Kannada News | Dinamaana.com | 06-09-2024
ಹಾವನೂರು, ಬಸವಲಿಂಗಪ್ಪ ಮತ್ತು ಕೆ.ಎಚ್. ರಂಗನಾಥ್ ರಂತಹ ಜನಪರ ಕಾಳಜಿಯುಳ್ಳಂತವರು ದೇವರಾಜ ಅರಸು ಸಂಪುಟದಲ್ಲಿದ್ದುದು ಅವರು ಅನೇಕ ಪ್ರಗತಿಪರ ಶಾಸನಗಳನ್ನು ಜಾರಿಗೆ ತರಲು ಸಾಧ್ಯವಾಯಿತು.
ದೀನರು, ದುರ್ಬಲರು ಮತ್ತು ಸಮಾಜದ ಅಂಚಿನ ಸಮುದಾಯಗಳ ಕುರಿತಂತೆ ಅರಸು ಮತ್ತವರ ಸಂಪುಟದ ಸಹೋದ್ಯೋಗಿಗಳು ಯೋಚಿಸಿದ ರೀತಿಯನ್ನು ಗಮನಿಸಿದರೆ ಇಂದಿಗೂ ಆಶ್ಚರ್ಯವಾಗುತ್ತದೆ. ಜೀವನಕ್ಕೆ ಸಾಕಷ್ಟು ಆದಾಯವಿಲ್ಲದ ಸಣ್ಣಪುಟ್ಟ ಹಿಡುವಳಿದಾರರು,ಕೃಷಿ ಕಾರ್ಮಿಕರು, ಕುಂಬಾರರು, ಅಗಸರು, ಕಮ್ಮಾರರು ಮತ್ತಿತರ ಕಸುಬುದಾರ ಕುಟುಂಬಗಳು ಸಾಲದ ಶೂಲದಲ್ಲಿ ಸಿಕ್ಕಿವೆ ಎಂಬುದರ ಅರಿವು ಅರಸು ಮತ್ತವರ ಸಂಪುಟದ ಸಚಿವರಿಗೆ ಇತ್ತು.
ಬಡಜನರು ತಮ್ಮ ಬದುಕಿನ ಬಂಡಿ ಸಾಗಿಸಲು ಊರಿನ ಶ್ರೀಮಂತರಿಂದ ಸಾಲ ಪಡೆದು ಇದ್ದಬದ್ದುದನೆಲ್ಲ ಒತ್ತೆ ಇಡುತ್ತಿದ್ದರು. ತುಂಡು ಭೂಮಿಯಿದ್ದರೂ ಅದನ್ನೂ ಸಹ ಒತ್ತೆ ಇಡಲಾಗುತ್ತಿತ್ತು. ಮನೆಯಲ್ಲಿನ ಒಡವೆ ವಸ್ತುಗಳನ್ನು ಸಹ ಮಾರವಾಡಿ ಅಂಗಡಿಗಳಲ್ಲಿ ಒತ್ತೆ ಇಡುತ್ತಿದ್ದರು. ಹೀಗೆ ಶ್ರೀಮಂತರ ಹಂಗಿನಲ್ಲಿ ಬದುಕುವ ಬಡವರ ಸಾಲದ ಹೊರೆಯನ್ನು ಇಳಿಸುವ ನಿರ್ಧಾರಕ್ಕೆ ಮುಖ್ಯಮಂತ್ರಿ ಅರಸು ಬಂದರು ಇದರ ಹಿನ್ನೆಲೆಯಲ್ಲಿ ಹಾವನೂರು ಮತ್ತು ಕೆ.ಎಚ್. ರಂಗನಾಥರ ಸಂಕಟದ ಅನುಭವಗಳು ಇದ್ದವು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ.
1975 ರಲ್ಲಿ ಬಡಜನರು ಶ್ರೀಮಂತರಿಂದ ಪಡೆದಿದ್ದ ಎಲ್ಲಾ ಸಾಲವನ್ನೂ ಮನ್ನಾ ಮಾಡುವ ಶಾಸನವನ್ನು ಜಾರಿಗೆ ತಂದರು.ಇದನ್ನು ಸಾಲ ಮನ್ನಾ ಎಂದು ಕರೆಯದೆ ರೈತರ “ಋಣ ಸಂದಾಯ ಕಾಯಿದೆ”ಎಂದು ಕರೆದು ಗೌರವ ಸೂಚಿಸಿದ್ದು ಗಮನಾರ್ಹ ಸಂಗತಿ.
ಇದರ ಬೆನ್ನಲ್ಲೇ ಇದೇ ಸಂಪುಟವು ಇನ್ನೊಂದು ವಿಮೋಚನಾ ಸಮರವನ್ನು ಸಹ ಆ ಕಾಲದಲ್ಲಿ ಸಾರಿದರು.ಅದು ಹಳ್ಳಿಗಾಡಿನಲ್ಲಿ ಜೀವಂತವಾಗಿದ್ದ ಜೀತ ಪದ್ಧತಿಯ ನಿಷೇಧಕ್ಕೆ ಸಂಬಂಧಿಸಿದ, ಪ್ರಾಣಿಗಳಂತೆ ಮನುಷ್ಯರನ್ನೂ ಮಾರಾಟದ ವಸ್ತುಗಳಂತೆ ರೂಪುಗೊಂಡಿದ್ದ ಗುಲಾಮಗಿರಿ ಜೀತ ಪದ್ದತಿ ಅತ್ಯಂತ ಹೀನಾಯವಾದುದು.
ಕಡು ಬಡವರಾದ ಕೃಷಿ ಕೂಲಿ ಕಾರ್ಮಿಕರು ತಮ್ಮ ಹೊಟ್ಟೆ ಹೊರೆದುಕೊಳ್ಳಲು ಊರಿನ ಸಾಹುಕಾರರಿಂದ 200-300 ರೂಪಾಯಿಗಳಷ್ಟು ಸಾಲ ಪಡೆದು ಅದನ್ನು ತೀರಿಸಲು ಸಾಹುಕಾರನ ಮನೆಯಲ್ಲಿ ಜೀವನಪರ್ಯಂತ ತಮ್ಮ ಮಕ್ಕಳನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದರು.
ಸಾಯುವವರೆಗೂ ಈ ಮಕ್ಕಳು ಹೀಗೆಯೇ ದುಡಿಯಬೇಕಿತ್ತು.ಈ ದುಡಿತಕ್ಕೆ ವೇತನವೂ ಇರಲಿಲ್ಲ.ಸಾಹುಕಾರನ ಮನೆಯ ದನದ ಕೊಟ್ಟಿಗೆಯಲ್ಲಿ ವಾಸಮಾಡಬೇಕಾಗಿತ್ತು. ಮುಂದೆ ಎಸೆದ ಹಳಸಿದ ಅನ್ನ,ಅಥವಾ ಮುದ್ದೆಯನ್ನು ತಿಂದು ಜೀವನ ಸವೆಸುವುದೇ ಇಂತಹ ಸಾಲಿಗನ ಸ್ಥಿತಿಯಾಗಿತ್ತು.
ಒಂದು ವೇಳೆ, ಜೀತದಾಳು ತಂದೆ ಸತ್ತರೆ, ಆತನ ಮಗ ಜೀತ ಮಾಡಬೇಕಾಗುತ್ತಿತ್ತು. ಇಂತಹ ಹೀನ ಪದ್ದತಿಯನ್ನು ನಿಷೇಧಿಸುವ ಕಾನೂನು ರೂಪಿಸುವಲ್ಲಿ ಮತ್ತು ಜಾರಿ ಆಗುವಲ್ಲಿ ಅರಸು ಅವರಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಎಲ್.ಜಿ.ಹಾವನೂರು ಬಹು ಮುಖ್ಯವಾದವರು ಆಗಿದ್ದಾರೆ.
1974 ರಲ್ಲಿ ದೇವರಾಜ ಅರಸು ಇಡೀ ಭಾರತದಲ್ಲಿಯೇ ಯಾರೂ ಮಾಡದ ದಾಖಲೆಯ ಭೂ ಸುಧಾರಣಾ ಶಾಸನವನ್ನು ಜಾರಿಗೆ ತಂದರು.ಬಿಹಾರದಲ್ಲಿ ಕರ್ಪೂರಿ ಠಾಕೂರ್ ಪ್ರಯತ್ನಿಸಿದ್ದರಾದರೂ ಯಶ್ ಕಂಡಿರಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ ಕನಸಿನ ಭಾರತದಲ್ಲಿ “ಉಳುವವನೇ ಒಡೆಯ” ಆಗಿದ್ದನ್ನು ಅರಸು-ಹಾವನೂರರು ಅಕ್ಷರಶಃ ಜಾರಿಗೆ ತರಲು ಶ್ರಮಪಟ್ಟರು.
ಭೂ ಮಾಲೀಕತ್ವದ ಭಾರತಕ್ಕೆ ಐದು ಸಾವಿರ ವರ್ಷಗಳ ಇತಿಹಾಸವೇ ಇದೆ.ಇಂತಹ ಪರಂಪರೆಯುಳ್ಳ ದೇಶ ಮತ್ತು ಜಮೀನ್ದಾರಿ ಮನಸ್ಥಿತಿಯ ಜನರ ಮಧ್ಯೆ ಎಂತಹದ್ದೇ ಶಾಸನ ಬಂದರೂ ಅದನ್ನು ಪ್ರತಿಗಾಮಿ ಶಾಸನವನ್ನಾಗಿ ಪರಿವರ್ತಿಸುವ ತಾಕತ್ತಿರುವ ನಮ್ಮೀ ಸಾಮಾಜಿಕ ವ್ಯವಸ್ಥೆಯಲ್ಲಿ ಈ ತೆರನಾದ ಶಾಸನವೊಂದನ್ನು ಜಾರಿಗೆ ತಂದು, ಯಶಸ್ವಿಯಾದ ಅರಸುರವರ ಹಿಂದೆ ಅವರ ಸಾಮಾಜಿಕ ಕಳಕಳಿಯ ಜೊತೆಗೆ ಸದಾ ಇದ್ದವರು ಎಂದರೆ ಇದೇ ಲಕ್ಷ್ಮಣ ಜಿ.ಹಾವನೂರ್.
ಈ ಜೋಡಿ ಉಂಟು ಮಾಡಿದ ಮೋಡಿ ಒಂದೆರಡಲ್ಲ. ಸಾಮಾಜಿಕವಾಗಿ ಅಪ್ರತಿಷ್ಟಿತ ಜನಾಂಗಗಳಿಂದ ವ್ಯಕ್ತಿಗಳನ್ನು ಆಯ್ಕೆ ಮಾಡಿ ಶಾಸಕ ಸ್ಥಾನಕ್ಕೆ ಟಿಕೇಟ್ ನೀಡಿದ್ದು, ಆ ಮೂಲಕ ಹೊಸತನಕ್ಕೆ ನಾಂದಿ ಹಾಡುವಲ್ಲಿ ಹಾವನೂರರ ಶ್ರಮವನ್ನು ಕೂಡ ಸ್ಮರಿಸಬೇಕು.
ಇತ್ತ ಉತ್ತರ ಕರ್ನಾಟಕದಲ್ಲಿ ಹುಲಕೋಟಿ ಹುಲಿ ಎಂದೇ ಪರಿಚಿತರಾಗಿದ್ದ ಕೆ.ಎಚ್.ಪಾಟೀಲ ಮತ್ತವರ ಬೆಂಬಲಿಗರು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರೆದಿದ್ದರೂ ಅವರಿಗೆದುರಾಗಿ ಅಷ್ಟೇ ಸಮರ್ಥವಾಗಿ ಹಾವನೂರ್ ಹೊಸ ಹೊಸ ಪ್ರತಿಭೆಗಳಿಗೆ ಅದರಲ್ಲೂ ನಿರ್ಲಕ್ಷಿತ ಸಮುದಾಯಗಳ ಯುವಕರಿಗೆ ಟಿಕೇಟ್ ಕೊಡಿಸುವಲ್ಲಿ ಯಶಸ್ವಿಯೂ ಆದರು ಎಂಬುದರಲ್ಲಿ ಎರಡು ಮಾತಿಲ್ಲ.
ಅಂದಿನ ಸಂದರ್ಭದಲ್ಲಿ, ಉತ್ತರ ಕರ್ನಾಟಕ ಭಾಗದಿಂದ ಡಿ.ಕೆ.ನಾಯ್ಕರ(ಕುರುಬ)ಮನೋಹರ ತಹಶೀಲ್ದಾರ (ಬಲಿಜ)ಗುಲ್ಬರ್ಗದಿಂದ ದೇವೇಂದ್ರಪ್ಪ ಘೌಳಪ್ಪ (ಅಂಬಿಗ) ಬೆಳಗಾವಿಯಿಂದ ಆರ್.ಡಿ.ಕಿತ್ತೂರ್ (ಚಮ್ಮಾರ) ರಾಣೆಬೆನ್ನೂರಿನಿಂದ ಬಿ.ಜಿ.ತಳವಾರ (ನಾಯಕ) ಜಮಖಂಡಿಯಿಂದ ದೇಸಾಯಿ (,ಜೈನ)…ಹೀಗೆ ವೀರಪ್ಪ ಮೊಯ್ಲಿ (ಭೂತ ಕೋಲ ಕಟ್ಟುವ ಹಿಂದುಳಿದ ಜನಾಂಗ) ಎಸ್.ಎಂ.ಯಾಹ್ಯಾ (ಮುಸ್ಲಿಂ) ಮಲ್ಲಿಕಾರ್ಜುನ ಖರ್ಗೆ (ಚಲವಾದಿ),ಬಿ.ವಿ.ನಾಯಕ (ನಾಮಧಾರಿ), ಶಂಕರ ದೇವ , ಜಾಫರ್ ಶರೀಫ್,….ಹೀಗೆ ಪ್ರತಿಭೆಗಳ ಮಹಾಸಾಗರವನ್ನೇ ಅರಸು-ಹಾವನೂರ್ ಜೋಡಿ ಹುಡುಕಿದ್ದರು.
ಸಾಮಾಜಿಕವಾಗಿ ನಿರ್ಲಕ್ಷಿತ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಬಂದಂತಹ ಈ ಸಂದರ್ಭವೇ ಬೇರೆ.ಏನೂ ಇಲ್ಲದಿದ್ದ ಆ ಕಾಲದಲ್ಲಿ ಇಂತಹ ಪ್ರಯೋಗ ಮಾಡಿ ಕೇವಲ 29 – 30 ವರ್ಷದ ಯುವಕರು ಆ ಕಾಲಕ್ಕೆ ಸಚಿವ ಸಂಪುಟದಲ್ಲಿ ಸೇರಿದ್ದು , ನಾಯಕರಾಗಿ ಬೆಳೆದದ್ದು ಈಗ ಇತಿಹಾಸ.
ಇಂತಹದೊಂದು ಸಶಕ್ತ ಟೀಮು ಕಟ್ಟಿಕೊಂಡಿದ್ದ ಅರಸು-ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ.ದೇವೇಗೌಡರು ಮಾಡಿದ ಎರಡು ತಾಸಿಗೂ ಹೆಚ್ಚಿನ ಅವಧಿಯ ಆರೋಪಗಳಿಗೆ-ನಾಲ್ಕು ತಾಸಿಗೂ ಅಧಿಕ ಕಾಲ ಅರಸು ಉತ್ತರ ನೀಡಿದರು! ಇದು ಸಾಧ್ಯವಾಗಿದ್ದು “ಕ್ಯಾಸ್ಟ್ ಈಜ್ ನಾಟ್ ದಿ ಪ್ರಾಬ್ಲಮ್ ಆಫ್ ದ ಸೊಸೈಟಿ, ದಿ ಕ್ಲಾಸ್… ಕ್ಲಾಸ್ …..”ಎಂದು ಹೇಳುತ್ತಿದ್ದ ಹಾವನೂರ್ ಎಂಬ ಗ್ರಾಮೀಣ ಪ್ರತಿಭೆಯಿಂದ ಎಂಬುದನ್ನು ವರ್ತಮಾನ ನೆನಪಿಸಿಕೊಳ್ಳಬೇಕಿದೆ.
ಬಿ.ಶ್ರೀ ನಿವಾಸ . ದಾವಣಗೆರೆ
Read also : LG Havanur | ಅರಸು -ಹಾವನೂರ್ ಜೋಡಿ ಮಾಡಿದ ಮೋಡಿ