪನ್ಮೂಲ ಕೇಂದ್ರಗಳ ವಿದ್ಯಾರ್ಥಿಗಳ ಭಾಗವಹಿಸಿದ್ದಾರೆ. ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿ ಪ್ರಥಮ ಸ್ಥಾನ ಪಡೆದರೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ನಗರಸಭೆ ಸದಸ್ಯ ಆಟೋ ಹನುಮಂತಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವೀರೇಶ್, ಚಂದ್ರಪ್ಪ, ಶರಣ್ ಕುಮಾರ್ ಹೆಗಡೆ, ಈಶಪ್ಪ ಬೂದಿಹಾಳ್, ಮಾಲತಿ ಮೆನನ್, ಪ್ರಭಾಕರ್ ಇದ್ದರು.